ದಾವೂದ್ ನ ಮಾಜಿ ಸಹಚರನೊಂದಿಗೆ ಕಾಣಿಸಿಕೊಂಡ ಶಿವಸೇನೆ ಅಭ್ಯರ್ಥಿ, ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ

Update: 2019-10-03 12:07 GMT

ಮುಂಬೈ: ನಲ್ಲಸೊಪರ ಕ್ಷೇತ್ರದಿಂದ ಶಿವಸೇನೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ ಮಂಗಳವಾರ ನಡೆಸಿದ ರ್ಯಾಲಿಯಲ್ಲಿ ದಾವೂದ್ ಇಬ್ರಾಹಿಂನ ಮಾಜಿ ಸಹಚರ ಶ್ಯಾಮ್ ಕಿಶೋರ್ ಗರಿಕಪಟ್ಟಿ ಕೂಡ ಕಾಣಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಿರಿಯ ಪೊಲೀಸ್ ಇನ್‍ಸ್ಪೆಕ್ಟರ್ ಹುದ್ದೆಯಲ್ಲಿದ್ದ ಪ್ರದೀಪ್ ಕಳೆದ ತಿಂಗಳಷ್ಟೇ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದರು.

ತಮ್ಮ ರ್ಯಾಲಿಯಲ್ಲಿ ಗರಿಕಪಟ್ಟಿ ಕಾಣಿಸಿಕೊಂಡಿರುವ ಕುರಿತಂತೆ ಎದ್ದಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ಶರ್ಮ, "ದಾವೂದ್ ಗ್ಯಾಂಗ್‍ನ ವ್ಯಕ್ತಿಗಳು ನಲ್ಲಸೊಪರದಲ್ಲಿ ಇದ್ದಾರೆಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ, ಆತನನ್ನು ನಾನು ಹಿಂದೆ ಹಲವು ಬಾರಿ ಬಂಧಿಸಿದ್ದೇನೆ. ನನ್ನ ರ್ಯಾಲಿಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಮಂಗಳವಾರ ಆತನನ್ನು ನಾನು ಗಮನಿಸಿಲ್ಲ,'' ಎಂದಿದ್ದಾರೆ.

ಜನರು ಏನು ಬೇಕಾದರೂ ಹೇಳಿಕೊಳ್ಳಲಿ ಎಂದ ಶರ್ಮ "ಗರಿಕಪಟ್ಟಿ ನನ್ನ ಜತೆ ಮಾತನಾಡಿ ತೆರಳಿರಬಹುದು. ಆತನ ಬೆಂಬಲ ನನಗೆ ಬೇಕಾಗಿಲ್ಲ. ಆತ ಈ ಪ್ರದೇಶದಲ್ಲಿ ವರ್ಷಗಳಿಂದ ದಬ್ಬಾಳಿಕೆ ನಡೆಸುತ್ತಿರುವ ಹಿತೇಂದ್ರ ಠಾಕುರ್ ಹಾಗೂ ಭಾಯಿ ಠಾಕುರ್ ಸ್ನೇಹಿತನಾಗಿದ್ದಾನೆ. ನಾನು ಈ ಕ್ಷೇತ್ರದಿಂದ ಆರಿಸಿ ಬಂದರೆ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇನೆ,'' ಎಂದು ಹೇಳಿದ್ದಾರೆ.

ಅತ್ತ ಶ್ಯಾಮ್ ಕಿಶೋರ್ ಗರಿಕಪಟ್ಟಿ ಪ್ರತಿಕ್ರಿಯಿಸಿ, "ನಾನು ಬಹುಜನ್ ವಿಕಾಸ್ ಅಘಡಿ ಮುಖ್ಯಸ್ಥ ಹಿತೇಂದ್ರ ಠಾಕುರ್ ಭೇಟಿಯಾಗಲು ತೆರಳಿದ್ದ ಸಂದರ್ಭ ರ್ಯಾಲಿ ಹಾದು ಹೋಗುತ್ತಿತ್ತು, ಶರ್ಮ ಬಗ್ಗೆ ಗೌರವವಿದೆ. ಆವರ ರ್ಯಾಲಿಯೆಂದು ತಿಳಿದು ಅವರ ಜತೆ ಮೂರ್ನಾಲ್ಕು ನಿಮಿಷ ಇದ್ದ ಸಂದರ್ಭ ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ನಂತರ ಠಾಕುರ್ ಕೂಡ ನನಗೆ ಕರೆ ಮಾಡಿ ಏನು ನಡೆಯುತ್ತಿದೆ ಎಂದು ಕೇಳಿದ್ದರು'' ಎಂದು  ಹೇಳಿದ್ದಾನೆ.

ಆದರೆ ತಾನು ಗರಿಕಪಟ್ಟಿಗೆ ಕರೆ ಮಾಡಲೇ ಇಲ್ಲ ಎಂದು ಠಾಕುರ್ ಹೇಳಿಕೊಂಡಿದ್ದಾರೆ.

ಈ ವಿವಾದ ಕುರಿತಂತೆ ಮಾತನಾಡಿದ ಬಿವಿಎ ಸಂಸದ ಕ್ಷಿತಿಜ್ ಠಾಕುರ್ ತಮ್ಮ ಕ್ಷೇತ್ರದಲ್ಲಿ ದಾವೂದ್ ಗ್ಯಾಂಗ್ ನ ಮಾಜಿ ಸದಸ್ಯ ಕಾಣಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News