​ಉನ್ನಾವೊ ಅತ್ಯಾಚಾರ: ಮತ್ತೆ ಮೂವರ ವಿರುದ್ಧ ಆರೋಪಪಟ್ಟಿ

Update: 2019-10-04 04:14 GMT

ಹೊಸದಿಲ್ಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಸಂಬಂಧ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ನಿಕಟವರ್ತಿಗಳಾದ ಶುಭಂಸಿಂಗ್, ಮಗ ಶಶಿ ಸಿಂಗ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಗುರುವಾರ ಆರೋಪಪಟ್ಟಿ ಸಲ್ಲಿಸಿದೆ.

ಸೆಂಗಾರ್ ಅತ್ಯಾಚಾರ ಎಸಗಿದ್ದಾನೆ ಎನ್ನಲಾದ ದಿನದ ಏಳು ದಿನಗಳ ಬಳಿಕ ಅಂದರೆ 2017ರ ಜೂನ್ 11ರಂದು, ಮೂವರು ಅರೋಪಿಗಳು ಸಂತ್ರಸ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಶುಭಂ ಸಿಂಗ್, ನರೇಶ್ ತಿವಾರಿ ಮತ್ತು ಬೃಜೇಶ್ ಯಾದವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದನ್ನು ಸಿಬಿಐ ಅಧಿಕಾರಿಗಳು ದೃಢಪಡಿಸಿದ್ದಾರೆ. ಸೆಂಗಾರ್ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ದಿನದ ಒಂದು ವಾರ ಬಳಿಕ ಮೂವರೂ ಸೇರಿ ಬಾಲಕಿಯನ್ನು ಅಪಹರಿಸಿ, ಚಲಿಸುವ ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪಪಟ್ಟಿಗೆ ಪೂರಕವಾಗಿ ಹೆಚ್ಚುವರಿ ದಾಖಲೆಗಳನ್ನು ಒದಗಿಸಲು ಮತ್ತು ಪರಿಶೀಲಿಸಬೇಕಾದ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಲು ಸಿಬಿಐ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಅ. 10ಕ್ಕೆ ನಿಗದಿಪಡಿಸಲಾಗಿದೆ.

ಆರೋಪಪಟ್ಟಿಯಲ್ಲಿ ಹೆಸರಿಸಿರುವ ಮೂವರೂ ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ಮುಖ್ಯ ಆರೋಪಿ ಸೆಂಗಾರ್ ವಿರುದ್ಧ ಸಿಬಿಐ ಈಗಾಗಲೇ ಪೋಕ್ಸೋ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News