ಕಥೆ ಓದುವ ಹವ್ಯಾಸ ಬೆಳೆಸಿಕೊಳ್ಳೋಣ: ಡಾ.ಅಮರೇಶ ನುಗಡೋಣಿ
ಬೆಳಗಾವಿ, ಅ.6: ಕಥೆಗಳು ಬೇರೆ ಬೇರೆ ಸೈದ್ಧಾಂತಿಕ ನೆಲೆಯಲ್ಲಿ ಹುಟ್ಟಿಕೊಂಡಿರುತ್ತವೆ. ಆದ್ದರಿಂದ ಪ್ರತಿಯೊಬ್ಬರು ಕಥೆಯನ್ನು ಓದುವ ಹವ್ಯಾಸ ಬೆಳಸಿಕೊಳ್ಳುವ ಮೂಲಕ ಎಲ್ಲವನ್ನು ಅರ್ಥಮಾಡಿಕೊಳ್ಳುವಂತಾಗಬೇಕೆಂದು ಹಂಪಿ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ ಹೇಳಿದರು.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ವತಿಯಿಂದ ನಗರದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ(ಅ.5) ಏರ್ಪಡಿಸಲಾಗಿದ್ದ ಬಸವರಾಜ ಕಟ್ಟಿಮನಿಯ ಜನ್ಮಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಭಿನ್ನ ಸೈದ್ಧಾಂತಿಕ ನೆಲೆಯಲ್ಲಿ ಓದುವ, ಬರೆಯುವ ಪದ್ದತಿ ಹಾಗೂ ವಿಮರ್ಶೆ ನಡೆಯುತ್ತಿದೆ ಎಂದರು.
ಪ್ರತಿಯೊಬ್ಬ ವಿಮರ್ಶಕರು ಮತ್ತು ಕಥೆಗಾರರಲ್ಲಿ ಸೈದ್ಧಾಂತಿಕ ಬದ್ಧತೆ ಇರವುದು ಹೆಮ್ಮೆಯ ವಿಷಯ. ಈ ತಲೆಮಾರಿನ ಕಾದಂಬರಿಕಾರರಲ್ಲಿ ಸರಳವಾಗಿ ಬಹಳ ಲಘುವಾಗಿ ಹಾಗೂ ಹಾಸ್ಯ ದೃಷ್ಟಿಯಲ್ಲಿ ಕಥೆಗಳು ಹೊರಹೊಮ್ಮಿವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಲೇಖಕರ ಬರವಣಿಗೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಕಥೆಗಳು ಸಂವೇದನೆಗಳನ್ನು ಜಾಗೃತಿಗೊಳಿಸಬೇಕು ಹಾಗೂ ಓದುಗನಿಗೆ ಗಾಢವಾದ ಪರಿಣಾಮವನ್ನು ಬೀರುವಂತಿರಬೇಕು ಎಂದರು. ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಸದಸ್ಯ ಸಂಚಾಲಕ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಕಟ್ಟಿಮನಿ ಅವರ 40 ಲೇಖನಗಳು 4 ಸಂಪುಟಗಳಲ್ಲಿ ಕಾದಂಬರಿಯನ್ನು ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಬಂಡಾಯ ಮಾದರಿಯ ಬಗ್ಗೆ ಹಾಗೂ ಮಹಿಳಾ ಅಸ್ಮಿತೆಯ ಕಥೆಗಳ ಬಗ್ಗೆ ಚಾರಗೋಷ್ಟಿಗಳು ನಡೆದವು.