ಭಾರತ ಬಯಲು ಶೌಚಮುಕ್ತ ದೇಶವಾಗಿದೆ ಎನ್ನುವುದು ಸುಳ್ಳು

Update: 2019-10-02 16:58 GMT

ಹೊಸದಿಲ್ಲಿ, ಅ.2: ಮಹಾತ್ಮಾ ಗಾಂಧೀಜಿಯ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬುಧವಾರ ಗುಜರಾತ್‌ನ ಸಬರಮತಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಗ್ರಾಮೀಣ ಭಾರತ ಹಾಗೂ ಅದರ ಗ್ರಾಮಗಳು ಸ್ವತಃ ‘ಬಯಲು ಶೌಚ ಮುಕ್ತ’ ಎಂದು ಘೋಷಿಸಿಕೊಂಡಿವೆ ಎಂದು ತಿಳಿಸಿದ್ದಾರೆ. ಆದರೆ ಭಾರತ ವಾಸ್ತವದಲ್ಲಿ ಬಯಲು ಶೌಚಮುಕ್ತವಾಗಿದೆಯೇ? ಇಲ್ಲ ಎಂದು ಸರಕಾರಿ ಅಂಕಿಅಂಶಗಳೇ ಸಾಬೀತುಪಡಿಸುತ್ತವೆ ಎಂದು thewire.in ಆನ್‌ಲೈನ್ ಸುದ್ದಿ ಜಾಲತಾಣ ವರದಿ ಮಾಡಿದೆ.

ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ 2014ರಲ್ಲಿ ಮೊದಲ ಬಾರಿ ದಿಲ್ಲಿಯ ಕೆಂಪುಕೋಟೆಯ ಮೇಲೆ ನಿಂತು ಸ್ವಚ್ಛಭಾರತ ಅಭಿಯಾನ ಘೋಷಿಸಿದ್ದ ಮೋದಿ 2019ರಂದು ನಡೆಯಲಿರುವ ಗಾಂಧೀಜಿಯ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ದೇಶವನ್ನು ಸಂಪೂರ್ಣ ಬಯಲು ಶೌಚಮುಕ್ತಗೊಳಿಸಬೇಕು ಎಂದು ತಿಳಿಸಿದ್ದರು. ಅದರಂತೆ 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಸ್ವಚ್ಛಭಾರತ ಅಭಿಯಾನದಡಿ ದೇಶದಲ್ಲಿ ಹಿಂದಿನ ಎಲ್ಲ ಯೋಜನೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೂ ಭಾರತ ಎಷ್ಟರ ಮಟ್ಟಿಗೆ ಬಯಲು ಶೌಚಮುಕ್ತಗೊಂಡಿದೆ ಎಂಬ ಅಂಕಿಅಂಶದ ಬಗ್ಗೆ ಅನುಮಾನಗಳಿವೆ ಎಂದು ವರದಿ ತಿಳಿಸಿದೆ. ಸ್ವಚ್ಛಭಾರತ ದತ್ತಾಂಶದ ಪ್ರಕಾರ, ಸೆಪ್ಟಂಬರ್ 26ರಂದು ಎಲ್ಲ ಗ್ರಾಮಗಳು ತಮ್ಮನ್ನು ಬಯಲು ಶೌಚಮುಕ್ತ ಎಂದು ಘೋಷಿಸಿಕೊಂಡಿವೆ ಮತ್ತು ಶೇ.90 ಗ್ರಾಮಗಳು ಮೊದಲ ಹಂತದ ಪರಿಶೀಲನೆಗೊಳಪಟ್ಟಿವೆ. ಸದ್ಯ ಈ ಮಾಹಿತಿಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಥಕವಾಗಿದೆ. ಒಡಿಶಾದಲ್ಲಿ ಕೇವಲ ಶೇ.51 ಗ್ರಾಮಗಳಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ. ಬಿಹಾರದಲ್ಲಿರುವ 38,000 ಹಳ್ಳಿಗಳ ಪೈಕಿ ಶೇ.58ರಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ.

