ಸ್ವಚ್ಛತಾ ಕಾರ್ಯದ ವೇಳೆ ಮೋದಿ ಕೈಯಲ್ಲಿದ್ದದ್ದೇನು ?

Update: 2019-10-13 16:35 GMT

ಹೊಸದಿಲ್ಲಿ, ಅ.13: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಾಮಲ್ಲಾಪುರಂ ಬೀಚ್‌ನಲ್ಲಿ ಶನಿವಾರ ‘ಪ್ಲಾಗಿಂಗ್’ ನಡೆಸಿದ ಸಂದರ್ಭ ಅವರ ಕೈಯಲ್ಲಿದ್ದ ಕೋಲಿನಂತಹ ವಸ್ತುವಿನ ಬಗ್ಗೆ ಜನರಲ್ಲಿ ತೀವ್ರ ಕುತೂಹಲ ಮೂಡಿತ್ತು. ರವಿವಾರ ಇದಕ್ಕೆ ಉತ್ತರಿಸಿರುವ ಪ್ರಧಾನಿ ಮೋದಿ, ತನ್ನ ಕೈಯಲ್ಲಿ ಇದ್ದಿದ್ದು ಆ್ಯಕ್ಯೂಪ್ರೆಶರ್ ರೋಲರ್ ಎಂದು ಹೇಳಿದ್ದಾರೆ.

‘ಆ್ಯಕ್ಯೂಫ್ರೆಶರ್ ಯಾವಾಗಲೂ ತನ್ನ ಜೊತೆಗಿರುತ್ತದೆ. ಇದು ಅತ್ಯಂತ ಸಹಾಯಕವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಪ್ಲಾಗಿಂಗ್’ ಎಂದರೆ ಬೆಳಗ್ಗಿನ ಜಾವ ಬೀಚ್ ಬದಿಯಲ್ಲಿ ಜಾಗಿಂಗ್ ನಡೆಸುವ ಜೊತೆಗೆಯೇ ಎದುರಾಗುವ ಕಸಕಡ್ಡಿಗಳನ್ನು ಹೆಕ್ಕುವುದು. ಪ್ಲಾಗಿಂಗ್ ಶಬ್ಧ ವಿದೇಶಗಳಲ್ಲಿ ಅತೀ ಹೆಚ್ಚು ಬಳಕೆಯಲ್ಲಿದೆ ಮತ್ತು ಇದನ್ನು ಅಲ್ಲಿ ಹೆಚ್ಚಿನವರು ಆಚರಿಸುತ್ತಾರೆ. ದೇಹದ ಕ್ಷಮತೆ ಕಾಯ್ದುಕೊಳ್ಳುವ ಜೊತೆಗೇ, ಪರಿಸರ ಮಾಲಿನ್ಯ ರಕ್ಷಿಸುವ ಪ್ರಕ್ರಿಯೆ ಇದಾಗಿದೆ. ಇದನ್ನು ನಮ್ಮ ದೇಶದಲ್ಲೂ ಹೆಚ್ಚು ಹೆಚ್ಚು ಬಳಕೆಗೆ ತಂದರೆ ಸ್ವಚ್ಛತಾ ಕಾರ್ಯಕ್ಕೆ ಪೂರಕವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಾಮಲ್ಲಾಪುರ ಬೀಚ್‌ನಲ್ಲಿ ಜಾಗಿಂಗ್ ನಡೆಸುವ ಜೊತೆಗೆ ಕಸ ಹೆಕ್ಕುವ ಮೂರು ನಿಮಿಷದ ವೀಡಿಯೊವನ್ನು ಶನಿವಾರ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, ಜನತೆ ಸಾರ್ವಜನಿಕ ಸ್ಥಳವನ್ನು ಸ್ವಚ್ಛಗೊಳಿಸಲು ಮುಂದೆ ಬರಬೇಕು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News