ಮತಗಳಿಕೆಯ ಅಮಲಿನಿಂದಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದರು: ಸಿಟಿ ರವಿ

Update: 2019-10-28 15:13 GMT

ಚಿಕ್ಕಮಗಳೂರು, ಅ.28: ಟಿಪ್ಪು ಜಯಂತಿ ಆಚರಣೆ ಕುರಿತು ಸಿ.ಎಂ.ಇಬ್ರಾಹಿಂ ಅವರು ಮೊದಲೇ ತಮ್ಮ ಮಿತ್ರ ಸಿದ್ದರಾಮಯ್ಯ ಅವರಿಗೆ ತಿಳುವಳಿಕೆ ನೀಡಿದ್ದರೆ ಕುಟ್ಟಪ್ಪ ಅವರ ಪ್ರಾಣವೂ ಉಳಿಯುತ್ತಿತ್ತು, ರಾಜ್ಯದಲ್ಲಿ ಗೊಂದಲವೂ ಉಂಟಾಗುತ್ತಿರಲಿಲ್ಲ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ಅವರು, ಟಿಪ್ಪು ಜಯಂತಿಯನ್ನು ಸರಕಾರ ವತಿಯಿಂದ ಆಚರಿಸಿದ್ದು, ಸರಿಯಲ್ಲ. ಮುಸ್ಲಿಮರಲ್ಲಿ ಈ ರೀತಿ ಜಯಂತಿ ಆಚರಿಸುವುದೂ ಇಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮೊದಲೇ ಹೇಳಿದ್ದೆ ಎಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂ ಅವರು ಮೊದಲೇ ಈ ಕೆಲಸ ಮಾಡಿದ್ದರೆ, ಮಡಿಕೇರಿಯ ಕುಟ್ಟಪ್ಪ ಅವರ ಪ್ರಾಣವೂ ಉಳಿಯುತ್ತಿತ್ತು. ರಾಜ್ಯದ ಜನತೆಯಲ್ಲಿ ಗೊಂದಲವೂ ಇರುತ್ತಿರಲಿಲ್ಲ ಎಂದರು.

ಮತಗಳಿಕೆ ಹೆಚ್ಚಾಗುತ್ತದೆ ಎಂಬ ಅಮಲು ಹೊಂದಿದ್ದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಲು ಮುಂದಾದರು. ಚುನಾವಣೆ ಮುಗಿದು ಫಲಿತಾಂಶ ಹೊರಬರುವವರೆಗೂ ಅವರ ಅಮಲು ಇಳಿದಿರಲಿಲ್ಲ. ಸಾವರ್ಕರ್ ಅವರ ಕುರಿತು ವಿರೋಧಿಸುವ ಸಿದ್ದರಾಮಯ್ಯ, ತಮ್ಮದೇ ಊರಿನವರಾದ ಟಿಪ್ಪು ಕುರಿತು ಇತಿಹಾಸ ತಿಳಿಯಲಿಲ್ಲ ಎಂಬುದನ್ನು ಹೇಗೆ ಒಪ್ಪಲು ಸಾಧ್ಯ. ಅವರದು ಜಾಣ ಮರೆವೋ ಅಥವಾ ಹಳದಿ ಕನ್ನಡಕ ಹಾಕಿಕೊಂಡು ಇತಿಹಾಸ ಓದಿರಬೇಕು ಎಂದು ಟೀಕಿಸಿದರು.

ಟಿಪ್ಪು ಜಯಂತಿ ಆಚರಿಸುವುದಾಗಿ ಶರತ್ ಬಚ್ಚೇಗೌಡ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಟಿಪ್ಪು ಜಯಂತಿ ಆಚರಿಸಬಾರದು ಎಂಬುದು ರಾಜ್ಯ ಸರ್ಕಾರದ ತೀರ್ಮಾನವೂ ಆಗಿದೆ. ಅದೇ ರೀತಿ ಬಿಜೆಪಿಯ ತೀರ್ಮಾನವೂ ಆಗಿದೆ. ಯಾವ ಕಾರಣಕ್ಕಾಗಿ ವಿರೋಧಿಸುತ್ತಿದ್ದೇವೆ ಎಂಬುದನ್ನು ಈ ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ಶರತ್ ಬಚ್ಚೇಗೌಡ ಅವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ಹೇಳಿಕೆಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News