ವಿದೇಶಿ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಮೃತ್ಯು: ಬಾಂಗ್ಲಾಕ್ಕೆ ಮೃತದೇಹ ಕಳುಹಿಸಿ ಎಂದ ಕುಟುಂಬ!
ಹೊಸದಿಲ್ಲಿ,ಅ.15: ಅಸ್ಸಾಂನಲ್ಲಿ ವಿದೇಶಿ ಎಂದು ಘೋಷಿಸಲ್ಪಟ್ಟ ವ್ಯಕ್ತಿಯೊಬ್ಬರು ಬಂಧನ ಕೇಂದ್ರದಲ್ಲಿ ಮೃತಪಟ್ಟಿದ್ದು ಅವರ ಮೃತದೇಹವನ್ನು ಸ್ವೀಕರಿಸಲು ಒಪ್ಪದ ಕುಟುಂಬಸ್ಥರು ದೇಹವನ್ನು ಬಾಂಗ್ಲಾದೇಶಕ್ಕೆ ಕಳುಹಿಸುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
65ರ ಹರೆಯದ ದುಲಾಲ್ ಪೌಲ್ ಎಂಬವರನ್ನು ಎರಡು ವರ್ಷಗಳ ಹಿಂದೆ ವಿದೇಶಿ ಎಂದು ಘೋಷಿಸಲ್ಪಟ್ಟಿದ್ದು ಅಂದಿನಿಂದ ಅವರು ಬಂಧನ ಕೇಂದ್ರದಲ್ಲಿದ್ದರು. ಪೌಲ್ ಎರಡು ದಿನಗಳ ಹಿಂದೆ ನಿಧನ ಹೊಂದಿದ್ದರು. ವಿದೇಶಿಗರ ನ್ಯಾಯಾಧೀಕರಣ ಪೌಲ್ ಅವರನ್ನು ವಿದೇಶಿ ಎಂದು ಘೋಷಿಸಿತ್ತು. 2017ರ ಅಕ್ಟೋಬರ್ 11ರಂದು ಪೊಲೀಸರು ಬಂಧಿಸಿ ತೇಝ್‌ಪುರ್‌ನ ಬಂಧನ ಕೇಂದ್ರಕ್ಕೆ ಕಳುಹಿಸಿದ ಸಂದರ್ಭದಲ್ಲಿ ಪೌಲ್ ಮಾನಸಿಕ ಅಸ್ಥಿರತೆಯಿಂದ ನರಳುತ್ತಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಈ ವರ್ಷ ಆಗಸ್ಟ್ 31ರಂದು ಬಿಡುಗಡೆಯಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಪಟ್ಟಿಯಲ್ಲಿ ಪೌಲ್ ಅವರನ್ನು ಹೊರತುಪಡಿಸಿ ಅವರ ಕುಟುಂಬದ ಉಳಿದೆಲ್ಲ ಸದಸ್ಯರನ್ನು ಭಾರತೀಯರು ಎಂದು ಘೋಷಿಸಲಾಗಿದೆ. ಪೌಲ್ ಭಾರತೀಯ ಎಂದು ಖಚಿತಪಡಿಸಲು ನಮ್ಮಲ್ಲಿ ಎಲ್ಲ ದಾಖಲೆಗಳೂ ಇವೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಪೌಲ್ ಸಾವಿನ ಸುದ್ದಿ ತಿಳಿದ ಅವರ ಗ್ರಾಮದ ಜನರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. “ನಮ್ಮ ತಂದೆ ಭಾರತೀಯನಾಗಿದ್ದರು ಅವರು ಬಾಂಗ್ಲಾದೇಶಿ ಅಲ್ಲ ಎಂದು ಘೋಷಿಸಿ ಸರಕಾರ ಪ್ರಮಾಣಪತ್ರ ನೀಡಬೇಕು” ಎಂದು ಪೌಲ್ ಮಕ್ಕಳಾದ ಆಶಿಶ್ ಮತ್ತು ಅಶೋಕ್ ಆಗ್ರಹಿಸಿದ್ದಾರೆ.