ಪ್ರಧಾನಿ ಮೋದಿಗೆ ಕೊಡುಗೆಯಾಗಿ ನೀಡಿದ ಸ್ಮರಣಿಕೆಗಳ ಇ-ಹರಾಜು ಪ್ರಕ್ರಿಯೆ ಅಂತ್ಯ

Update: 2019-10-25 13:53 GMT

ಹೊಸದಿಲ್ಲಿ, ಅ.25: ಪ್ರಧಾನಿ ನರೇಂದ್ರ ಮೋದಿ ಪಡೆದಿರುವ ಸ್ಮರಣಿಕೆಗಳ ಪ್ರದರ್ಶನ ಮತ್ತು ಇ-ಹರಾಜು ಕಾರ್ಯಕ್ರಮ ಶುಕ್ರವಾರ ಮುಕ್ತಾಯಗೊಂಡಿದೆ.

ಇದರಲ್ಲಿ ಪ್ರಧಾನಿ ಮೋದಿ ಮಹಾತ್ಮಾ ಗಾಂಧಿಯವರೊಂದಿಗಿರುವ ವರ್ಣಚಿತ್ರ ಅತ್ಯಧಿಕ 25 ಲಕ್ಷ ರೂ. ಬಿಡ್ ಗಳಿಸಿದೆ. ಪ್ರಧಾನಿ ಮೋದಿಗೆ ಕೊಡುಗೆಯಾಗಿ ನೀಡಿರುವ 2,772 ಸ್ಮರಣಿಕೆಗಳನ್ನು ಹೊಸದಿಲ್ಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಸೆಪ್ಟೆಂಬರ್ 14ರಿಂದ ಪ್ರದರ್ಶನ ಮತ್ತು ಇ-ಹರಾಜಿಗೆ ಇಡಲಾಗಿದೆ. ಇದರಿಂದ ಬರುವ ಮೊತ್ತವನ್ನು ‘ನವಾಮಿ ಗಂಗಾ’ ಅಭಿಯಾನಕ್ಕೆ ನೀಡಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಈ ಪ್ರಕ್ರಿಯೆ ಅಕ್ಟೋಬರ್ 3ರಂದು ಮುಕ್ತಾಯವಾಗಬೇಕಿತ್ತು. ಬಳಿಕ ಇದನ್ನು ಮತ್ತೆ ಮೂರು ವಾರ ಮುಂದುವರಿಸಲು ಸರಕಾರ ನಿರ್ಧರಿಸಿದೆ.

ಎಲ್ಲಾ ವಸ್ತುಗಳೂ ಮಾರಾಟವಾಗಿವೆ ಎಂದು ಮೂಲಗಳು ತಿಳಿಸಿವೆ. ಪ್ರದರ್ಶನಕ್ಕಿಟ್ಟ ಸ್ಮರಣಿಕೆಗಳಲ್ಲಿ ತಾವರೆ ಪುಷ್ಪದ ಆಕಾರದಲ್ಲಿರುವ ಮರದ ಪೆಟ್ಟಿಗೆಯಲ್ಲಿರುವ ಸಣ್ಣ ಗಣೇಶನ ಮೂರ್ತಿಗೆ 500 ರೂ. ಮೂಲ ಬೆಲೆ ನಿಗದಿಯಾಗಿತ್ತು. ತ್ರಿವರ್ಣದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಹಾತ್ಮಾ ಗಾಂಧೀಜಿಯವರೊಂದಿಗಿರುವ ಅಕ್ರಿಲಿಕ್ ಚಿತ್ರಕಲೆಯ ಕಲಾಕೃತಿಗೆ 2.5 ಲಕ್ಷ ರೂ. ಮೂಲಬೆಲೆ ನಿಗದಿಯಾಗಿದ್ದು ಅಂತಿಮವಾಗಿ 25 ಲಕ್ಷ ರೂ.ಗೆ ಮಾರಾಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News