ಪಾಲಕ್ಕಾಡ್ ನಲ್ಲಿ ಹತ್ಯೆಯಾದ ಶಂಕಿತ ನಕ್ಸಲರಲ್ಲಿ ಇಬ್ಬರು ಚಿಕ್ಕಮಗಳೂರು ಮೂಲದವರು

Update: 2019-10-29 14:28 GMT

ಚಿಕ್ಕಮಗಳೂರು, ಅ.29: ನಕ್ಸಲ್ ಚಳವಳಿಯಲ್ಲಿ ಸಕ್ರೀಯರಾಗಿ, ಭೂಗತರಾಗಿದ್ದರು ಎನ್ನಲಾಗಿದ್ದ ಜಿಲ್ಲೆಯ ಶಂಕಿತ ನಕ್ಸಲರಿಬ್ಬರು ಕೇರಳದಲ್ಲಿ ಎಎನ್‍ಎಫ್ ತಂಡ ನಡೆಸಿದ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಹತರಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಗಿನ ವೇಳೆ ನಕ್ಸಲರ ಗುಂಪೊಂದು ಸಭೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಎನ್‍ಎಫ್‍ನ ಥಂಡರ್ ಬೋಲ್ಟ್ ಹೆಸರಿನ ತಂಡವು ಎರಡು ಗುಂಪುಗಳಾಗಿ ಮಂಚಕಟ್ಟಿ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ನಕ್ಸಲರು ಎಎನ್‍ಎಫ್ ತಂಡದತ್ತ ಗುಂಡು ಹಾರಿಸಿದ್ದಾರೆ. ಇದಕ್ಕೆ ಎಎನ್‍ಎಫ್ ತಂಡದ ಸದಸ್ಯರು ಪ್ರತಿದಾಳಿ ನಡೆಸಿದ್ದು, ಈ ಗುಂಡಿನ ದಾಳಿಯಲ್ಲಿ ಮೂವರು ಹತರಾಗಿದ್ದಾರೆಂದು ಎಸ್ಪಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

"ಗುಂಡಿನ ದಾಳಿಯಲ್ಲಿ ಹತರಾದ ನಕ್ಸಲರನ್ನು ಕೇರಳದಲ್ಲಿ ಸಿಪಿಐ(ಮಾರ್ಕಿಸ್ಟ್) ಪಕ್ಷದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್.ಸುರೇಶ್, ಕಾರ್ತಿ ಎಂದು ತಿಳಿದು ಬಂದಿದ್ದು, ಈ ಪೈಕಿ ಶ್ರೀಮತಿ ಎಂಬವರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವರಾಗಿದ್ದು, 2008ರಿಂದ ಮಲೆನಾಡಿನ ನಕ್ಸಲ್ ಚಳವಳಿಯಲ್ಲಿ ಸಕ್ರೀಯರಾಗಿದ್ದರು. ಇನ್ನು ಸುರೇಶ್ ಅವರು ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವರಾಗಿದ್ದು, 2004ರಿಂದಲೇ ನಕ್ಸಲ್ ಚಳವಳಿಗೆ ಸೇರ್ಪಡೆಗೊಂಡಿದ್ದರು. ಗುಂಡಿನ ದಾಳಿಯಲ್ಲಿ ಹತರಾಗಿರುವ ಮತ್ತೊಬ್ಬ ಶಂಕಿತ ನಕ್ಸಲ್ ಕಾರ್ತಿ ತಮಿಳುನಾಡು ಮೂಲದವನು" ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಸುರೇಶ್ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಶೃಂಗೇರಿ, ಆಲ್ದೂರು ಪೊಲೀಸ್ ಠಾಣೆಗಳಲ್ಲಿ 21 ಪ್ರಕರಣಗಳಿದ್ದು, ಶ್ರೀಮತಿ ಅವರ ಮೇಲೆ ಕುದುರೆಮುಖ, ಶೃಂಗೇರಿ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಶ್ರೀಮತಿ ಹಾಗೂ ಎ.ಎಸ್.ಸುರೇಶ್ ಚಿಕ್ಕಮಗಳೂರಿನಲ್ಲಿ ಈ ಹಿಂದೆ ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದವರು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಆದಿವಾಸಿಗಳು, ದಲಿತರು, ರೈತಪರನಾದ ಹೋರಾಟಗಳು ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ನಂತರ ಮಲೆನಾಡಿನಲ್ಲಿ ಸಕ್ರೀಯವಾಗಿದ್ದ ನಕ್ಸಲ್ ಚಳವಳಿಗೆ ಸೇರಿ ಭೂಗತರಾಗಿದ್ದರು. ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಸಕ್ರೀಯವಾಗಿದ್ದ ಸಂದರ್ಭದಲ್ಲಿ ಶ್ರೀಮತಿ ಹಾಗೂ ಸುರೇಶ್ ವಿವಿಧ ನಕ್ಸಲ್ ತಂಡಗಳಲ್ಲಿ ಗುರುತಿಸಿಕೊಂಡಿದ್ದರು. 

ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಇವರ ಪತ್ತೆಗಾಗಿ ಅನೇಕ ಬಾರಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾವಚಿತ್ರಗಳನ್ನು ಪ್ರಕಟಿಸಿ ಸುಳಿವು ನೀಡುವಂತೆ ಪೊಲೀಸ್ ಇಲಾಖೆ ಕೋರಿತ್ತು. ಆದರೆ ಭೂಗತರಾಗಿದ್ದ ಇಬ್ಬರ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ ಎಂದು ತಿಳಿದು ಬಂದಿದ್ದು, ಹೊರ ರಾಜ್ಯಗಳ ನಕ್ಸಲ್ ಗುಂಪುಗಳನ್ನು ಸೇರಿಕೊಂಡಿರಬಹುದೆಂಬ ಮಾಹಿತಿ ಮಾತ್ರ ಇತ್ತೆನ್ನಲಾಗಿದೆ.

