ಇಂದಿರಾ ಕ್ಯಾಂಟೀನ್ ನಲ್ಲಿ ಅಹಿಂದಾಗಳು ಮಾತ್ರ ಊಟ ಮಾಡುತ್ತಾರಾ?: ಸಿದ್ದರಾಮಯ್ಯ ಪ್ರಶ್ನೆ

Update: 2019-10-13 18:42 GMT

ದಾವಣಗೆರೆ, ಅ.13: ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲಾ. ಇದೇ ಕಾರಣ ಸದನದಲ್ಲಿ ನಾವು ಮಾತಾಡಿದ್ದು ಜನ ಕೇಳಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ಹಾಕಿದೆ. ಈಗ ಬಿಜೆಪಿ ನಿಜ ಬಣ್ಣ ಬಯಲಾಗಿದೆ. ಇನ್ನಾದರೂ ಮಾಧ್ಯಮಗಳು ಬಿಜೆಪಿ ಬಗ್ಗೆ ಹುಷಾರಾಗಿ ಇರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿವಿಮಾತು ಹೇಳಿದರು. 

ಜಿಲ್ಲೆಯ ಹರಿಹರ ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದನದಲ್ಲಿ ತಮ್ಮ ಬಂಡವಾಳ ಬಯಲಾಗುತ್ತಿದೆ ಹಾಗೂ ಜನರಿಗೆ ಗೊತ್ತಾಗಬಾರದು ಎಂದು ಹೆದರಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಸದನ ಮೂರು ದಿನ ಮಾತ್ರ ನಡೆಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಅಂಗಡಿ ಬೇಗ ಮುಚ್ಚಿ ಹೊರಟಿದ್ದಾರೆ ಎಂದು ಲೇವಡಿ ಮಾಡಿದರು. 

ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೌಲ್ಯ, ಮಾನವೀಯ ಮೌಲ್ಯದಲ್ಲಿ ನಂಬಿಕೆಯಿಲ್ಲ. ಫ್ಯಾಸಿಸ್ಟ್ ಸಂಸ್ಕ್ರತಿಯಲ್ಲಿ ನಂಬಿಕೆಯಿಟ್ಟಿದ್ದಾರೆ. ಅವಮಾನವೀಯ ವರ್ತನೆಗಳನ್ನು ಅಳವಡಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲ. ರಾಜ್ಯದಲ್ಲಿ ಪ್ರವಾಹ ಉಂಟಾಗಿ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ಜನರು ಮನೆ ಕಳೆದುಕೊಂಡಿದ್ದಾರೆ. ಬೆಳೆ ನಷ್ಟವಾಗಿದೆ ಅದರೂ ಪರಿಹಾರ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದರು. 

ಮಹಾಕಾವ್ಯಗಳನ್ನು ಬರೆದವರು ತಳ ಸಮುದಾಯದವರು. ಬೇಡ ಜನಾಂಗದಲ್ಲಿ ಹುಟ್ಟಿದ ವಾಲ್ಮೀಕಿ ರಾಮಾಯಣ ಬರೆದರು. ಮಹಾಭಾರತ ಬರೆದವರು ಬೆಸ್ತ ಜನಾಂಗದ ವ್ಯಾಸರು. ಈ ತಳ ಸಮುದಾಯಗಳ ಪ್ರತಿನಿಧಿಗಳು ಮಹಾನ್ ಸಾಧನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಅಂಬೇಡ್ಕರ್ ಹೇಳಿದ್ದು ಬರೀ ಮತದಾನದ ಹಕ್ಕು ಸಿಕ್ಕರೇ ಸಾಲದು. ಜೊತೆಗೆ ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಬೇಕು. ಸಮಾನತೆ ಹಕ್ಕು ಸಂವಿಧಾನ ನೀಡಿದೆ. ಅದನ್ನ ಬದಲಿಸುವ ಹುನ್ನಾರ ನಡೆದಿದೆ. ಸಂವಿಧಾನದ ತಂಟೆಗೆ ಬಂದರೆ ಈ ದೇಶದಲ್ಲಿ ರಕ್ತ ಕ್ರಾಂತಿ ಆಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು. 

ನನ್ನ ಯೋಜನೆಗಳ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರು. ಸಿದ್ದರಾಮಯ್ಯ ಎಲ್ಲ ಯೋಜನೆ ಅಹಿಂದ ಸಮುದಾಯಕ್ಕೆ ನೀಡಿದ್ದಾನೆ ಎಂದು ಅಪಪ್ರಚಾರ ಮಾಡಿದರು. ಇಂದಿರಾ ಕ್ಯಾಂಟೀನ್ ನಲ್ಲಿ ಅಹಿಂದಾಗಳು ಮಾತ್ರ ಊಟ ಮಾಡುತ್ತಾರ ? ಅಕ್ಕಿ ಎಲ್ಲ ಜಾತಿ ಜನ ತೆಗೆದುಕೊಳ್ಳುತ್ತಾರೆ. ಅದರೆ ಸುಳ್ಳು ಹೇಳುವರ ಮಾತು ಕೇಳಿ ನಮ್ಮ ವಿರುದ್ಧ ಮತದಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.   

ರಾಜ್ಯದ 6.5 ಕೋಟಿ ಜನರಿಗೆ ಒಂದಲ್ಲ ಒಂದು ಕಾರ್ಯಕ್ರಮ ನೀಡಿದ್ದೇನೆ. ಅದರೆ ಈಗ ಬಿಜೆಪಿ ಅನ್ನ ಭಾಗ್ಯ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ನಾನು ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದೆ ಬಹಳ ದೊಡ್ಡದಿದೆ. ಅದರೆ ಆ ಎದೆಯಲ್ಲಿ ಬಡವರಿಗೆ ಮಿಡಿಯುವ  ಹೃದಯದ ಅಗತ್ಯವಿದೆ ಎಂದರು. 

ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ನನ್ನ ಕ್ಷೇತ್ರಕ್ಕೆ ಈ ಹಿಂದಿನ ಸರಕಾರ ನೀಡಿದ್ದ ಅನುದಾನವನ್ನು ಈಗಿನ ಬಿಜೆಪಿ ಸರಕಾರ ಕಡಿತಗೊಳಿಸಿದೆ ಇದು ಖಂಡನೀಯ. ಅನುದಾನ ಕಡಿತಗೊಳಿಸಿದರೆ ನನ್ನ ಕ್ಷೇತ್ರದ ಜನರ ಸಹಿತ ವಿಧಾನ ಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.  

ಕಾರ್ಯಕ್ರಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ ಶೆಟ್ಟಿ, ಕಾಂಗ್ರೆಸ್ ಮುಖಂಡ ಪಿ.ರಾಜಕುಮಾರ್, ಪ್ರಕಾಶ್ ರಾಥೋಡ್, ವೀಣಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ರೇಷ್ಮ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಹರಿಹರ ನಗರಸಭೆ ಸದಸ್ಯರಾದ ವಸಂತ, ನಾಗರತ್ನ .ಶಂಕರ ಕಟಾವಕರ್, ಭಾಗ್ಯದೇವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ ಸೇರಿದಂತೆ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News