ಮಹಾರಾಷ್ಟ್ರ ಚುನಾವಣೆ: ಸಾತಾರಾದಲ್ಲಿ ಇವಿಎಂ ತಿರುಚಿದ್ದ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ

Update: 2019-10-23 16:14 GMT

ಹೊಸದಿಲ್ಲಿ,ಅ.23: ಅ.21ರಂದು ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಉಪಚುನಾವಣೆ ಸಂದರ್ಭ ಸಾತಾರಾ ಜಿಲ್ಲೆಯಲ್ಲಿ ಬಳಸಲಾಗಿದ್ದ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳನ್ನು ತಿರುಚಲಾಗಿತ್ತು ಎಂಬ ವರದಿಗಳನ್ನು ಚುನಾವಣಾ ಆಯೋಗವು ತಿರಸ್ಕರಿಸಿದೆ. ಇವಿಎಮ್‌ನ ಯಾವುದೇ ಗುಂಡಿಯನ್ನು ಒತ್ತಿದರೂ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾವಣೆಯಾಗುತ್ತಿತ್ತು ಎಂದು ಹಲವಾರು ಮತದಾರರು ಹೇಳಿದ್ದರು.

ಯಾವುದೇ ಮತಗಟ್ಟೆಯಲ್ಲಿ ಇಂತಹ ಘಟನೆ ನಡೆದಿಲ್ಲ. ಮತದಾನ ಯಂತ್ರಗಳ ಕಾರ್ಯ ನಿರ್ವಹಣೆಯ ಬಗ್ಗೆ ಯಾವುದೇ ಮತದಾರರು ಸ್ಥಳೀಯ ಚುನಾವಣಾಧಿಕಾರಿಗಳನ್ನು ಪ್ರಶ್ನಿಸಿರಲಿಲ್ಲ ಎಂದು ಚುನಾವಣಾ ಆಯೋಗದ ವಕ್ತಾರರಾದ ಶೆಫಾಲಿ ಶರಣ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಎನ್‌ಸಿಪಿ ನಾಯಕ ದೀಪಕ್ ಪವಾರ್ ಅವರು ಈ ವಿಷಯವನ್ನೆತ್ತಿದ್ದರಾದರೂ ನಿಗದಿತ ನಮೂನೆಯಲ್ಲಿ ದೂರನ್ನು ದಾಖಲಿಸಲು ನಿರಾಕರಿಸಿದ್ದರು ಎಂದು ಅವರು ಹೇಳಿದರು.

ಸೋಮವಾರ ಮತದಾನದ ಸಂದರ್ಭದಲ್ಲಿ ಹಲವಾರು ಸ್ಥಳಗಳಲ್ಲಿ ಮತದಾನ ಯಂತ್ರಗಳನ್ನು ತಿರುಚಲಾಗಿತ್ತು ಎಂದು ಎನ್‌ಸಿಪಿ ಮತ್ತು ಕಾಂಗ್ರೆಸ್ ಆರೋಪಿಸಿದ್ದವು.

ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಮತದಾನ ಯಂತ್ರಗಳನ್ನು ತಿರುಚಲಾಗಿದ್ದ ಶಂಕೆಗಳನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿದ್ದವು. ಆದರೆ ಈ ಯಂತ್ರಗಳಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದ ಚುನಾವಣಾ ಆಯೋಗವು,ತಮ್ಮ ಆರೋಪಗಳನ್ನು ಸಾಬೀತುಗೊಳಿಸುವಂತೆ ರಾಜಕೀಯ ಪಕ್ಷಗಳು ಮತ್ತು ತಾಂತ್ರಿಕ ತಜ್ಞರಿಗೆ ಸವಾಲು ಒಡ್ಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News