ಸ್ವಚ್ಛ ಭಾರತ ಅಭಿಯಾನ (ಎಸ್‌ಬಿಎಂ) ಮಾರ್ಗಸೂಚಿಯ ಪ್ರಕಾರ, ಒಂದು ಗ್ರಾಮವನ್ನು ಬಯಲು ಶೌಚಮುಕ್ತ (ಒಡಿಎಫ್) ಎಂದು ಘೋಷಿಸಬೇಕಾದರೆ ಗ್ರಾಮ ಸಭೆಯಲ್ಲಿ ನಿರ್ಣಯವನ್ನು ಜಾರಿ ಮಾಡಬೇಕು. ಈ ಮಾಹಿತಿಯನ್ನು ನಂತರ ಎಸ್‌ಬಿಎಂ ದತ್ತಾಂಶಕ್ಕೆ ಸೇರಿಸಲಾಗುವುದು ಮತ್ತು ಆ ಗ್ರಾಮವನ್ನು ಬಯಲು ಶೌಚಮುಕ್ತ ಎಂದು ಘೋಷಿಸಲಾಗುವುದು. ಬಯಲು ಶೌಚಮುಕ್ತ ಘೊಷಣೆಯ ಪರಿಶೀಲನೆಗೆ ನೀಡಲಾಗಿರುವ ಮಾರ್ಗಸೂಚಿಗಳಲ್ಲಿ ಕನಿಷ್ಟ ಎರಡು ಹಂತದ ಪರಿಶೀಲನೆಯನ್ನು ನಡೆಸಬೇಕು ಎಂದು ತಿಳಿಸಲಾಗಿದೆ. ಮೊದಲ ಹಂತದ ಪರಿಶೀಲನೆಯನ್ನು ಬಯಲುಶೌಚಮುಕ್ತ ಘೋಷಣೆಯ ಮೂರು ತಿಂಗಳ ಒಳಗೆ ನಡೆಸಲಾಗುವುದು ಮತ್ತು ಗ್ರಾಮ ಒಡಿಎಫ್‌ನಿಂದ ಹೊರಗೆ ಬಿದ್ದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಆರು ತಿಂಗಳ ನಂತರ ಎರಡನೇ ಹಂತದ ಪರಿಶೀಲನೆ ನಡೆಸಲಾಗುತ್ತದೆ. ಈ ಪರಿಶೀಲನೆಯನ್ನು ಮೂರನೇ ಪಕ್ಷ ಅಥವಾ ರಾಜ್ಯದ ತಂಡದಿಂದ ನಡೆಸಲಾಗುವುದು. ರಾಜ್ಯದ ತಂಡವೇ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನ್ಯಾಯಸಮ್ಮತ ಪರಿಶೀಲನೆ ನಡೆಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಮರುಪರಿಶೀಲನೆ ನಡೆಸಬೇಕಾಗುತ್ತದೆ. ಆದರೆ ಈ ನಿಯಮವನ್ನು ಈವರೆಗೂ ಪಾಲಿಸಲಾಗಿಲ್ಲ ಎಂದು thewire  ವರದಿ ಮಾಡಿದೆ. 

