ಕಾಶ್ಮೀರಿಗಳಿಂದ ಶಾಂತಿಯುತ ಅಸಹಕಾರ ಚಳವಳಿ: ಸತ್ಯಶೋಧನಾ ಸಮಿತಿ ವರದಿ

Update: 2019-10-13 14:14 GMT

 ಹೊಸದಿಲ್ಲಿ,ಅ.13: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಣಿವೆರಾಜ್ಯದಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ವಿರೋಧಿಸಿ ಕಾಶ್ಮೀರಿ ಜನತೆಯು ಅಹಿಂಸಾತ್ಮಕವಾಗಿ ಅಸಹಕಾರ ಚಳವಳಿ ನಡೆಸುತ್ತಿರುವುದಾಗಿ ನಾಲ್ವರು ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರು ಬಿಡುಗಡೆಗೊಳಿಸಿರುವ ವರದಿಯು ತಿಳಿಸಿದೆ.

   ಕಾಶ್ಮೀರ ಕಣಿವೆಯಲ್ಲಿ ಹಲವಾರು ಅಂಗಡಿಗಳು ಹಾಗೂ ಕಚೇರಿಗಳು ಮುಚ್ಚುಗಡೆಗೊಂಡಿರುವುದಾಗಿ ಸತ್ಯಶೋಧನಾ ವರದಿಯೊಂದು ತಿಳಿಸಿದೆ. ಆದರೆ, ಅವರು ಬಂದ್ ಆಚರಿಸಿರುವುದು ಉಗ್ರವಾದಿಗಳ, ಪ್ರತ್ಯೇಕತಾವಾದಿ ನಾಯಕರ ಅಥವಾ ರಾಜಕೀಯ ನಾಯಕರ ಕರೆಗೆ ಓಗೊಟ್ಟು ಅಲ್ಲ, ಬದಲಿಗೆ ಕೇಂದ್ರ ಸರಕಾರದ ವಿರುದ್ಧ ಪ್ರತಿರೋಧವಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

 ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಜನರಿಗೆ ಕರೆ ನೀಡುವ ಭಿತ್ತಿಪತ್ರಗಳನ್ನು ಶಂಕಿತ ಉಗ್ರರು ಹಚ್ಚಿರುವುವುದನ್ನು ತಾವು ಕಂಡಿರುವುದಾಗಿ ಸಾರ್ವಜನಿಕರು ಹೇಳಿಕೊಂಡ ಇಂತಹ ಮೂರು ನಿದರ್ಶನಗಳನ್ನು ಸತ್ಯಶೋಧನಾ ತಂಡವು ಪಟ್ಟಿ ಮಾಡಿದೆ. ಇನ್ನೂ ಹೆಚ್ಚಿನ ಜನರು, ಅಂಗಡಿಗಳನ್ನು ತೆರೆದಿಡುವಂತೆ ತಮ್ಮನ್ನು ಭದ್ರತಾ ಪಡೆಗಳು ಬಲವಂತ ಪಡಿಸಿರುವುದಾಗಿಯೂ ತಮಗೆ ಮಾಹಿತಿ ನೀಡಿದ್ದಾರೆಂದು ತಂಡದ ವರದಿ ತಿಳಿಸಿದೆ.

ಭದ್ರತಾಪಡೆಗಳ ಬಗ್ಗೆಯೂ ಕಾಶ್ಮೀರಿಗಳು ಭೀತಿಗೊಂಡಿದ್ದಾರೆ. ಅವರ ಆದೇಶದ ಮೇರೆಗೆ ಸಾರ್ವಜನಿಕರ ಬಂಧನಗಳಾಗುತ್ತಿವೆ. ಆದಾಗ್ಯೂ ಅಂಗಡಿಗಳನ್ನು ತೆರೆದಿಡಬೇಕೆಂಬ ಆದೇಶವನ್ನು ಉಲ್ಲಂಘಿಸುವ ಮೂಲಕ ಅವರು ತಮಗೆ ಸಾಧ್ಯವಾಗುವಷ್ಟು ಸಮಯದವರೆಗೆ ನಾಗರಿಕ ಅಸಹಕಾರ ಹೋರಾಟವನ್ನು ನಡೆಸಲು ನಿರ್ಧರಿಸಿದ್ದಾರೆ ಎಂದು ವರದಿಯು ಹೇಳಿದೆ.

