ರಾಷ್ಟ್ರೀಯ ಅಪರಾಧ ದಾಖಲೆಗಳ ವರದಿಯಲ್ಲಿ ಜಾರ್ಖಂಡ್ ಗುಂಪು ಹತ್ಯೆಗಳ ಉಲ್ಲೇಖವೇ ಇಲ್ಲ !

Update: 2019-10-28 15:57 GMT

ರಾಂಚಿ, ಅ.28: ಜಾರ್ಖಂಡ್‌ನಲ್ಲಿ 2017ರಲ್ಲಿ ವದಂತಿಗಳ ಆಧಾರದಲ್ಲಿ ನಡೆದ ಗುಂಪು ಹಿಂಸಾಚಾರದಲ್ಲಿ 7 ಮಂದಿ ಮೃತಪಟ್ಟಿದ್ದರೂ, ಇಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ(ಎನ್‌ಸಿಆರ್‌ಬಿ)ದ 2017ರ ವರದಿಯಲ್ಲಿ, ಜಾರ್ಖಂಡ್‌ನಲ್ಲಿ ‘ಸುಳ್ಳು /ನಕಲಿ ಸುದ್ದಿ ಮತ್ತು ವದಂತಿ’ ನಂಬಿ ಯಾವುದೇ ಹಿಂಸಾಚಾರದ ಪ್ರಕರಣ ನಡೆದಿಲ್ಲ ಎಂದು ತಿಳಿಸಲಾಗಿದೆ. ಐಪಿಸಿಯ ಸೆಕ್ಷನ್ 505ರಡಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಆಧರಿಸಿ, ‘ಸುಳ್ಳು/ನಕಲಿ ಸುದ್ದಿ ಮತ್ತು ವದಂತಿ’ ವಿಭಾಗದಡಿ ಸಂಗ್ರಹಿಸಿರುವ ಅಂಕಿ ಅಂಶಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

 2017ರಲ್ಲಿ ಜಾರ್ಖಂಡ್‌ನ ಹಲವೆಡೆ ಮಕ್ಕಳ ಕಳ್ಳರು ಸಕ್ರಿಯವಾಗಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಬಳಿಕ ಸೆರಾಯ್‌ ಕೆಲ-ಖರ್ಸವಾನ್ ಮತ್ತು ಪೂರ್ವ ಸಿಂಘ್ ‌ಭಮ್ ಜಿಲ್ಲೆಯಲ್ಲಿ ಮೇ 18ರಂದು ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ವ್ಯಕ್ತಿಗಳ ಮೇಲೆ ಗುಂಪು ಹಲ್ಲೆ ನಡೆದಿದ್ದು ಒಟ್ಟು 7 ಮಂದಿ ಸಾವನ್ನಪ್ಪಿದ್ದರು. ಮಕ್ಳಳ ಕಳ್ಳರ ಬಗ್ಗೆ ಎಚ್ಚರವಿರಲಿ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದ ಆರೋಪದಲ್ಲಿ ಸ್ಥಳೀಯ ಟಿವಿ ಚಾನೆಲ್‌ನ ಪತ್ರಕರ್ತನ ಸಹಿತ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು.

 ಜಾರ್ಖಂಡ್‌ನಲ್ಲಿ ಕಳೆದ 3 ವರ್ಷದಲ್ಲಿ ಗೋಹತ್ಯೆ ಮಾಡಿರುವ ಶಂಕೆಯಲ್ಲಿ ಮತ್ತು ಮಕ್ಕಳ ಕಳ್ಳರೆಂಬ ಅನುಮಾನದಲ್ಲಿ 21 ಸಾವು ಸಂಭವಿಸಿದೆ. ಅಲ್ಲದೆ ವಾಮಾಚಾರ ಪ್ರಯೋಗಿಸಿದ ಶಂಕೆಯಲ್ಲಿ 2017ರ ಜನವರಿಯಿಂದ ಈವರೆಗೆ 90ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ವದಂತಿ ಹಬ್ಬುವ ಮೂಲಕ ಜನರಲ್ಲಿ ಆತಂಕ ಹೆಚ್ಚಿಸಿದ ಆರೋಪದಲ್ಲಿ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗುಂಪು ಹಲ್ಲೆ/ಹತ್ಯೆ ಆರೋಪದಲ್ಲಿ ಒಟ್ಟು 26 ಮಂದಿಯನ್ನು ಬಂಧಿಸಲಾಗಿದ್ದು ವಿಚಾರಣೆ ಪ್ರಗತಿಯಲ್ಲಿದೆ. ಆದರೂ, ಎನ್‌ಸಿಆರ್‌ಬಿ ವರದಿಯಲ್ಲಿ ಈ ಯಾವುದೇ ಪ್ರಕರಣವನ್ನು ಉಲ್ಲೇಖಿಸಿಲ್ಲ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನೀಡಿದ ಅಂಕಿ ಅಂಶ ಮಾಹಿತಿಯನ್ನು ಆಧರಿಸಿ ವರದಿ ತಯಾರಿಸಲಾಗಿದೆ ಎಂದು ಎನ್‌ಸಿಆರ್‌ಬಿ ತಿಳಿಸಿದೆ. ವದಂತಿ ಹರಡುವುದು ಗುಂಪು ಹಲ್ಲೆ ಘಟನೆಗಳಿಗೆ ಮೂಲಕಾರಣವಾಗಿದ್ದು ಇಂತಹ ಪ್ರಕರಣಗಳನ್ನು ಐಪಿಸಿ ಸೆಕ್ಷನ್ 505ರಡಿ ದಾಖಲಿಸಲಾಗಿದೆ. ಇವುಗಳನ್ನು ಎನ್‌ಸಿಆರ್‌ಬಿ ಮಾಹಿತಿಯಲ್ಲಿ ಸೇರಿಸದಿರುವ ಬಗ್ಗೆ ಗಮನ ಹರಿಸಬೇಕಿದೆ ಎಂದು ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಎಸ್ಪಿ ಆಗಿದ್ದ, ಈಗ ಮುಖ್ಯಮಂತ್ರಿಗಳ ಭದ್ರತಾಧಿಕಾರಿಯಾಗಿರುವ ವಿಮಲ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News