ಎನ್‌ಆರ್‌ಸಿ: ಅಂತಿಮ ಪಟ್ಟಿಯಿಂದ ಹೊರಗುಳಿದವರಿಗಾಗಿ ಕಾನೂನು ನೆರವು ಕೇಂದ್ರ ಆರಂಭ

Update: 2019-10-01 14:50 GMT

ಹೊಸದಿಲ್ಲಿ,ಅ.1: ಅಸ್ಸಾಮಿನಲ್ಲಿ ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ ಹೊರಗಿರಿಸಲಾಗಿರುವ 19 ಲಕ್ಷಕ್ಕೂ ಅಧಿಕ ಜನರಿಗೆ ನೆರವಾಗುವ ಉದ್ದೇಶದಿಂದ ಮಂಗಳವಾರ ದೇಶಾದ್ಯಂತದ ಲಾ ಸ್ಕೂಲ್‌ಗಳು ಪರಸ್ಪರ ಸಹಭಾಗಿತ್ವದಲ್ಲಿ ನೆರವು ಕೇಂದ್ರವನ್ನು ಆರಂಭಿಸಿವೆ.

 ‘ಪರಿಚಯ್’ ಎಂದು ಹೆಸರಿಸಲಾಗಿರುವ ನೆರವು ಕೇಂದ್ರವು ತಕರಾರು ಅರ್ಜಿಗಳ ಕ್ಲಿಯರಿಂಗ್ ಹೌಸ್‌ನಂತೆ ಕಾರ್ಯ ನಿರ್ವಹಿಸಲಿದೆ ಮತ್ತು ಎನ್‌ಆರ್‌ಸಿಯಿಂದ ಹೊರಗಿರಿಸಿರುವುದರ ವಿರುದ್ಧ ಮೇಲ್ಮವಿಗಳನ್ನು ಸಲ್ಲಿಸುವ ವಕೀಲರಿಗೆ ಸಂಶೋಧನಾ ನೆರವನ್ನು ಒದಗಿಸಲಿದೆ ಎಂದು ಹೇಳಿಕೆಯೊಂದು ತಿಳಿಸಿದೆ. ಅಸ್ಸಾಮಿನ ನ್ಯಾಷನಲ್ ಲಾ ಯೂನಿವರ್ಸಿಟಿ ಆ್ಯಂಡ್ ಜ್ಯುಡಿಷಿಯಲ್ ಅಕಾಡೆಮಿ,ಪ.ಬಂಗಾಳದ ನ್ಯಾಷನಲ್ ಯುನಿವರ್ಸಿಟಿ ಆಫ್ ಜ್ಯುರಿಡಿಕಲ್ ಸೈನ್ಸ್,ದಿಲ್ಲಿಯ ನ್ಯಾಷನಲ್ ಲಾ ಯುನಿವರ್ಸಿಟಿ,ಹೈದರಾಬಾದ್‌ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಮತ್ತು ಒಡಿಶಾದ ನ್ಯಾಷನಲ್ ಲಾ ಯುನಿವರ್ಸಿಟಿ ‘ಪರಿಚಯ್’ದಲ್ಲಿ ಪರಸ್ಪರ ಕೈಜೋಡಿಸಿರುವ ಸಂಸ್ಥೆಗಳಲ್ಲಿ ಸೇರಿವೆ. ತಮ್ಮೊಂದಿಗೆ ದಿಗೆ ಸಹಭಾಗಿತ್ವಕ್ಕಾಗಿ ಇತರ ಲಾ ಸ್ಕೂಲ್‌ಗಳೂ ಸಜ್ಜಾಗುತ್ತಿವೆ ಎಂದಿರುವ ಹೇಳಿಕೆಯು,ಮೇಲ್ಮನವಿಗಳನ್ನು ಸಿದ್ಧಗೊಳಿಸುವಲ್ಲಿ,ಕಾನೂನಿಗೆ ಸಂಬಂಧಿತ ಪ್ರಶ್ನೆಗಳ ಮೆಲೆ ಸಂಶೋಧನೆ ನಡೆಸಲು,ವಕೀಲರು ಮತ್ತು ಅವರ ಪೂರಕ ಸಿಬ್ಬಂದಿಗಳನ್ನು ತರಬೇತುಗೊಳಿಸಲು ಮತ್ತು ವಿದೇಶಿಯರ ನ್ಯಾಯಾಧಿಕರಣಗಳ ಕಾರ್ಯ ನಿರ್ವಹಣೆ ಕುರಿತು ದಾಖಲೀಕರಣವನ್ನು ಮಾಡಲು ‘ಪರಿಚಯ್ ’ ನೆರವಾಗಲಿದೆ.

ನ್ಯಾಯಾಧಿಕರಣಗಳಲ್ಲಿ ಪರಿಣಾಮಕಾರಿ ಮೇಲ್ಮನವಿಗಳನ್ನು ಸಲ್ಲಿಸಲು ಸಾಧ್ಯವಾಗುವಂತೆ ಕಾನೂನು ವಿದ್ಯಾರ್ಥಿಗಳೂ ವಕೀಲರ ಜೊತೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಸಮುದಾಯಗಳಿಗೆ ಕಾನೂನು ನೆರವು ಒದಗಿಸಲು ನಾಗರಿಕ ಸಮಾಜದೊಡನೆಯೂ ‘ ಪರಿಚಯ್ ’ ಸಹಭಾಗಿತ್ವ ಹೊಂದಿರಲಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News