ಔದ್ಯಮಿಕ ಉದ್ಯೋಗಗಳ ನಿಯಮ ಅನುಸೂಚಿ ತಿದ್ದುಪಡಿ ಸಾಧ್ಯತೆ ?

Update: 2019-10-29 17:51 GMT

ಬೆಂಗಳೂರು, ಅ.29: ಖಾಸಗಿ ಕ್ಷೇತ್ರಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹಾಗೂ ಅಂಗವಿಕಲರಿಗೆ ಉದ್ಯೋಗ ನೀಡುವ ಕುರಿತ ಕರ್ನಾಟಕ ಔದ್ಯಮಿಕ ಉದ್ಯೋಗಗಳ (ಸ್ಥಾಯಿ ಆದೇಶಗಳು) ನಿಯಮ 1961ರ ಅನುಸೂಚಿ 1ಕ್ಕೆ ಸರಕಾರ ಶೀಘ್ರದಲ್ಲೆ ತಿದ್ದುಪಡಿ ತರುವ ಸಾಧ್ಯತೆ ಇದೆ.

ಸ್ಥಳೀಯರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಈಗಾಗಲೇ ಆಂಧ್ರಪ್ರದೇಶ ಸರಕಾರ ಅಳವಡಿಸಿಕೊಂಡಿರುವ ಕೆಲವು ನಿಯಮಗಳನ್ನು ಅನುಸರಿಸುವ ನಿರೀಕ್ಷೆಯಿದೆ. ಕಾಯ್ದೆ ತಿದ್ದುಪಡಿ ಮತ್ತು ಭವಿಷ್ಯದಲ್ಲಿ ಪ್ರತ್ಯೇಕ ಕಾಯ್ದೆ ರಚನೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ವಿಧಾನಸೌಧದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರು ಕನ್ನಡ ಪರ ಸಂಘ-ಸಂಸ್ಥೆಗಳ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶಕರ, ಸಣ್ಣ ಕೈಗಾರಿಕೆ ಸಂಘಗಳ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ರಾ.ನಂ.ಚಂದ್ರಶೇಖರ್, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಕನ್ನಡಿಗರು ಯಾರು ಎಂಬ ಬಗ್ಗೆ ಚರ್ಚೆ: ನೂತನ ಔದ್ಯಮಿಕ ಕಾಯ್ದೆ ಸೇರ್ಪಡೆ ವಿಚಾರದಲ್ಲಿ ‘ಕನ್ನಡಿಗರು ಯಾರು’ ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಕನ್ನಡಿಗರೆಂದರೆ, ಕರ್ನಾಟಕದಲ್ಲಿ ಕನಿಷ್ಠ 15 ವರ್ಷ ವಾಸವಾಗಿರಬೇಕು. ಮತದಾನದ ಗುರುತಿನ ಚೀಟಿ ಪಡೆದಿರಬೇಕು. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಕಡ್ಡಾಯವಾಗಿ ಬರಬೇಕು ಎಂದು ಸಭೆಯಲ್ಲಿ ಅನುಮೋದಿಸಲಾಯಿತು.

ಅಲ್ಲದೆ ಪರಿಷ್ಕೃತ ಸರೋಜಿನಿ ಮಹಿಷಿ ವರದಿಯಲ್ಲಿ ಇರುವ ವ್ಯಾಖ್ಯಾನಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ 10 ವರ್ಷ ಕರ್ನಾಟಕದಲ್ಲಿ ವಾಸವಾಗಿರುವ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ನಿಯಮವನ್ನು ಸರಕಾರ ರೂಪಿಸಿತ್ತು.

ಆಂಧ್ರಪ್ರದೇಶ ಸರಕಾರದ ನಿಯಮ ಪಾಲನೆ: ಖಾಸಗಿ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಸಂಬಂಧ ಈಗಾಗಲೇ ಆಂಧ್ರಪ್ರದೇಶ ಸರಕಾರ ಅಳವಡಿಸಿಕೊಂಡಿರುವ ಕೆಲ ನಿಯಮಗಳನ್ನು ನೂತನ ಕಾಯ್ದೆಯಲ್ಲಿ ಅಳವಡಿಕೆ ಮಾಡಿಕೊಳ್ಳಲು ಸಭೆಯಲ್ಲಿ ಅನುಮೋದನೆ ದೊರೆಯಿತು ಎನ್ನಲಾಗಿದೆ.

ಸ್ಥಳೀಯರು ಎಂದು ಪರಿಗಣಿಸಬೇಕಾದರೆ ಆಂಧ್ರಪ್ರದೇಶ ಸರಕಾರ ಕೆಲವು ಮಾನದಂಡ ರೂಪಿಸಿದೆ. 15 ವರ್ಷ ವಾಸವಾಗಿರಬೇಕು. ಸ್ಥಳೀಯ ಭಾಷೆಯನ್ನು ಎಸ್‌ಎಸ್‌ಎಲ್‌ಸಿ ವರೆಗೂ ಮಾಧ್ಯಮ ಭಾಷೆಯನ್ನಾಗಿ ಕಲಿತಿರಬೇಕು ಎಂದು ಹೇಳಿದೆ. ಇದೇ ಮಾನದಂಡವನ್ನು ರಾಜ್ಯಸರಕಾರ ಅಳವಡಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಅಧಿಕಾರಿ ಆಯ್ಕೆ ಸಮಿತಿಯಲ್ಲಿರಬೇಕು: ಕನ್ನಡ ಪರ ಸಂಘಟನೆಯ ಮುಖಂಡರು ಹಲವು ಸಲಹೆಗಳನ್ನು ನೀಡಲಾಗಿದೆ. 15 ವರ್ಷ ವಾಸವಾಗಿದ್ದಾರೆ ಎಂಬ ಬಗ್ಗೆ 10ನೇ ತರಗತಿ ಅಂಕಪಟ್ಟಿಯನ್ನು ಪರಿಗಣಿಸಬೇಕು. ಹಾಗೇ ಉದ್ಯೋಗಿಗಳ ಆಯ್ಕೆ ಮಾಡುವಾಗ, ಆಯ್ಕೆ ಸಮಿತಿಯಲ್ಲಿ ಕನ್ನಡ ಮಾತನಾಡಲು ಬರುವ ಒಬ್ಬ ಅಧಿಕಾರಿ ಆಯ್ಕೆ ಸಮಿತಿಯಲ್ಲಿ ಇರಬೇಕು ಎಂಬ ನಿಯಮ ಅಳವಡಿಸುವಂತೆ ಸಲಹೆ ನೀಡಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಮಾಹಿತಿ ನೀಡಿದ್ದಾರೆ.

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News