thewire.in ಸೆಪ್ಟಂಬರ್ 26ರಂದು ಸ್ವಚ್ಛ ಭಾರತ ಅಭಿಯಾನದ ದತ್ತಾಂಶವನ್ನು ಪರಿಶೀಲಿಸಿದಾಗ ಒಡಿಶಾದಲ್ಲಿ ಮೊದಲ ಹಂತದ ಪರಿಶೀಲನೆಗೊಳಪಟ್ಟ ಗ್ರಾಮಗಳ ಸಂಖ್ಯೆ 23,902 ಆಗಿತ್ತು. ನಾಲ್ಕು ದಿನಗಳ ನಂತರ, ಸೆಪ್ಟಂಬರ್ 30ರಂದು ಈ ಸಂಖ್ಯೆ ಶೇ.55 ಅಂದರೆ 37,008ಕ್ಕೆ ಏರಿಕೆಯಾಗಿತ್ತು. ಅದರರ್ಥ, ಒಡಿಶಾದಲ್ಲಿ ಕೇವಲ ನಾಲ್ಕು ದಿನಗಳಲ್ಲಿ 13,000 ಗ್ರಾಮಗಳಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ. ಅಂದರೆ, ದಿನವೊಂದಕ್ಕೆ 3,200 ಗ್ರಾಮಗಳು. ಪರಿಶೀಲನೆಯನ್ನು ಸರಿಯಾಗಿ ನಡೆಸಿದರೆ ಒಂದು ಗ್ರಾಮದ ಪರಿಶೀಲನೆಗೆ ಕನಿಷ್ಟ ಮೂರು ಗಂಟೆ ಬೇಕಾಗುತ್ತದೆ. ಹಾಗಾಗಿ ದೈಹಿಕವಾಗಿ ನಾಲ್ಕು ದಿನಗಳಲ್ಲಿ ಅಲ್ಲ ಒಂದು ತಿಂಗಳಲ್ಲೂ 13,000 ಗ್ರಾಮಗಳ ಪರಿಶೀಲನೆ ನಡೆಸುವುದು ಅಸಾಧ್ಯ. ದತ್ತಾಂಶವನ್ನು ನಿಜವೆಂದು ಭಾವಿಸಿದರೂ, ಒಡಿಶಾದಲ್ಲಿ 2018-19ರಲ್ಲಿ ಪರಿಶೀಲನೆ ನಡೆಸಿದ ಗ್ರಾಮಗಳಿಗಿಂತಲೂ ಹೆಚ್ಚು ಗ್ರಾಮಗಳನ್ನು ಕೇವಲ ನಾಲ್ಕು ದಿನಗಳಲ್ಲಿ ನಡೆಸಲಾಗಿದೆ. 2018-19ರ ಅವಧಿಯಲ್ಲಿ 11,679 ಗ್ರಾಮಗಳ ಪರಿಶೀಲನೆ ನಡೆಸಲಾಗಿತ್ತು. 2019-20ರಲ್ಲಿ ಪರಿಶೀಲನೆ ನಡೆಸಲಾದ ಗ್ರಾಮಗಳ ಪೈಕಿ ಶೇ.63ನ್ನು ಕೇವಲ ನಾಲ್ಕು ದಿನಗಳಲ್ಲಿ ನಡೆಸಲಾಗಿದೆ. ಅಂದರೆ ಪ್ರಧಾನಿ ಮೋದಿ ದೇಶವನ್ನು ಬಯಲು ಶೌಚಮುಕ್ತ ಎಂದು ಘೋಷಿಸುವ ವಾರಕ್ಕೂ ಮೊದಲ. ಇದೇ ನಾಲ್ಕು ದಿನಗಳಲ್ಲಿ ನೆರೆಪೀಡಿತ ಬಿಹಾರದಲ್ಲಿ 3,202 ಗ್ರಾಮಗಳ ಮತ್ತು ಉತ್ತರ ಪ್ರದೇಶದಲ್ಲಿ 3,850 ಗ್ರಾಮಗಳ ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ ಎಂದು ದತ್ತಾಂಶ ತಿಳಿಸಿದೆ. ಇನ್ನು ಎರಡನೇ ಹಂತದ ಪರಿಶೀಲನೆ ಕುರಿತು ಸರಕಾರದ ಅಂಕಿಅಂಶವನ್ನು ಗಮನಿಸಿದರೂ ಸರಕಾರದ ಹೇಳಿಕೆ ಬಗ್ಗೆ ಇನ್ನಷ್ಟು ಹೆಚ್ಚು ಅನುಮಾನ ಮೂಡುತ್ತದೆ. ದೇಶಾದ್ಯಂತವಿರುವ ಆರು ಲಕ್ಷ ಗ್ರಾಮಗಳ ಪೈಕಿ ಕೇವಲ ಶೇ.24ರಲ್ಲಿ ಮಾತ್ರ ಎರಡನೇ ಹಂತದ ಪರಿಶೀಲನೆ ನಡೆದಿದೆ. ಸ್ವಚ್ಛ ಭಾರತ ಅಭಿಯಾನದ ಪ್ರಕಾರ, ವಾಸ್ತವದಲ್ಲಿ ಈ ಹಂತ ಬಯಲು ಶೌಚಮುಕ್ತ ಸ್ಥಾನಮಾನ ಕಾಪಾಡಲು ಈ ಹಂತ ಬಹಳ ಮುಖ್ಯವಾಗಿದೆ. ಇಲ್ಲವಾದಲ್ಲಿ ಗ್ರಾಮಗಳು ಒಡಿಎಫ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ತನ್ನ ವರದಿಗಾರರು ಗ್ರಾಮಗಳ ಪರಿಶೀಲನೆ ನಡೆಸಿದಾಗ 2017ರಲ್ಲಿ ಬಯಲು ಶೌಚಮುಕ್ತ ಎಂದು 2017ರಲ್ಲಿ ಘೋಷಿಸಲ್ಪಟ್ಟ ಹಲವು ಗ್ರಾಮಗಳ ಅನೇಕ ಮನೆಗಳಲ್ಲಿ ಶೌಚಾಲಗಳೇ ಇರಲಿಲ್ಲ. ಒಂದೋ ಶೌಚಾಲಯಗಳನ್ನು ನಿರ್ಮಿಸಲೇ ಇಲ್ಲ ಅಥವಾ ಬಳಕೆಗೆ ಬಾರದಂತೆ ಕಳಪೆಯಾಗಿ ನಿರ್ಮಿಸಲಾಗಿದೆ. ಕೆಲವೊಂದು ಶೌಚಾಲಯಗಳು ಈಗಲೇ ಕುಸಿದು ಬಿದ್ದಿವೆ ಎಂದು thewire.in ವರದಿ ಮಾಡಿದೆ.

ಎರಡನೇ ಹಂತದ ಪರಿಶೀಲನೆಯನ್ನು ಮಾರ್ಗಸೂಚಿಯಲ್ಲಿ ತಿಳಿಸಿದ ರೀತಿಯಲ್ಲಿ ನಡೆಸಲಾಗಿಲ್ಲ. ಉತ್ತರ ಪ್ರದೇಶದ 97,000ಕ್ಕೂ ಅಧಿಕ ಗ್ರಾಮಗಳ ಪೈಕಿ ಕೇವಲ ಶೇ.10ರಲ್ಲಿ ಎರಡನೇ ಹಂತದ ಪರಿಶೀಲನೆ ನಡೆಸಲಾಗಿದೆ. ಒಡಿಶಾದ 47,000 ಗ್ರಾಮಗಳ ಪೈಕಿ ಒಂದೂ ಗ್ರಾಮದ ಎರಡನೇ ಹಂತದ ಪರಿಶೀಲನೆ ನಡೆಸಲಾಗಿಲ್ಲ. ಒಟ್ಟಾರೆಯಾಗಿ, ಹತ್ತು ರಾಜ್ಯಗಳಲಿ ಎರಡನೇ ಹಂತದ ಪರಿಶೀಲನೆ ನಡೆಸಲಾಗಿಲ್ಲ ಎಂದು ವರದಿ ತಿಳಿಸಿದೆ. ಇನ್ನೊಂದು ಆಘಾತಕಾರಿ ಅಂಶವೆಂದರೆ ದತ್ತಾಂಶದಿಂದ ಮನೆಗಳನ್ನೇ ಅಳಿಸಿ ಹಾಕಿರುವುದು. ಕಳೆದ ವರ್ಷ ದಿವೈರ್ ಈ ವಿಷಯದ ಕುರಿತು ವರದಿ ಮಾಡಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಅಕ್ಟೋಬರ್ 1, 2018ರಲ್ಲಿದ್ದ ದತ್ತಾಂಶದಲ್ಲಿದ್ದ ವಿವರಗಳನ್ನು ಹಾಗೆಯೇ ಉಳಿಸಿಕೊಂಡಿತ್ತು. ಆ ದತ್ತಾಂಶ ಮತು ಈಗಿನ ದತ್ತಾಂಶವನ್ನು ಪರಸ್ಪರ ಹೋಲಿಸಿದಾಗ ಶೌಚಾಲಯವಿದ್ದ ಮತ್ತು ಇಲ್ಲದ ಒಟ್ಟು ಮನೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಉತ್ತರ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ 1,58,051ರಷ್ಟು ಮನೆಗಳು ಕಡಿಮೆಯಾಗಿವೆ.

