ಅಲ್ಪೇಶ್ ಠಾಕೂರ್ ಸೇರಿ ಪಕ್ಷಾಂತರಿಗಳಿಗೆ ಪಾಠ ಕಲಿಸಿದ ಮತದಾರರು

Update: 2019-10-24 15:35 GMT

ಬಾರಾಮತಿ, ಅ.24: ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆ ಮತ್ತು ಬಿಹಾರ, ಗುಜರಾತ್ ನ ಉಪಚುನಾವಣಾ ಸಮರದ ಫಲಿತಾಂಶಗಳು ಇಂದು ಹೊರಬಿದ್ದಿದ್ದು, ಪಕ್ಷಾಂತರಿಗಳಿಗೆ ಸೋಲುಣಿಸುವ ಮೂಲಕ ಮತದಾರರು ಸೂಕ್ತ ಪಾಠವನ್ನು ಕಲಿಸಿದ್ದಾರೆ.

ಮಹಾರಾಷ್ಟ್ರದ ಪ್ರತಿಷ್ಠಿತ ಬಾರಾಮತಿ ಕ್ಷೇತ್ರದಿಂದ ಹಿರಿಯ ಎನ್‍ ಸಿಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ದಾಖಲೆಯ 1,60,965 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಪವಾರ್ ಎದುರಾಳಿ ಬಿಜೆಪಿ ಅಭ್ಯರ್ಥಿ ಗೋಪಿಚಂದ್ ಪಡಲ್ಕರ್ ಸಹಿತ ಇತರ ಎಲ್ಲಾ ಅಭ್ಯರ್ಥಿಗಳು ಇಲ್ಲಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.

ಪವಾರ್ ಎದುರು ಠೇವಣಿ ಕಳೆದುಕೊಂಡ ಗೋಪಿಚಂದ್ ಮೊದಲು ಪ್ರಕಾಶ್ ಅಂಬೇಡ್ಕರ್ ರ ವಂಚಿತ್ ಬಹುಜನ್ ಅಘಾದಿ (ವಿಪಿಎ) ಪಕ್ಷದಲ್ಲಿದ್ದವರು. ಗೋಪಿಚಂದ್ ರನ್ನು ಪಕ್ಷಕ್ಕೆ ಆಹ್ವಾನಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, "ಗೋಪಿಚಂದ್ ಹುಲಿಯಂತೆ" ಎಂದಿದ್ದರು. ಪವಾರ್ ಗೆ ಗೋಪಿಚಂದ್ ತೀವ್ರ ಪೈಪೋಟಿ ನೀಡಲಿದ್ದಾರೆ ಎಂದು ನಿರೀಕ್ಷೆಯಿತ್ತಾದರೂ ಗೋಪಿಚಂದ್ ಠೇವಣಿ ಕಳೆದುಕೊಂಡು ಸೋಲಿಗೆ ಶರಣಾಗಿದ್ದಾರೆ.

ಅಜಿತ್ ಪವಾರ್ ಅವರು ಒಟ್ಟು 1,90,362 ಮತಗಳನ್ನು ಪಡೆದರೆ ಗೋಪಿಚಂದ್ ಕೇವಲ 29,397 ಮತಗಳನ್ನು ಪಡೆಯಲು ಸಫಲವಾದರು. ಬಾರಾಮತಿ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿ ಹಾಗೂ ಎನ್‍ ಸಿಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿತ್ತು. ``ಪವಾರ್ ಅವರನ್ನು ಕೆಳಗಿಳಿಸುವ  ಸವಾಲನ್ನು ಬಿಜೆಪಿ ಕೈಗೆತ್ತಿಕೊಂಡಿದೆ'' ಎಂದು ಸಿಎಂ ದೇವೇಂದ್ರ ಫಡ್ನವಿಸ್ ಈ ಹಿಂದೆಯೇ ಘೋಷಿಸಿದ್ದರು.

ಕಾಂಗ್ರೆಸ್ ತೊರೆದು ಸೋಲಿನ ರುಚಿ ಕಂಡ ಅಲ್ಪೇಶ್ ಠಾಕೂರ್

ಗುಜರಾತ್ ನ ವಿಧಾನಸಭಾ ಉಪಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಾದ ರಾಧನ್ಪುರ್, ಬಯಾಡ್ ಮತ್ತು ತರಾಡ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಬಿಜೆಪಿಯು ಲುನಾವಾಡಾ, ಖೆರಾಲು ಮತ್ತು ಅಮ್ರೈವಾಡಿಯಲ್ಲಿ ಬಿಜೆಪಿ ಜಯ ಗಳಿಸಿದೆ.

ಕಾಂಗ್ರೆಸ್ ಶಾಸಕರಾಗಿದ್ದ ಅಲ್ಪೇಶ್ ಠಾಕೂರ್ ಮತ್ತು ಅವರ ಆಪ್ತ ಧವಳ್ ಸಿಂಗ್ ಝಾಲಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಪಕ್ಷಾಂತರಗೊಂಡ ಕಾರಣ ರಾಧನ್ಪುರ ಮತ್ತು ಬಯಾಡ್ ನಲ್ಲಿ ಉಪಚುನಾವಣೆ ನಡೆಯಿತು. ಹಾಲಿ ಶಾಸಕರು ಲೋಕಸಭೆಗೆ ಆಯ್ಕೆಯಾದ ಕಾರಣ ತರಾಡ್, ಲುನಾವಾಡಾ, ಖೆರಾಲು ಮತ್ತು ಅಮ್ರೈವಾಡಿಯಲ್ಲಿ ಉಪಚುನಾವಣೆ ನಿಗದಿಯಾಗಿತ್ತು.

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಅಲ್ಪೇಶ್ ಠಾಕೂರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ದೇಸಾಯಿ ರಘುಭಾಯ್ ಮೆರಾಜ್ ಭಾಯ್ ವಿರುದ್ಧ ಸೋಲನುಭವಿಸಿದರು. 2017ರ ವಿಧಾನಸಭಾ ಚುನಾವಣೆ ವೇಳೆ ಅಲ್ಪೇಶ್ ಠಾಕೂರ್ ರನ್ನು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾಂಗ್ರೆಸ್ ನೇಮಕ ಮಾಡಿತ್ತು. ಲೋಕಸಭಾ ಚುನಾವಣೆ ಸಂದರ್ಭ ಅವರು ಕಾಂಗ್ರೆಸನ್ನು ತೊರೆದಿದ್ದರು.

ಕಾಂಗ್ರೆಸ್ ತೊರೆದು ಬಯಾಡ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಲ್ಪೇಶ್ ಠಾಕೂರ್ ಆಪ್ತ ಧವಳ್ ಸಿಂಗ್ ಝಾಲಾ ಕೂಡಾ ಸೋಲನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News