ಉ.ಪ್ರ. ಮತ್ತು ಬಿಹಾರಗಳಲ್ಲಿ ನೆರೆಗೆ ಬಲಿಯಾದವರ ಸಂಖ್ಯೆ 151ಕ್ಕೇರಿಕೆ: ಇನ್ನಷ್ಟು ಮಳೆಯ ಮುನ್ಸೂಚನೆ

Update: 2019-10-01 15:14 GMT

 ಹೊಸದಿಲ್ಲಿ,ಅ.1: ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಹಲವಾರು ಭಾಗಗಳು ಮಂಗಳವಾರವೂ ನೆರೆನೀರಿನಿಂದ ಆವೃತವಾಗಿದ್ದು,ಕಳೆದ ವಾರದಿಂದ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 151ಕ್ಕೇರಿದೆ. ಈ ಪೈಕಿ 111 ಜನರು ಉ.ಪ್ರದೇಶದಲ್ಲಿ ಮೃತರಾಗಿದ್ದರೆ,ಬಿಹಾರದಲ್ಲಿ 40 ಸಾವುಗಳ ಪ್ರಕರಣಗಳು ವರದಿಯಾಗಿವೆ.

ಚಂಡಮಾರುತ ಪರಿಚಲನೆಯಿಂದಾಗಿ ಪಂಜಾಬಿನಿಂದ ದಕ್ಷಿಣ ಅಸ್ಸಾಮಿನವರೆಗೆ ಹಾಗೂ ಆಗ್ನೇಯ ಉ.ಪ್ರದೇಶ, ಬಿಹಾರ ಮತ್ತು ಹಿಮಾಲಯದ ತಪ್ಪಲಿನಲ್ಲಿರುವ ಪಶ್ಚಿಮ ಬಂಗಾಳದ ಭಾಗಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಮೀ.ಎತ್ತರದವರೆಗೆ ವಿಸ್ತರಿಸಿಕೊಂಡಿರುವ ವಾಯುಭಾರ ಕುಸಿತವು ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ.

ಈ ವರ್ಷ ಭಾರತದಲ್ಲಿ ಕಳೆದ 25 ವರ್ಷಗಳಲ್ಲಿಯೇ ಅಧಿಕ ಮಳೆ ಸುರಿದಿದೆ ಎಂದಿರುವ ಅದು,ಅ.10ರ ಸುಮಾರಿಗೆ ಮಳೆಗಾಲ ಅಂತ್ಯಗೊಳ್ಳಲಿದೆ ಎಂದಿದೆ.

ಕಳೆದ ಕೆಲವು ದಿನಗಳಿಂದ ಬಿಹಾರದ ರಾಜಧಾನಿ ಪಾಟ್ನಾ ಮತ್ತು ಇತರ 12 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಶನಿವಾರದಿಂದ ಸೋಮವಾರ ಬೆಳಿಗ್ಗೆಯವರೆಗೆ ರಾಜ್ಯದಲ್ಲಿ 370 ಮಿ.ಮಿ. ಮಳೆಯಾಗಿದ್ದು,ಪಾಟ್ನಾವೊಂದರಲ್ಲಿಯೇ 24 ಗಂಟೆಗಳಲ್ಲಿ 91 ಮಿ.ಮಿ. ಮಳೆ ಸುರಿದಿದೆ. ಮುಂದಿನ 24 ಗಂಟೆಗಳಲ್ಲಿ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು,ವೃದ್ಧರು ಮತ್ತು ರೋಗಿಗಳು ಸೇರಿದಂತೆ ಸುಮಾರು ಆರೇಳು ಸಾವಿರ ಜನರನ್ನು ಪ್ರದೇಶದಿಂದ ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿವೆ.

   ಅತ್ತ ಉತ್ತರ ಪ್ರದೇಶದ ಹಲವಾರು ಭಾಗಗಳಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಲಕ್ನೋ ಹವಾಮಾನ ಕೇಂದ್ರವು ತಿಳಿಸಿದೆ. ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ 294 ಮನೆಗಳಿಗೆ ಹಾನಿಯುಂಟಾಗಿದೆ ಎಂದು ರಾಜ್ಯ ಪರಿಹಾರ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News