ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ಕ್ರಮಕ್ಕೆ ಖಂಡನೆ

Update: 2019-10-05 17:16 GMT

ಬೆಂಗಳೂರು, ಅ. 5: ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ನಿರ್ಧಾರವನ್ನು, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿ ಉಮಾ ತೀವ್ರವಾಗಿ ಖಂಡಿಸಿದ್ದಾರೆ.

'ಕಡ್ಡಾಯ ತೇರ್ಗಡೆ ನೀತಿಯಿಂದ ಮಕ್ಕಳಲ್ಲಿ ಪರೀಕ್ಷೆಯ ಕುರಿತು ಬದ್ಧತೆ ಇಲ್ಲದಾಗಿದೆ. ಆದುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ತಮಿಳುನಾಡಿನಲ್ಲಿ ಕಡ್ಡಾಯ ತೇರ್ಗಡೆ ನೀತಿ ರದ್ದು ಮಾಡಲಾಗಿದೆ' ಎಂದು ಸಚಿವ ಸುರೇಶ್‌ ಕುಮಾರ್ ಹೇಳಿದ್ದಾರೆ. ದೇಶದಾದ್ಯಂತ ಕಡ್ಡಾಯ-ತೇರ್ಗಡೆ ನೀತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಹಲವು ಶಿಕ್ಷಣತಜ್ಞರು ಕಡ್ಡಾಯ-ತೇರ್ಗಡೆ ನೀತಿಯಿಂದ ಶಾಲಾ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆಯಂದು ಹೇಳಿದ್ದಾರೆ ಹಾಗೂ ಶಾಲಾ ಶಿಕ್ಷಣದ ಗುಣಮಟ್ಟ ವೃದ್ಧಿಗಾಗಿ ಪಾಸ್-ಫೇಲ್ ಪದ್ದತಿಯನ್ನು ಮರು ಜಾರಿಗೊಳಿಸುವಂತೆ ಸೂಚಿಸಿದ್ದಾರೆ.

ಹೀಗಿರುವಾಗ, ಕರ್ನಾಟಕದಲ್ಲೂ ಕಡ್ಡಾಯ-ತೇರ್ಗಡೆ ನೀತಿಯನ್ನು ರದ್ದುಮಾಡಿ, ಪಾಸ್-ಫೇಲ್ ಪದ್ದತಿಯನ್ನು ಮರು ಜಾರಿಗೊಳಿಸುವ ಬದಲು ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಸಚಿವರ ನಿರ್ಧಾರ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಹಾಕಿದರು ಎಂಬಂತಿದೆ ಎಂದು ಅವರು ಟೀಕಿಸಿದ್ದಾರೆ.

ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸರಕಾರದ ನಿರ್ಧಾರವನ್ನು ಖಂಡಿಸಿ, ಪಾಸ್-ಫೇಲ್ ಪದ್ದತಿಯನ್ನು ಮರು ಜಾರಿಗೊಳಿಸುವಂತೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News