ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ವಾಹನ ಅಪಘಾತ: ಸೆಂಗಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸದ ಸಿಬಿಐ

Update: 2019-10-12 03:41 GMT

ಹೊಸದಿಲ್ಲಿ: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ವಾಹನ ಅಪಘಾತ ಯೋಜಿತ ಕೃತ್ಯವಲ್ಲ; ಟ್ರಕ್ ಚಾಲಕನ ರಭಸದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಇದು ಸಂಭವಿಸಿದೆ ಎಂದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಎರಡು ತಿಂಗಳ ಕಾಲ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸಿಬಿಐ, ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದ್ದು, ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಕೊಲೆ ಅಥವಾ ಕೊಲೆಯತ್ನ ಆರೋಪ ಹೊರಿಸಿಲ್ಲ.

ಅಪಘಾತ ಪ್ರಕರಣಕ್ಕೆ ಸಂಬಂಧ ಇಲ್ಲದಿದ್ದರೂ, ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿದ್ದ ಬಗ್ಗೆ ಹಾಗೂ ಸಂಚು ರೂಪಿಸುತ್ತಿದ್ದ ಬಗ್ಗೆ ಸೆಂಗಾರ್, ಸಹೋದರ ಮನೋಜ್ ಹಾಗೂ ಉತ್ತರ ಪ್ರದೇಶ ಸಚಿವನ ಅಳಿಯ ಅರುಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಟ್ರಕ್ ಚಾಲಕ ಅರುಣ್ ಕುಮಾರ್ ಪಾಲ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 304ಎ (ರಭಸದ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಸಾವಿಗೆ ಕಾರಣವಾಗುವುದು), 338 (ಇತರರ ಜೀವಕ್ಕೆ ಮತ್ತು ವೈಯತ್ತಿಕ ಸುರಕ್ಷೆಗೆ ಅಪಾಯ ಒಡ್ಡುವ ರೀತಿ ಭೀಕರ ಗಾಯಗೊಳಿಸುವುದು) ಮತ್ತು 279 (ರಭಸದ ಚಾಲನೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ಇಬ್ಬರು ಸಂಬಂಧಿಕರು ಘಟನೆಯಲ್ಲಿ ಮೃತಪಟ್ಟಿದ್ದರು.

ಅಂತಿಮವಾಗಿ ಸೆಂಗಾರ್ ವಿರುದ್ಧ ಸೆಕ್ಷನ್ 120ಬಿ (ಅಪರಾಧ ಪಿತೂರಿ) ಮತ್ತು 506-2 (ಹತ್ಯೆ ಅಥವಾ ಗಂಭೀರ ಗಾಯಗೊಳಿಸುವ ಬಗ್ಗೆ ಬೆದರಿಕೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಎರಡೂ ಅಪರಾಧ ಸಾಬೀತಾದಲ್ಲಿ ಏಳು ವರ್ಷವರೆಗೆ ಜೈಲುಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News