ಬಿಜೆಪಿ ಜೊತೆ ಕೈಜೋಡಿಸದಿದ್ದರೆ ಶಿವಸೇನೆ ಇಬ್ಭಾಗ: 24 ಶಾಸಕರು ಬಿಜೆಪಿಗೆ!

Update: 2019-10-29 15:40 GMT

ಮುಂಬೈ, ಅ.29: ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ಸ್ಥಾಪನೆಯಲ್ಲಿ ಉದ್ಧವ್ ಠಾಕ್ರೆ ಬಿಜೆಪಿಗೆ ಬೆಂಬಲ ನೀಡದೇ ಇದ್ದರೆ ಶಿವಸೇನೆಯು ಇಬ್ಭಾಗವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಸರಕಾರ ಸ್ಥಾಪನೆಗೆ ಉದ್ಧವ್ ಠಾಕ್ರೆ ಬಿಜೆಪಿ ಜೊತೆ ಕೈಜೋಡಿಸದಿದ್ದರೆ ಶಿವಸೇನೆಯ ನೂತನ 24 ಶಾಸಕರು ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಶಿವಸೇನೆಯ ಅಧಿಕೃತ ಮೂಲವೊಂದು ತಿಳಿಸಿದ್ದಾಗಿ theprint.in ವರದಿ ಮಾಡಿದೆ.

ಅಕ್ಟೋಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡು 5 ದಿನಗಳಾದ ನಂತರವೂ ಮಹಾರಾಷ್ಟ್ರದಲ್ಲಿ ಸರಕಾರ ಸ್ಥಾಪನೆಯ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. 288 ಸೀಟುಗಳಲ್ಲಿ 105 ಸೀಟುಗಳನ್ನು ಗೆದ್ದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ 50:50 ಅಧಿಕಾರವಿಲ್ಲದೆ ಸರಕಾರ ಸ್ಥಾಪನೆಗೆ ಮುಂದಾಗುವುದಿಲ್ಲ ಎಂದು ಶಿವಸೇನೆ ಹಠ ಹಿಡಿದಿರುವುದರಿಂದ ಬಿಜೆಪಿಗೆ ಸರಕಾರ ಸ್ಥಾಪನೆ ಸಾಧ್ಯವಾಗುತ್ತಿಲ್ಲ.

50:50 ಅಧಿಕಾರ ಸ್ಥಾಪನೆಯ ಬಗ್ಗೆ ತಾನು ಶಿವಸೇನೆ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

"ಉದ್ಧವ್ ಜಿ ಅಧಿಕಾರದಿಂದ ಹಿಂದೆ ಸರಿಯಲು ಇಚ್ಛಿಸಿದ್ದಲ್ಲಿ, ನಮ್ಮ ಕನಿಷ್ಠ 24 ಶಾಸಕರು ಬಿಜೆಪಿ ಸೇರಲಿದ್ದಾರೆ. ನಮಗೆ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಆಸೆಯಿಲ್ಲ" ಎಂದು ಶಿವಸೇನೆಯ ಹಿರಿಯ ನಾಯಕರೊಬ್ಬರು ಹೇಳಿದ್ದಾಗಿ theprint.in ವರದಿ ತಿಳಿಸಿದೆ.

ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಬಿಜೆಪಿ ಸಂಸದ ಸಂಜಯ್ ಕಾಕಡೆ, ಶಿವಸೇನೆಯ 45 ಶಾಸಕರು ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News