ಕಾಶ್ಮೀರಿಗಳು ಬಹುತೇಕ ಅಹಿಂಸಾತ್ಮಕ ಪ್ರತಿಭಟನೆಯ ಮೂಲಕ ಪ್ರತ್ಯುತ್ತರ ನೀಡಲು ಬಯಸಿದ್ದಾರೆ ಎಂದು ಸತ್ಯಶೋಧನಾ ತಂಡದ ವರದಿ ಹೇಳಿದೆ. ಕಾಶ್ಮೀರದ ಜನತೆ ಇದೀಗ ಭಾರತ ಸರಕಾರದ ಜೊತೆ ಮಾತುಕತೆಗಳನ್ನು ನಡೆಸುವಲ್ಲಿ ಆಸಕ್ತವಾಗಿಲ್ಲ. ಶಾಂತಿಮಾತುಕತೆಗೆ ಇದ್ದ ದಾರಿ ಈಗ ಮುಚ್ಚಿಹೋಗಿದೆ ಎಂದು ವರದಿ ತಿಳಿಸುತ್ತದೆ.

   ತೀವ್ರವಾದಿಗಳಿಂದ ಹಿಡಿದು ಪ್ರತ್ಯೇಕವಾದಿಗಳ ತನಕ ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳಲು ಬಯಸುವವರಿಂದ ಹಿಡಿದು ಭಾರತದ ಜೊತೆಗಿರಲು ಬಯಸಿರುವವರ ತನಕ ಎಲ್ಲರೂ ಸಂವಿಧಾನದ 370ನೇ ರದ್ಧತಿಯಿಂದಾಗಿ ಆಘಾತ ವನ್ನು ಅನುಭವಿಸುತ್ತಿದ್ದಾರೆ. ಈ ಎಲ್ಲಾ ವಿದ್ಯಮಾನ ಹಲವಾರು ಕಾಶ್ಮೀರಿಗಳನ್ನು ಮೂಕ ಪ್ರತಿಭಟನಕಾರರನ್ನಾಗಿ ಪರಿವರ್ತಿಸಿ ಬಿಟ್ಟಿವೆ ಎಂದು ಸತ್ಯಶೋಧನಾ ತಂಡದ ವರದಿ ಹೇಳಿದೆ.

   ಕಾಶ್ಮೀರ ಜನತೆಯಲ್ಲಿ ವಿಶ್ವಾಸವನ್ನು ಮರಳಿಸಲು ಕೇಂದ್ರ ಸರಕಾರವು ಸಂವಿಧಾನದ 370 ಹಾಗೂ 35ಎ ವಿಧಿಯನ್ನು ಮರುಸ್ಥಾಪಿಸಬೇಕು ಎಂದು ವರದಿಯು ಶಿಫಾರಸು ಮಾಡಿದೆ. ಪ್ರಜಾಪ್ರಭುತ್ವದ ಕುರಿತು ವಿಶ್ವಾಸವನ್ನು ಮರುಸ್ಥಾಪಿಸಲು ಹಾಗೂ ಕಾಶ್ಮೀರದ ಜನತೆಗಾಗಿರುವ ದ್ರೋಹ ಮತ್ತು ಅಪಮಾನವನ್ನು ಶಮನಗೊಳಿಸಲು, ಭಾತೀಯ ನಾಗರಿಕ ಸಮುದಾಯವು ಕಾಶ್ಮೀರದ ಜನತೆಯ ಜೊತೆಗೆ ಮಾತುಕತೆಗಳನ್ನು ನಡೆ ಬೇಕು ಎಂದು ವರದಿಯು ಸಲಹೆ ನೀಡಿದೆ.

ಸತ್ಯಶೋಧನಾ ತಂಡವು ಕಾಶ್ಮೀರ ಕಣಿವೆಯ ಭೇಟಿ ನೀಡಿತ್ತು ಹಾಗೂ ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಗೃಹಿಣಿಯರು, ಅಧ್ಯಾಪಕರು,ಚಿಂತಕರು,ಬರಹಗಾರರು, ಕಾಶ್ಮೀರಿ ಪಂಡಿತಕರು, ಸಿಖ್ಖರು ಹಾಗೂ ಕ್ರೈಸ್ತರು ಸೇರಿದಂತೆ ಕಾಶ್ಮೀರದ ವಿವಿಧ ನಾಗರಿಕರನ್ನು ಸಂದರ್ಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News