​ಕೊಡಗು ಜಿಲ್ಲೆಯ ಇಬ್ಬರು ಸೈನಿಕರಿಗೆ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ

Update: 2019-10-28 18:14 GMT
ಲೆಫ್ಟಿನೆಂಟ್ ಜನರಲ್(ನಿ)ಬಿಎನ್. ಬಿಎಂ. ಪ್ರಸಾದ್, ಸುಬೇದಾರ್(ನಿ) ಚೇನಂಡ ಎ. ಕುಟ್ಟಪ್ಪ

ಮಡಿಕೇರಿ,ಅ.28: ಕೊಡಗು ಜಿಲ್ಲೆಯ ಇಬ್ಬರು ಸೈನಿಕರಿಗೆ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸುಬೇದಾರ್(ನಿ) ಚೇನಂಡ ಎ. ಕುಟ್ಟಪ್ಪ ಮತ್ತು ಲೆಫ್ಟಿನೆಂಟ್ ಜನರಲ್(ನಿ)ಬಿಎನ್. ಬಿಎಂ. ಪ್ರಸಾದ್ ಅವರುಗಳು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಚೇನಂಡ ಎ.ಚಂಗಪ್ಪ ಅವರಿಗೆ ಬಾಕ್ಸಿಂಗ್ ಕ್ರೀಡಾ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದರೆ, ಲೆಫ್ಟಿನೆಂಟ್ ಜನರಲ್ ಬಿಎನ್.ಬಿಎಂ. ಪ್ರಸಾದ್ ಎಸ್.ಎಂ, ವಿಎಸ್‍ಎಂ ಅವರನ್ನು ವೈದ್ಯಕೀಯ ಕ್ಷೇತ್ರದಲ್ಲಿನ ಅಪಾರ ಸಾಧನೆಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮತ್ತೊಂದು ವಿಶೇಷವೆಂದರೆ ಈ ಇಬ್ಬರು ಸಾಧಕರು ಭಾರತೀಯ ಭೂ ಸೇನೆಯ ವೀರ ಯೋಧರು.

ಚೇನಂಡ ಎ.ಕುಟ್ಟಪ್ಪ
ಕೋಕೇರಿ ಗ್ರಾಮದವ ಚೇನಂಡ  ರಘು ಅಚ್ಚಯ್ಯ ಮತ್ತು ಶಾಂತಿ ಅಚ್ಚಯ್ಯ ದಂಪತಿ ಪುತ್ರರಾದ ಕುಟ್ಟಪ್ಪ 1996 ರಲ್ಲಿ ಭಾರತೀಯ ಸೇನಾ ಪಡೆಗೆ ಸೇರ್ಪಡೆಯಾದರು. ಬಾಕ್ಸಿಂಗ್ ನಲ್ಲಿ ಒಲವು ಹೊಂದಿದ್ದ ಚೇನಂಡ ಕುಟ್ಟಪ್ಪ,  ಸೇನಾಪಡೆಯಲ್ಲಿದ್ದುಕೊಂಡೇ ಬಾಕ್ಸಿಂಗ್ ನಲ್ಲಿ ತರಬೇತಿ ಪಡೆದರು.
ಭಾರತದ ಹೆಮ್ಮೆಯ ಬಾಕ್ಸಿಂಗ್ ಚಾಂಪಿಯನ್ ವಿಜಯೇಂದ್ರ ಸಿಂಗ್ ಅವರಿಗೂ ಚೇನಂಡ ಕುಟ್ಟಪ್ಪ ಬಾಕ್ಸಿಂಗ್ ಕೋಚ್ ಆಗಿದ್ದರು ಎಂಬುದು ವಿಶೇಷ. 

ಅತ್ಯುತ್ತಮ ಬಾಕ್ಸರ್ ಆಗಿರುವ ಚೇನಂಡ ಕುಟ್ಟಪ್ಪ ಅವರಿಗೆ ದೇಶದ ಪ್ರತಿಷ್ಟಿತ ಕ್ರೀಡಾ ಪ್ರಶಸ್ತಿ ದ್ರೋಣಾಚಾರ್ಯ ಕೂಡ ಸಂದಿದ್ದು ರಾಷ್ಚ್ರಪತಿ ಅವರಿಂದ ಕುಟ್ಟಪ್ಪ ಈ ಪ್ರಶಸ್ತಿ ಪಡೆದಿದ್ದರು. ಇದೀಗ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವವೂ ಕುಟ್ಟಪ್ಪ ಅವರಿಗೆ ಲಭಿಸಿದೆ. 

