ಕೈಮರ ಚೆಕ್‍ ಪೋಸ್ಟ್ ನಲ್ಲಿ ಪ್ರವಾಸಿಗರ ಸುಲಿಗೆ ಆರೋಪದಲ್ಲಿ ಹುರುಳಿಲ್ಲ: ಜಯಂತ್ ಪೈ

Update: 2019-10-12 12:05 GMT

ಚಿಕ್ಕಮಗಳೂರು, ಅ.12: ತಾಲೂಕಿನ ಅಲ್ಲಂಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಕೈಮರ ಚೆಕ್‍ ಪೋಸ್ಟ್ ನಲ್ಲಿ ಚಂದ್ರದ್ರೋಣ ಅರಣ್ಯ ಸಮಿತಿ ಅಕ್ರಮವಾಗಿ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಿಗೆ ಜಿಲ್ಲಾಧಿಕಾರಿಯೇ ಸಮಿತಿಗೆ ಪರವಾನಿಗೆ ನೀಡಿದ್ದು, ಪ್ರವಾಸಿಗರಿಂದ ಸಂಗ್ರಹಿಸಿದ ಹಣವನ್ನು ಜಿಲ್ಲಾಧಿಕಾರಿ ಖಾತೆ ಹಾಗೂ ಅರಣ್ಯ ಸಮಿತಿ ಹೆಸರಿನಲ್ಲಿರುವ ಖಾತೆಗಳಲ್ಲಿರಿಸಲಾಗಿದೆ. ಪ್ರವೇಶ ಶುಲ್ಕದಿಂದ ಸಂಗ್ರಹವಾದ ಹಣವನ್ನು ಗಿರಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಬಳಸಲಾಗುತ್ತಿದೆ. ಈ ಹಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಮಿತಿ ಅಧ್ಯಕ್ಷ ಜಯಂತ್ ಪೈ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚಂದ್ರದ್ರೋಣ ಅರಣ್ಯ ಸಮಿತಿ ಕೈಮರ ಚೆಕ್‍ ಪೋಸ್ಟ್ ನಲ್ಲಿ ಪ್ರವಾಸಿಗರಿಂದ ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು, ಈ ಆರೋಪದಲ್ಲಿ ಹುರುಳಿಲ್ಲ ಎಂದ ಅವರು, ಗ್ರಾಮ ಅರಣ್ಯ ಸಮಿತಿ ಈ ಚೆಕ್ ಪೋಸ್ಟ್ ನಲ್ಲಿ 2124ರಿಂದ ಶುಲ್ಕ ಸಂಗ್ರಹ ಮಾಡುತ್ತಿದ್ದು, ಇದಕ್ಕೆ ಜಿಲ್ಲಾಧಿಕಾರಿಯೇ ಅಧಿಕಾರ ನೀಡಿದ್ದಾರೆ. ಅಲ್ಲದೇ ಸಮಿತಿಯು ಜಿಲ್ಲಾಡಳಿತವೇ ಮುದ್ರಿಸಿ ನೀಡುವ ರಶೀದಿಗಳ ಮೂಲಕವೇ ಶುಲ್ಕ ಸಂಗ್ರಹಿಸುತ್ತಿದ್ದು, ಅಂದಿನಿಂದಲೂ ಸಮಿತಿ ಯಾವುದೇ ಅಕ್ರಮ ಎಸಗದೇ ಸಿಬ್ಬಂದಿ ಮೂಲಕ ಶುಲ್ಕ ಸಂಗ್ರಹ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಚೆಕ್‍ ಪೋಸ್ಟ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಲು ಅರಣ್ಯ ಸಮಿತಿ ನೇಮಿಸಿರುವ ಸಿಬ್ಬಂದಿ ಅವಸರದಲ್ಲಿ ಜಿಲ್ಲಾಡಳಿತ ಒದಗಿಸಿರುವ ಶೀಲು ಇಲ್ಲದ ರಶೀದಿಯನ್ನು ಬಳಸಿ, ಸಹಿ ಮಾಡದೇ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಿದ್ದಾರೆ. ಇದು ಸಿಬ್ಬಂದಿಯಿಂದಾದ ಅಚಾತುರ್ಯವೇ ಹೊರತು, ಅಕ್ರಮವಲ್ಲ ಎಂದು ಅವರು ಸಮಾಜಾಯಿಸಿ ನೀಡಿದರು.

