9 ವರ್ಷದ ಅಪ್ರಾಪ್ತನ ಬಂಧನ ಅಕ್ರಮವಲ್ಲ ಎಂದ ಜಮ್ಮು ಕಾಶ್ಮೀರ ಆಡಳಿತ

Update: 2019-10-01 14:18 GMT

ಹೊಸದಿಲ್ಲಿ, ಅ.1: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಯಾವ ಮಗುವನ್ನೂ ಕಾನೂನುಬಾಹಿರವಾಗಿ ಬಂಧಿಸಿಲ್ಲ ಎಂದು ರಾಜ್ಯ ಆಡಳಿತ, ಅಕ್ರಮ ಬಂಧನದ ಆರೋಪಗಳನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯ ನೇಮಿಸಿರುವ ನಾಲ್ಕು ಸದಸ್ಯರ ಸಮಿತಿಗೆ ತಿಳಿಸಿದೆ.

ಇದೇ ವೇಳೆ, ಆಗಸ್ಟ್ 5ರಿಂದಿ 144 ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದ್ದು ಇವರಲ್ಲಿ 9ರಿಂದ 11ರ ಹರೆಯದವರೆಗಿನ ಮಕ್ಕಳೂ ಇದ್ದಾರೆ ಎಂದು ಸರಕಾರ ಒಪ್ಪಿಕೊಂಡಿದೆ ಎಂದು ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ಮಂಗಳವಾರ ತಿಳಿಸಿದೆ. ರಾಜ್ಯ ಪೊಲೀಸರ ಪ್ರಕಾರ, ಅಪ್ರಾಪ್ತರನ್ನು ಕಲ್ಲೆಸೆತ, ದಂಗೆ, ಸಾರ್ವಜನಿಕ ಮತ್ತು ಖಾಸಗಿ ಸೊತ್ತಿಗೆ ಹಾನಿ ಮುಂತಾದ ಪ್ರಕರಣಗಳಲ್ಲಿ ಬಂಧಿಸಲಾಗಿದ್ದು ಅವರನ್ನು ವೀಕ್ಷಣ ಗೃಹಗಳಲ್ಲಿ ಇರಿಸಲಾಗಿದೆ. ಈ ವಿಷಯದಲ್ಲಿ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿರುವ ಪೊಲೀಸ್ ಇಲಾಖೆ, ಈ ವರದಿಗಳು ಪೊಲೀಸರ ಹೆಸರು ಕೆಡಿಸಲು ಮಾಡಿರುವ ಕೇವಲ ಕಾಲ್ಪನಿಕ ಊಹೆ ಮತ್ತು ಭಾವೋದ್ರೇಕ ಸೃಷ್ಟಿಯಾಗಿದೆ ಎಂದು ತಿಳಿಸಿದೆ.

ನ್ಯಾಯಾಧೀಶರಾದ ಎನ್.ವಿ ರಮಣ, ಆರ್.ಸುಭಾಶ್ ರೆಡ್ಡಿ ಮತ್ತು ಬಿ.ಆರ್ ಗವಾಯಿ ಅವರ ತ್ರಿಸದಸ್ಯ ಪೀಠದಿಂದ ಮಕ್ಕಳ ಹಕ್ಕುಗಳ ಹೋರಾಗಾರ್ತಿ ಏನಾಕ್ಷಿ ಗಂಗೂಲಿ ಮತ್ತು ಶಾಂತಾ ಸಿನ್ಹಾ ದಾಖಲಿಸಿದ್ದ ಮನವಿಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯಾಯಾಧೀಶ ಅಲಿ ಮುಹಮ್ಮದ್ ಮಗ್ರೆ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯ ವರದಿಯನ್ನು ಹಸ್ತಾಂತರಿಸಲಾಯಿತು. ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮಕ್ಕಳನ್ನು ಕಾನೂನುಬಾಹಿರವಾಗಿ ಬಂಧಿಸುತ್ತಿವೆ ಎಂದು ಏನಾಕ್ಷಿ ಗಂಗೂಲಿ ಆರೋಪಿಸಿದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸುವಂತೆ ಜಮ್ಮು ಮತು ಕಾಶ್ಮೀರ ಉಚ್ಚ ನ್ಯಾಯಾಲಯದ ಬಾಲಾಪರಾಧ ನ್ಯಾಯ ಸಮಿತಿಗೆ ಶ್ರೇಷ್ಟ ನ್ಯಾಯಾಲಯ ಸೂಚಿಸಿತ್ತು.

ಅಪ್ರಾಪ್ತರು/ಬಾಲಾಪರಾಧಿಗಳು ಕಲ್ಲೆಸೆತದಂತಹ ಘಟನೆಗಳಲ್ಲಿ ಭಾಗಿಯಾದಾಗ ಅವರನ್ನು ಕೆಲಹೊತ್ತು ಸ್ಥಳದಲ್ಲೇ ನಿಲ್ಲಿಸಿ ನಂತರ ಮನೆಗೆ ಕಳುಹಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಘಟನೆಗಳು ಕೈಮೀರಿ ಅತಿರೇಕಕ್ಕೆ ತಲುಪುತ್ತವೆ ಎಂಬ ಪೊಲೀಸರ ಹೇಳಿಕೆಯನ್ನು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News