​ರಾಜ್ಯಸಭೆ ಬಹುಮತದ ಬಿಜೆಪಿ ಕನಸಿಗೆ ಪೆಟ್ಟುಕೊಟ್ಟ ವಿಧಾನಸಭಾ ಚುನಾವಣೆ

Update: 2019-10-25 04:01 GMT

ಹೊಸದಿಲ್ಲಿ: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಆಗದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಬಹುಮತ ಗಳಿಸುವ ಬಿಜೆಪಿ ಪಕ್ಷದ ಕನಸಿಗೆ ಪೆಟ್ಟು ಬಿದ್ದಿದೆ.

ಎರಡು ರಾಜ್ಯಗಳ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದಲ್ಲಿ, 2018ರ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿನಿಂದಾಗಿ ರಾಜ್ಯಸಭೆಯಲ್ಲಿ ಆಗಿದ್ದ ನಷ್ಟ ಭರ್ತಿ ಮಾಡಿಕೊಳ್ಳಲು ಅವಕಾಶವಿತ್ತು. ಎರಡು ರಾಜ್ಯಗಳ ಫಲಿತಾಂಶದ ಬಳಿಕ ರಾಜ್ಯಸಭೆಯಲ್ಲಿ ಬಿಜೆಪಿಗೆ ಎರಡು ಸ್ಥಾನಗಳು ನಷ್ಟವಾಗಲಿದ್ದು, ಇದು ಕಾಂಗ್ರೆಸ್ ತೆಕ್ಕೆಗೆ ಹೋಗಲಿದೆ.

ಮಹಾರಾಷ್ಟ್ರ ಹಾಗೂ ಹರ್ಯಾಣ, ರಾಜ್ಯಸಭೆಗೆ ಕ್ರಮವಾಗಿ 19 ಮತ್ತು 5 ಸದಸ್ಯರನ್ನು ಕಳುಹಿಸುತ್ತವೆ. ಹರ್ಯಾಣದ ಐದು ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಹೊಂದಿದ್ದರೆ, ಬಿಜೆಪಿಯ ಮೂವರು ಸದಸ್ಯರಿದ್ದಾರೆ. ಸುಭಾಷ್‌ ಚಂದ್ರ ಪಕ್ಷೇತರರಾಗಿ ಹರ್ಯಾಣದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಅವರು ಕೂಡಾ ಬಿಜೆಪಿ ಬೆಂಬಲಿತ ಅಭ್ಯರ್ಥಿ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಏಳು ಸಂಸದರನ್ನು ಹೊಂದಿದ್ದರೆ, ಎನ್‌ಡಿಎ 11 ಸದಸ್ಯರನ್ನು ಹೊಂದಿದೆ.

ಹರ್ಯಾಣದ ಐದು ರಾಜ್ಯಸಭಾ ಕ್ಷೇತ್ರಗಳ ಪೈಕಿ ತಲಾ ಎರಡು ಸ್ಥಾನಗಳಿಗೆ 2020 ಮತ್ತು 2022ರಲ್ಲಿ ಚುನಾವಣೆ ನಡೆಯುತ್ತದೆ. ಮಹಾರಾಷ್ಟ್ರದ 19 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ 2020ರಲ್ಲಿ ಹಾಗೂ ಆರು ಸ್ಥಾನಗಳಿಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳ ಉಳಿದ ಸ್ಥಾನಗಳಿಗೆ 2024ರಲ್ಲಿ ಚುನಾವಣೆ ನಡೆಯಬೇಕಿದೆ. 2020 ಮತ್ತು 2022ರಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುವ 13 ಕ್ಷೇತ್ರಗಳ ಪೈಕಿ ಎನ್‌ಡಿಎ 7 ಹಾಗೂ ಕಾಂಗ್ರೆಸ್-ಎನ್‌ಸಿಪಿ ಐದು ಸದಸ್ಯರನ್ನು ಹೊಂದಿವೆ.

ಪಿಆರ್‌ಎಸ್ ಶಾಸಕಾಂಶ ಸಂಶೋಧನಾ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ರಾಜ್ಯಸಭೆಗೆ ಸದಸ್ಯರನ್ನು ಕಳುಹಿಸಲು ಹರ್ಯಾಣದಲ್ಲಿ 30 ಹಾಗೂ ಮಹಾರಾಷ್ಟ್ರದಲ್ಲಿ 36 ಶಾಸಕರ ಅಗತ್ಯವಿದೆ. 2020ಕ್ಕೆ ನಡೆಯುವ ಚುನಾವಣೆಯಲ್ಲಿ ಹರ್ಯಾಣದಿಂದ ತನ್ನ ಸ್ವಂತ ಬಲದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಕಳುಹಿಸುವ ಅವಕಾಶ ಬಿಜೆಪಿಗೆ ಇಲ್ಲ. ಅಂತೆಯೇ ಮಹಾರಾಷ್ಟ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿಯನ್ನು ರಾಜ್ಯಸಭೆಗೆ ಬಿಜೆಪಿ ಕಳುಹಿಸಲಾಗದು. ಕಾಂಗ್ರೆಸ್ ಹರ್ಯಾಣದಿಂದ ಒಬ್ಬರು ಹಾಗೂ ಮಹಾರಾಷ್ಟ್ರದಿಂದ ಇಬ್ಬರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶವಿದೆ. ಬಹುತೇಕ ಇದೇ ಸ್ಥಿತಿ 2022ರ ಚುನಾವಣೆಗೂ ಇರುತ್ತದೆ.

ರಾಜ್ಯಸಭೆಯಲ್ಲಿ ಬಿಜೆಪಿ 82 ಹಾಗೂ ಕಾಂಗ್ರೆಸ್ 45 ಸದಸ್ಯರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News