ಫಾರೂಕ್ ಅಬ್ದುಲ್ಲಾ, ಒಮರ್ ಭೇಟಿಗೆ ಎನ್‌ಸಿ ನಿಯೋಗಕ್ಕೆ ಅನುಮತಿ

Update: 2019-10-05 16:25 GMT

ಶ್ರೀನಗರ, ಅ.5: ಸದ್ಯ ಶ್ರೀನಗರದಲ್ಲಿ ಗೃಹಬಂಧನದಲ್ಲಿರುವ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲ ಅವರನ್ನು ರವಿವಾರ ಭೇಟಿಯಾಗಲು ಪಕ್ಷದ ಜಮ್ಮು ಪ್ರಾಂತದ ನಿಯೋಗಕ್ಕೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಅನುಮತಿ ನೀಡಿದೆ.

ಪಕ್ಷದ ಮಾಜಿ ಶಾಸಕರನ್ನು ಹೊಂದಿರುವ ಪ್ರಾಂತೀಯ ಅಧ್ಯಕ್ಷ ದೇವೇಂದ್ರ ಸಿಂಗ್ ರಾಣಾ ನೇತೃತ್ವದ ನಿಯೋಗ ರವಿವಾರ ಬೆಳಗ್ಗೆ ಜಮ್ಮುವಿನಿಂದ ವಿಮಾನದ ಮೂಲಕ ಶ್ರೀನಗರಕ್ಕೆ ತೆರಳಲಿದೆ ಎಂದು ಪಕ್ಷದ ವಕ್ತಾರ ಮದನ್ ಮಾಂಟೂ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ನಡೆದ ಜಮ್ಮು ಪ್ರಾಂತದ ಜಿಲ್ಲಾಧ್ಯಕ್ಷರು ಮತ್ತು ಹಿರಿಯ ನಾಯಕರ ಸಭೆಯಲ್ಲಿ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಮಾಂಟೂ ತಿಳಿಸಿದ್ದಾರೆ. ಈ ಬಗ್ಗೆ ದೇವೇಂದ್ರ ಸಿಂಗ್ ರಾಣಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಬಳಿ ಅನುಮತಿ ಕೇಳಿದ್ದರು. 81ರ ಹರೆಯದ ಫಾರೂಕ್ ಅಬ್ದುಲ್ಲರನ್ನು ಶ್ರೀನಗರದಲ್ಲಿ ಗೃಹಬಂಧನದಲ್ಲಿರಿಸಲಾಗಿದ್ದರೆ ಅವರ ಪುತ್ರ ಒಮರ್ ಅಬ್ದುಲ್ಲರನ್ನು ರಾಜ್ಯ ಅತಿಥಿಗೃಹದಲ್ಲಿ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News