ಸರ್ವೋಚ್ಚ ನ್ಯಾಯಾಲಯ ಎಸ್ಸಿ/ಎಸ್ಟಿ ಕಾಯ್ದೆಯಲ್ಲಿ ಮಾರ್ಗಸೂಚಿ ರೂಪಿಸಬಾರದಿತ್ತು: ನ್ಯಾಯಪೀಠ

Update: 2019-10-01 15:28 GMT

ಹೊಸದಿಲ್ಲಿ,ಅ.1: ಎಸ್ಸಿ/ಎಸ್ಟಿ ಕಾಯ್ದೆಯ ನಿಬಂಧನೆಗಳನ್ನು ಸಡಿಲಗೊಳಿಸಿ 2018ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರಕಾರ ದಾಖಲಿಸಿದ್ದ ಪರಿಷ್ಕರಣೆ ಮನವಿಯ ವಿಚಾರಣೆಗೆ ಶ್ರೇಷ್ಟ ನ್ಯಾಯಾಲಯ ಮಂಗಳವಾರ ಅವಕಾಶ ನೀಡಿದೆ.

ಎಸ್ಸಿ/ಎಸ್ಟಿ ಕಾಯ್ದೆ ಶಾಸಕಾಂಗ ವ್ಯಾಪ್ತಿಯಲ್ಲಿ ಬರುವುದರಿಂದ ನ್ಯಾಯಾಲಯ ಅದರ ಮಾರ್ಗಸೂಚಿಗಳನ್ನು ರೂಪಿಸಬಾರದಿತ್ತು ಎಂದು ಶ್ರೇಷ್ಟ ನ್ಯಾಯಾಲಯ ಅಭಿಪ್ರಾಯಿಸಿದೆ. ದೇಶದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪಂಗಡದ ಜನರ ಸಮಾನತೆ ಮತ್ತು ನಾಗರಿಕ ಹಕ್ಕುಗಳ ಹೋರಾಟ ಇನ್ನೂ ಕೊನೆಯಾಗಿಲ್ಲ ಮತ್ತು ಅವರು ಈಗಲೂ ಅಸಮಾನತೆಗೆ ಒಳಗಾಗುತ್ತಿದ್ದಾರೆ ಎಂದು ನ್ಯಾಯಾಧೀಶರಾದ ಅರುಣ್ ಮಿಶ್ರಾ, ಎಂ.ಆರ್ ಶಾ ಮತ್ತು ಬಿ.ಆರ್ ಗವಾಯಿ ಅವರ ಪೀಠ ತಿಳಿಸಿದೆ. ಅಸ್ಪಶ್ಯತೆ ಇನ್ನೂ ಕೊನೆಯಾಗಿಲ್ಲ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರಿಗೆ ಇನ್ನೂ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿಲ್ಲ ಎಂದು ನ್ಯಾಯಾಲಯ ಖೇದ ವ್ಯಕ್ತಪಡಿಸಿದೆ.

ಎಸ್ಸಿ/ಎಸ್ಟಿ ಕಾಯ್ದೆಯಲ್ಲಿ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳನ್ನು ಬಂಧಿಸಲು ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಿದ ತನ್ನ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಜೊತೆಗೆ ಎಫ್‌ಐಆರ್ ದಾಖಲಿಸುವುದಕ್ಕೂ ಮೊದಲು ಪ್ರಾಥಮಿಕ ತನಿಖೆಯ ಅಗತ್ಯವನ್ನೂ ನ್ಯಾಯಾಲಯ ರದ್ದುಗೊಳಿಸಿತು. ಕಳೆದ ವರ್ಷ ಮಾರ್ಚ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ, ಎಸ್ಸಿ/ಎಸ್ಟಿ ಕಾಯ್ದೆಯಡಿ ಸ್ವಯಂ ಬಂಧನ ಮತ್ತು ಪ್ರಕರಣ ದಾಖಲಿಸುವುದನ್ನು ನಿಷೇಧಿಸಿತ್ತು ಮತ್ತು ಈ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆಯುವ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿತ್ತು. ನ್ಯಾಯಾಲಯದ ಈ ಕ್ರಮ ತಜ್ಞರು ಮತ್ತು ರಾಜಕೀಯ ಪಕ್ಷಗಳಿಂದ ಟೀಕೆಗೊಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News