ಪಂಜಾಬ್ ನಲ್ಲಿರುವ  ಸೇನಾ ಪಡೆಯ ಆರ್ಮಿ ಕ್ರೀಡಾತರಬೇತಿ ಕೇಂದ್ರದಲ್ಲಿ ಪ್ರಸ್ತುತ ಕರ್ತವ್ಯ ಸಲ್ಲಿಸುತ್ತಿರುವ ಕುಟ್ಟಪ್ಪ, ಈವರೆಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬಾರಿ ಪಾಲ್ಗೊಂಡು 1 ಬೆಳ್ಳಿ, 2 ಕಂಚು ಪಡೆದಿದ್ದಾರೆ. ಚೇನಂಡ ಕುಟ್ಟಪ್ಪ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಮತ್ತು ಒಮ್ಮೆ ಜೂನಿಯರ್ ನ್ಯಾಷನಲ್ ಪಂದ್ಯಾಟದಲ್ಲಿಯೂ ಪಾಲ್ಗೊಂಡಿದ್ದಾರೆ.  
ಚೇನಂಡ ಕುಟ್ಟಪ್ಪ ಅವರದ್ದು ಪತ್ನಿ ಶೈಲಾ ಮತ್ತು 9 ವರ್ಷದ ಪುತ್ರಿ ಯುಧಿಯನ್ನು ಹೊಂದಿರುವ ಸುಂದರ ಕುಟುಂಬ. 

'ನಿರೀಕ್ಷೆ ಇರಲಿಲ್ಲ'
ರಾಜ್ಯೋತ್ಸವ ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ, 40 ವರ್ಷ ಪ್ರಾಯಕ್ಕೆ ಪ್ರತಿಷ್ಟಿತ ಪ್ರಶಸ್ತಿ ದೊರಕಿದ್ದು ಸಂತೋಷ ತಂದಿದೆ ಎಂದು ಚೇನಂಡ ಕುಟ್ಟಪ್ಪ  ಪ್ರತಿಕ್ರಿಯಿಸಿದರು.

ಲೆ.ಜ. ಪ್ರಸಾದ್ ಎಸ್‍ಎಂ,ವಿಎಸ್‍ಎಂ
ಮಡಿಕೇರಿ ತಾಲೂಕಿನ ಬಿಳಿಗೇರಿ ನಿವಾಸಿ ನಾರಾಯಣ ಭಟ್, ಲಕ್ಷ್ಮಮ್ಮ ದಂಪತಿಯ ಪುತ್ರರಾದ ಲೆ.ಜ. ಬಿಳಿಗೇರಿ ಮಹಾವೀರ ಪ್ರಸಾದ್ ಎಸ್‍ಎಂ,ವಿಎಸ್‍ಎಂ ಅವರು ಭಾರತೀಯ ಸೇನೆಯಲ್ಲಿ 1977ರಿಂದ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿ, 2016ರಲ್ಲಿ ಭಾರತೀಯ ರಕ್ಷಾಣಾ ಪಡೆಗಳ ವೈದ್ಯಕೀಯ ವಿಭಾಗದ ಮಹಾ ನಿರ್ದೇಶಕರಾಗಿ ಸೇವಾ ನಿವೃತ್ತಿ ಹೊಂದಿದರು. 

ಫೀಲ್ಡ್ ಮಾರ್ಷಲ್ ಮಾಣಿಕ್ ಷಾ, ಈ ಹಿಂದಿನ ರಾಷ್ಟ್ರಪತಿ ಪ್ರಣಾವ್ ಮುಖರ್ಜಿ, ರಾಜ್ಯ ಸಭಾ ಸ್ಪೀಕರ್ ಸೋಮನಾಥ ಚಠರ್ಜಿ, ಏರ್ ಚೀಫ್ ಮಾರ್ಷಲ್‍ಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಗೌರವ ಸರ್ಜನ್ ಆಗಿಯೂ ಬಿಎನ್.ಬಿಎಂ. ಪ್ರಸಾದ್ ಕರ್ತವ್ಯ ನಿರ್ವಹಿಸಿದ್ದಾರೆ. 
ತಮ್ಮ ಸೇವಾ ನಿವೃತ್ತಿಯ ನಂತರ ರಾಜಸ್ಥಾನದ ಜೋದ್ ಪುರದಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಹಿರಿಯ ತಜ್ಞ ವೈದ್ಯರಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ತಮಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಬಗ್ಗೆ ಮಾತನಾಡಿದ ಬಿಳಿಗೇರಿ ಮಹಾವೀರ ಪ್ರಸಾದ್, ತಮ್ಮ ಸೇವೆಯನ್ನು ಸರಕಾರ ಪರಿಗಣಿಸಿರುವುದು ತುಂಬಾ ಸಂತಸ ತಂದಿದೆ, ಇದು ಭಾರತೀಯ ಸೇನೆಗೆ ಸಂದ ಗೌರವ ಎಂದು ಹೇಳಿದರು. ಇಂದು ಕೇಂದ್ರ ಸರಕಾರ ಯೋಧರ ಯೋಗ ಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ನನಗೆ ಬಂದಿರುವ ಪ್ರಶಸ್ತಿಯನ್ನು ಭಾರತೀಯ ಸೇನೆಗೆ ಅರ್ಪಿಸುತ್ತಿರುವುದಾಗಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News