‘ಜಾತಿವಾರು ಜನಗಣತಿ’ ವರದಿ ತಿರಸ್ಕಾರ ಸಾಧ್ಯತೆ

Update: 2019-10-02 17:02 GMT

ಬೆಂಗಳೂರು, ಅ. 2: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 195 ಕೋಟಿ ರೂ.ವೆಚ್ಚದಲ್ಲಿ ನಡೆಸಿದ್ದ ಮಹತ್ವಕಾಂಕ್ಷೆಯ ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸಲು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

‘ಜಾತಿ ಗಣತಿ’ ವರದಿ ಅಂಗೀಕಾರ, ಬಹಿರಂಗ ಅಥವಾ ತಿರಸ್ಕಾರ ವಿಚಾರ ಸಂಬಂಧ ರಾಜ್ಯದಲ್ಲಿ ಐದಾರು ವರ್ಷಗಳಿಂದ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಇದೀಗ ವರದಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ ಸರಕಾರ ನುಣುಚಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.

ನಾಳೆ(ಅ.3) ಸಿಎಂ ಬಿಎಸ್‌ವೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

‘ದೇಶದ ಯಾವುದೇ ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಸರಕಾರಿ ಸೌಲಭ್ಯಗಳ ಸಮರ್ಪಕ ಹಂಚಿಕೆ ಆಗುತ್ತಿಲ್ಲ. ಆದುದರಿಂದ ಜಾತಿವಾರು ಜನಸಂಖ್ಯೆ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ತಿಳಿಯಲು ಮಹತ್ವದ ಸಮೀಕ್ಷೆ ಕೈಗೊಳ್ಳಲಾಗಿತ್ತು’ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಈ ಮಧ್ಯೆ ಜಾತಿವಾರು ಜನಗಣತಿ ಸಮೀಕ್ಷೆ ಅಪೂರ್ಣವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಧಿಕೃತವಾಗಿ ವರದಿ ಬಿಡುಗಡೆಯಾಗದೆ ಇದ್ದರೂ, ಅನಧಿಕೃತವಾಗಿ ಮಾದ್ಯಮಗಳ ಮೂಲಕ ವರದಿ ಸೋರಿಕೆಯಾಗಿತ್ತು. ಅದರಲ್ಲಿ ಕೆಲವು ಜಾತಿಗಳ ಜನಸಂಖ್ಯೆಯ ಮಾಹಿತಿಗಳು ಹರಿದಾಡಿದ್ದು, ವಿವಾದಕ್ಕೂ ಕಾರಣವಾಗಿತ್ತು. ‘ಜಾತಿ ಸಮೀಕ್ಷಾ ವರದಿ ಅವೈಜ್ಞಾನಿಕವಾಗಿದೆ, ಸಮರ್ಪಕವಾಗಿ ಸಮೀಕ್ಷೆ ನಡೆದಿಲ್ಲ, ಸಮೀಕ್ಷೆ ಹಿಂದೆ ರಾಜಕೀಯ ದುರುದ್ದೇಶವಿದೆ’ ಎಂಬ ಕಾರಣಗಳನ್ನು ನೀಡಿ ಸಚಿವ ಸಂಪುಟದಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿ ವರದಿ ತಿರಸ್ಕರಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಆಕ್ಷೇಪ: ಜಾತಿ ಗಣತಿ ವರದಿಯನ್ನು ತಿರಸ್ಕರಿಸುವುದು ಸರಿಯಲ್ಲ. ಕೂಡಲೇ ವರದಿಯನ್ನು ಅಂಗೀಕರಿಸಿ, ಬಹಿರಂಗಪಡಿಸಬೇಕು. ಸಮೀಕ್ಷಾ ಮಾಹಿತಿಯನ್ನು ಬಳಸಿಕೊಂಡು ಸರಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News