ಗಿರಿಪ್ರದೇಶಗಳಿಗೆ ಹೋಗುವ ಪ್ರವಾಸಿಗರು ಮತ್ತು ವಾಹನಗಳ ಮಾಲಕರು ನಿಷೇದಿತ ವಸ್ತುಗಳನ್ನು ಪ್ರವಾಸಿ ತಾಣಗಳಲ್ಲಿ ಎಲ್ಲೆಂದರಲ್ಲಿ ಎಸೆದು ಪರಿಸರ ಮಾಲಿನ್ಯ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕುವ, ಗಿರಿಶ್ರೇಣಿಯ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಹಾಗೂ ತಪಾಸಣೆ ಮೂಲಕ ಮದ್ಯದ ಬಾಟಲಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶದಿಂದ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಿ ಮಾಡಲು 2010ರಿಂದ 1011 ಸಾಲಿಗೆ ಅಂದಿನ ಜಿಲ್ಲಾಧಿಕಾರಿ ಸ್ವಚ್ಛ ಟ್ರಸ್ಟ್ ಗೆ ಅಧಿಕಾರ ನೀಡಿದ್ದರು. ನಂತರ ಶುಲ್ಕ ವಸೂಲಿ ಮಾಡುವ ಹಕ್ಕನ್ನು 2012ರಲ್ಲಿ ಬಹಿರಂಗ ಹರಾಜು ಮೂಲಕ ಶಶಿಧರ್ ಎಂಬವರಿಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆದಾರರು ಜಿಲ್ಲಾಡಳಿತ ನಿಗದಿ ಮಾಡಿದ್ದಕ್ಕಿಂತ ಹೆಚ್ಚವರಿ ಶುಲ್ಕ ವಸೂಲಿ ಮಾಡಿದ ಆರೋಪದ ಮೇರೆಗೆ ಜಿಲ್ಲಾಧಿಕಾರಿ ತನಿಖಾ ಠಾಣೆಯ ನಿರ್ವಹಣೆ ಮತ್ತು ಶುಲ್ಕ ವಸೂಲಿ ಅಧಿಕಾರವನ್ನು ಕೆಲ ಷರತ್ತುಗಳೊಂದಿಗೆ ಚಂದ್ರದ್ರೋಣ ಅರಣ್ಯ ಸಮಿತಿಗೆ ನೀಡಿದೆ ಎಂದ ಅವರು, ಸಮಿತಿ ಸಂಗ್ರಹಿಸುವ ಶುಲ್ಕದ ಶೇ.50ರಷ್ಟು ಹಣವನ್ನು ಜಿಲ್ಲಾಧಿಕಾರಿ ಖಾತೆಗೂ ಉಳಿದ ಶೇ.50ರಷ್ಟು ಹಣವನ್ನು ಅರಣ್ಯ ಸಮಿತಿಯ ಖಾತೆಯಲ್ಲಿರಿಸಿಕೊಳ್ಳಲು ಆದೇಶ ನೀಡಿದ್ದಾರೆ. ಅದರಂತೆ ಅಂದಿನಿಂದ ಸಮಿತಿಯೂ ಶುಲ್ಕ ವಸೂಲಾತಿಯನ್ನು ಮಾಡುತ್ತಿದೆ ಎಂದರು.

