​ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಡಿಸಿ ಕಚೇರಿ ಬಳಿ ಗ್ರೆನೇಡ್ ದಾಳಿ:10 ಜನರಿಗೆ ಗಾಯ

Update: 2019-10-05 07:25 GMT

ಶ್ರೀನಗರ, ಅ.5: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಉಪ ಆಯುಕ್ತರ ಕಚೇರಿಯ ಹೊರಗೆ ಉಗ್ರಗಾಮಿಗಳು ಶನಿವಾರ ಬೆಳಗ್ಗೆ ನಡೆಸಿರುವ ಗ್ರೆನೇಡ್ ದಾಳಿಗೆ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 ಶ್ರೀನಗರದಿಂದ 55 ಕಿ.ಮೀ.ದೂರದಲ್ಲಿರುವ ಅನಂತನಾಗ್ ಪಟ್ಟಣದ ಅತ್ಯಂತ ಬಿಗಿ ಭದ್ರತೆಯ ಕಾಂಪ್ಲೆಕ್ಸ್‌ನ ಹೊರಗೆ ಭದ್ರತಾ ಗಸ್ತಿನಲ್ಲಿದ್ದವರ ಮೇಲೆ ಉಗ್ರರು ಬೆಳಗ್ಗೆ 11ರ ಸುಮಾರಿಗೆ ಗ್ರೆನೇಡ್ ದಾಳಿ ನಡೆಸಿದ್ದರು. ಗ್ರೆನೇಡ್ ಉಗ್ರರ ಗುರಿ ತಪ್ಪಿ ರಸ್ತೆ ಮೇಲೆ ಬಿದ್ದು ಸ್ಫೋಟಗೊಂಡಿದೆ. ಹೀಗಾಗಿ 8 ಮಂದಿ ಪಾದಚಾರಿಗಳು, ಪೊಲೀಸರು ಹಾಗೂ ಸ್ಥಳೀಯ ಪತ್ರಕರ್ತನಿಗೆ ಗಾಯವಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರರ ದಾಳಿಯಿಂದಾಗಿ ನಗರದ ಜನರಲ್ಲಿ ಭೀತಿ ಆವರಿಸಿದೆ. ದಾಳಿ ನಡೆದ ಪ್ರದೇಶದಲ್ಲಿ ಭದ್ರತಾ ಪಡೆಗಳು ಸುತ್ತುವರಿದಿದ್ದು, ದಾಳಿಯ ಹಿಂದಿರುವ ಉಗ್ರರ ಬೇಟೆ ಆರಂಭವಾಗಿದೆ. ಈ ತನಕ ಯಾವುದೇ ಉಗ್ರ ಸಂಘಟನೆಗಳು ದಾಳಿಯ ಹೊಣೆ ಹೊತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News