ಮಲೆನಾಡಿನಲ್ಲಿ ನಕ್ಸಲ್ ಚಳವಳಿ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಿದ್ದರಿಂದ ನಕ್ಸಲ್ ಚಳವಳಿಯಲ್ಲಿದ್ದ ಸದಸ್ಯರು ಪೊಲೀಸರ ಗುಂಡಿಗೆ ಬಲಿಯಾಗಿದ್ದರಿಂದ ಹಾಗೂ ಕೆಲ ನಕ್ಸಲರು ಸರಕಾರದ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಮುಖ್ಯವಾಹಿನಿಗೆ ಬಂದಿದ್ದರಿಂದ ಅಳಿದುಳಿದ ನಕ್ಸಲರು ಮಲೆನಾಡಿನಿಂದ ಹೊರ ರಾಜ್ಯಗಳ ನಕ್ಸಲ್ ಗುಂಪು ಸೇರಲಾರಂಭಿಸಿದ್ದರು. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುರೇಶ್ ಹಾಗೂ ಶೃಂಗೇರಿ ತಾಲೂಕಿನ ಶ್ರೀಮತಿ ಕೂಡ ಕೇರಳ ರಾಜ್ಯದಲ್ಲಿನ ನಕ್ಸಲ್ ಗುಂಪು ಸೇರಿದ್ದರೆಂದು ತಿಳಿದು ಬಂದಿದ್ದು, ಕಳೆದ ಎರಡು ವರ್ಷಗಳಿಂದ ಇವರು ಕೇರಳದಲ್ಲಿ ನಕ್ಸಲ್ ಚಳವಳಿಯಲ್ಲಿ ಸಕ್ರೀಯರಾಗಿದ್ದರೆಂದು ಹೇಳಲಾಗುತ್ತಿದೆ.

ಜಿಲ್ಲೆಯ ಮೂಡಿಗೆರೆ ಹಾಗೂ ಶೃಂಗೇರಿ ಮೂಲದ ಇಬ್ಬರು ನಕ್ಸಲರು ಕೇರಳದಲ್ಲಿ ಎನ್‍ಕೌಂಟರ್ ಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ತಾಲೂಕಾಗಿರುವ ಶೃಂಗೇರಿಯ ಅರಣ್ಯ ಪ್ರದೇಶಗಳಲ್ಲಿ ಮಂಗಳವಾರ ಎಎನ್‍ಎಫ್ ಸಿಬ್ಬಂದಿ ಕೂಂಬಿಂಗ್ ಕಾರ್ಯಚರಣೆ ನಡೆಸಿದ್ದಾರೆ. ಎನ್‍ಕೌಂಟರ್ ಗೆ ಬಲಿಯಾಗಿರುವ ಶ್ರೀಮತಿ ಹುಟ್ಟೂರಾಗಿರುವ ಶೃಂಗೇರಿಯ ಬೆಳಗೋಡು ಕೂಡಿಗೆ ಗ್ರಾಮದ ಸುತ್ತಮುತ್ತಲೂ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆಂದು ತಿಳಿದು ಬಂದಿದೆ.

ಮೃತದೇಹವನ್ನು ಗ್ರಾಮಕ್ಕೆ ತರಲು ಕೋರಿದ ಸಹೋದರ

ಕೇರಳದಲ್ಲಿ ಮೃತಪಟ್ಟಿದ್ದಾನೆಂದು ಹೇಳುತ್ತಿರುವ ಸುರೇಶ್ ಮೃತದೇಹವನ್ನು ಅಂಗಡಿ ಗ್ರಾಮಕ್ಕೆ ತರಲು ಜಿಲ್ಲಾಡಳಿತ ಸಹಾಯ ಮಾಡಬೇಕೆಂದು ಮೃತನ ಸಹೋದರ ಮಂಜುನಾಥ್ ಕೋರಿದ್ದಾರೆ. 

ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಸಹೋದರ ಸುರೇಶ್ ಅಲಿಯಾಸ್ ಮಹೇಶ್ ಕಳೆದ 20 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಚೆನ್ನಾಗಿ ಓದುತ್ತಿದ್ದ ಆತ ಪದವಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಸುರೇಶ್ ಮನೆ ಬಿಟ್ಟು ಹೋಗುವಾಗ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದೇನೆಂದು ಹೇಳಿದ್ದ. ಆದರೆ ಮತ್ತೆ ಮನೆಗೆ ಹಿಂದಿರುಗಿ ಬಂದಿರಲಿಲ್ಲ. 2004ರಲ್ಲಿ ಆತ ನಕ್ಸಲ್ ಚಳವಳಿ ಸೇರಿದ್ದಾನೆಂಬುದು ತಿಳಿಯಿತು. ಇಂದು ಸುರೇಶ್ ಪೊಲೀಸರ ಗುಂಡಿನ ದಾಳಿಗೆ ಸಿಕ್ಕಿ ಮೃತಪಟ್ಟಿದ್ದಾನೆಂದು ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅವರು ಹೇಳಿದರು.

ತನ್ನ ತಮ್ಮನನ್ನು ನೋಡಲು ನಾನು ಹಾಗೂ ಕುಟುಂಬಸ್ಥರು ತೆರಳುತ್ತೇವೆ ಎಂದು ತಿಳಿಸಿದ ಅವರು, ಸುರೇಶ್ ಮೃತದೇಹವನ್ನು ಕೇರಳದಿಂದ ಅಂಗಡಿ ಗ್ರಾಮಕ್ಕೆ ತರಲು ಜಿಲ್ಲಾಡಳಿತ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News