ಅರಣ್ಯ ಸಮಿತಿಯ ಖಾತೆಯಲ್ಲಿರುವ ಹಣದಲ್ಲಿ ಸಿಬ್ಬಂದಿಯ ವೇತನ ಹಾಗೂ ಸ್ವಚ್ಛತಾ ಕೆಲಸ, ಪ್ರವಾಸಿತಾಣಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದ ಅವರು, ಅರಣ್ಯ ಸಮಿತಿಯು ಗಿರಿಶ್ರೇಣಿಗಳ ವ್ಯಾಪ್ತಿಯಲ್ಲಿ 68 ಕಸದ ಡಬ್ಬಿಗಳನ್ನು ಇರಿಸಿದ್ದು, ಪ್ರವಾಸಿಗರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಈ ಡಬ್ಬಿಗಳಲ್ಲಿ ಹಾಕುವಂತೆ ಸೂಚನೆ ನೀಡಲಾಗುತ್ತಿದೆ. ಪ್ರತೀ ವಾರ ಐವರು ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ಈ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದಾರೆ. ತನಿಖಾ ಠಾಣೆಯಲ್ಲಿ ಮೂರು ಮಂದಿ ಸಿಬ್ಬಂದಿಯನ್ನು ಕೆಲಸಕ್ಕೆ ನೇಮಿಸಿದ್ದು, ಇವರು ಪ್ರವಾಸಿಗರ ವಾಹನಗಳನ್ನು ತಪಾಸಣೆ ಮಾಡುವ ವೇಳೆ ಮದ್ಯದ ಬಾಟಲಿಗಳು ಪತ್ತೆಯಾದಲ್ಲಿ ಅಂತಹ ವಾಹನಗಳನ್ನು ಹಿಂದಕ್ಕೆ ಕಳಿಸುತ್ತಾರೆಯೇ ಹೊರತು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯುತ್ತಿಲ್ಲ, ಶುಲ್ಕ ವಸೂಲಿ ಹಾಗೂ ತಪಾಸಣೆ ವೇಳೆ ಪ್ರವಾಸಿಗರಿಗೆ ಯಾವುದೇ ಕಿರುಕುಳ ನೀಡುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಸಿಬ್ಬಂದಿ ಕಡೆಯಿಂದ ನಡೆದಿರುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ಜಯಂತ್ ಪೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಗ್ರಾಮ ಅರಣ್ಯ ಸಮಿತಿ ಕಾರ್ಯದರ್ಶಿ ವೆಂಕಟೇಶ್, ಸಮಿತಿ ಸದಸ್ಯರಾದ ಶಾಂತಕುಮಾರ್, ಗುರುವೇಶ್, ರಾಘವೇಲು, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು. 

ಕೈಮರ ಚೆಕ್‍ ಪೋಸ್ಟ್ ನಲ್ಲಿ ಪ್ರವಾಸಿಗರ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಭೆ ನಡೆಸಿದ್ದು, ಜಿಲ್ಲಾಧಿಕಾರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ರಶೀದಿ ವಿಚಾರದಲ್ಲಾಗಿರುವ ಲೋಪವನ್ನೂ ಡಿಸಿಗೆ ಮನವರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ಡಿಸೆಂಬರ್ ವರೆಗೆ ಶುಲ್ಕ ವಸೂಲಿ ಅಧಿಕಾರವನ್ನು ಸಮಿತಿಗೆ ನೀಡಿದ್ದಾರೆ. ಅಲ್ಲದೇ ಶುಲ್ಕ ವಸೂಲಿಗೆ ಡಿಜಿಟಲ್ ತಂತ್ರಜ್ಞಾನ ಬಳಕೆ, ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಪ್ರವಾಸಿಗರಿಗೆ ಸೇರಿದ ಮದ್ಯ ಮತ್ತಿತರ ನಿಷೇದಿತ ವಸ್ತುಗಳನ್ನು ತನಿಖಾ ಠಾಣೆಯಲ್ಲಿಡಲು ಲಾಕರ್ ಸೌಲಭ್ಯಗಳನ್ನು ಅಳವಡಿಸಲು ಸೂಚಿಸಿದ್ದು, ಶೀಘ್ರ ಈ ವ್ಯವಸ್ಥೆಯನ್ನು ಕೈಮರ ತನಿಖಾ ಠಾಣೆಯಲ್ಲಿ ಅಳವಡಿಸಲು ಕ್ರಮಕೈಗೊಳ್ಳಲಾಗುವುದು.
- ಜಯಂತ್ ಪೈ, ಚಂದ್ರದ್ರೋಣ ಅರಣ್ಯ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News