ಇಂಕ್‌ಪಾಟ್ ಸಾಹಿತ್ಯ ಸಮ್ಮೇಳನಕ್ಕೆ ಅಂಕಣಕಾರ ಸುಹೇಲ್ ಸೇಠ್ ಅಲಭ್ಯ

Update: 2019-10-01 14:36 GMT

ಹೊಸದಿಲ್ಲಿ,ಅ.1: ತನ್ನ ಪೂರ್ವನಿಗದಿತ ಪ್ರವಾಸ ಕಾರ್ಯಕ್ರಮಗಳಿಂದಾಗಿ ಮತ್ತು ತಾನು ಶೀಘ್ರವೇ ತಂದೆಯಾಗುತ್ತಿರುವುದರಿಂದ ಸಾರ್ವಜನಿಕ ಸಂಪರ್ಕ ಸಮಾಲೋಚಕ ಹಾಗೂ ಅಂಕಣಕಾರ ಅವರು ನವೆಂಬರ್ 18ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಇಂಕಪಾಟ್ ಇಂಡಿಯಾ ಕಾಂಕ್ಲೇವ್ (ಐಐಸಿ) ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಹಲವಾರು ಮಹಿಳೆಯರಿಂದ ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಎದುರಿಸುತ್ತಿದ್ದರೂ ಐಐಸಿ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣಕಾರರಾಗಿ ಸೇಠ್ ಹೆಸರನ್ನು ಸೋಮವಾರ ಪ್ರಕಟಿಸಿದ ಬಳಿಕ ಟ್ವಿಟರ್‌ನಲ್ಲ್ಲಿ ವ್ಯಾಪಕ ಟೀಕೆಗಳು ಹರಿದಾಡಿದ್ದವು.

ಐಸಿಸಿ ಸೋಮವಾರ ಪ್ರಕಟಿಸಿದ್ದ ಭಾಷಣಕಾರರ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಕರಣ್ ಸಿಂಗ್,ಪತ್ರಕರ್ತೆ ತವ್ಲೀನ್ ಸಿಂಗ್ ಮತ್ತು ಇತಿಹಾಸ ತಜ್ಞ ವಿಲಿಯಂ ಡ್ಯಾಲ್‌ ರಿಂಪ್ಲೆ ಅವರ ಹೆಸರುಗಳೂ ಸೇರಿದ್ದವು. ಆದರೆ ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ತಾವು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತರೂರ್ ಮತ್ತು ಡ್ಯಾಲ್‌ರಿಂಪ್ಲೆ ಅವರು ಮಂಗಳವಾರ ತಿಳಿಸಿದ್ದಾರೆ.

ಮೀ ಟೂ ಅಭಿಯಾನದ ಸಂದರ್ಭದಲ್ಲಿ ನಾಲ್ವರು ಮಹಿಳೆಯರು ಸೇಠ್ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪವನ್ನು ಹೊರಿಸಿದ್ದರು. ಆಗ ಭೂಗತರಾಗಿದ್ದ ಸೇಠ್ ಈಗ ಅಭಿಯಾನವು ಕಾವು ಕಳೆದುಕೊಂಡ ಬಳಿಕ ಪುನಃ ಪ್ರತ್ಯಕ್ಷರಾಗಿದ್ದಾರೆ.

 ಭಾರತದಲ್ಲಿ ಮೀ ಟೂ ಅಭಿಯಾನವು ಉತ್ತುಂಗದಲ್ಲಿದ್ದಾಗ ಈ ಮಹಿಳೆಯರು ಸೇಠ್ ವಿರುದ್ಧ ಬಹಿರಂಗ ಆರೋಪಗಳನ್ನು ಮಾಡಿದ್ದರು. ಓರ್ವ ಅನಾಮಿಕ ಮಹಿಳೆಯ ಆರೋಪವನ್ನು ತಿರಸ್ಕರಿಸಿದ್ದ ಸೇಠ್ ತಾನು ಆ ಸಮಯ ವಿದೇಶದಲ್ಲಿದ್ದೆ,ಘಟನೆ ನಡೆದಿತ್ತು ಎನ್ನಲಾಗಿರುವ ಮುಂಬೈನಲ್ಲಿರಲಿಲ್ಲ ಎಂದು ಹೇಳಿದ್ದರು.

ಆ ಬಳಿಕ ಇತರ ಆರೋಪಗಳಿಗೆ ಅವರು ಉತ್ತರಿಸಿರಲಿಲ್ಲ ಮತ್ತು ಇನ್ನಿಬ್ಬರು ಮಹಿಳೆಯರು ತನ್ನ ವಿರುದ್ಧ ಲೈಂಗಿಕ ದುರ್ವರ್ತನೆ ಆರೋಪ ಮಾಡಿದ್ದ ಕಳೆದ ವರ್ಷದ ಅಕ್ಟೋಬರ್ 10ರಿಂದ ಒಂದೇ ಒಂದು ಟ್ವೀಟ್‌ನ್ನೂ ಅವರು ಪೋಸ್ಟ್ ಮಾಡಿಲ್ಲ. ಪ್ರಕರಣದಲ್ಲಿ ಇನ್ನಷ್ಟು ಆರೋಪಗಳು ನಂತರ ಕೇಳಿ ಬಂದಿದ್ದವು.

ಘಟನೆಯ ಬಳಿಕ ಸೇಠ್ ಸ್ಥಾಪಿಸಿದ್ದ ಕೌನ್ಸಲೇಜ್ ಇಂಡಿಯಾದೊಂದಿಗೆ ಟಾಟಾ ಸನ್ಸ್ ತನ್ನ ಗುತ್ತಿಗೆಯನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News