ಈ ಕುರಿತು ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಸಾಧಿಸಬೇಕಾದ ಗುರಿ ಅತ್ಯಂತ ಕಠಿಣವಾಗಿದ್ದರಿಂದ ಈ ರೀತಿ ಮಾಡಲಾಗಿದೆ. ಮೂಲ ಸಮೀಕ್ಷೆಯಲ್ಲಿ ಗುರುತಿಸಲಾಗಿದ್ದ ಮನೆಗಳನ್ನು ಅಳಿಸಿ ಹಾಕುವ ಮೂಲಕ ಗುರಿಯನ್ನೇ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

thewire2012ರಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಮೂಲಹಂತದ ಸಮೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ ಶೌಚಾಲಯ ಹೊಂದಿದ್ದ ಮನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗಿತ್ತು. ಹೀಗೆ ಲೆಕ್ಕ ಹಾಕಲಾದ ಮನೆಗಳ ಸಂಖ್ಯೆ ಬದಲಾಗುವ ಸಾಧ್ಯತೆಗಳೇ ಇಲ್ಲ. ಆದರೆ ಸರಕಾರ ದತ್ತಾಂಶವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಇದರಲ್ಲೂ ಮನೆಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದು ಕಂಡುಬಂದಿದೆ. ಕಳೆದ ವರ್ಷ ಇದ್ದ ಶೌಚಾಲಯ ಹೊಂದಿದ್ದ ಮನೆಗಳ ಸಂಖ್ಯೆಯಲ್ಲಿ ಈ ವರ್ಷ 1,03,768 ಕಡಿಮೆಯಾಗಿದೆ ಎಂದು ದಿವೈರ್ ನಡೆಸಿದ ಪರಿಶೀಲನೆಯಲ್ಲಿ ಬಹಿರಂಗವಾಗಿದೆ. ಸದ್ಯ ಅಸ್ತಿತ್ವದಲ್ಲಿದ್ದ ಶೌಚಾಲಯಗಳನ್ನು ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾಗಿದೆ ಎಂದು ಬಿಂಬಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾರಣಾಸಿಯಲ್ಲಿ 10,790 ಮನೆಗಳು ಮತ್ತು ಬಸ್ತಿಯಲ್ಲಿ 27,917 ಮನೆಗಳನ್ನು ಈ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಸ್ವಚ್ಛ ಭಾರತ ಯೋಜನೆಯ ಅಂಕಿಅಂಶಗಳು ಸಂಪೂರ್ಣ ಕಟ್ಟುಕತೆ. ಇಡೀ ದತ್ತಾಂಶವನ್ನು ಹೇಗಾದರೂ ಮಾಡಿ ಗುರಿಯನ್ನು ಸಾಧಿಸಲಾಗಿದೆ ಎನ್ನುವುದನ್ನು ತೋರಿಸಲೆಂದು ರಚಿಸಲಾಗಿದೆ. ವಾಸ್ತವದಲ್ಲಿ, ಸರಕಾರ ಹೇಳಿಕೊಂಡಿರುವುದಕ್ಕಿಂತ ಶೇ.40 ಮಾತ್ರ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಈ ಯೋಜನೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಯೊಬ್ಬರು ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News