ಬೆಳ್ತಂಗಡಿ: ಆರ್.ಸಿ.ಇ.ಪಿ ಒಪ್ಪಂದಕ್ಕೆ ಸಹಿ ಮಾಡಬಾರದು ಎಂದು ಒತ್ತಾಯಿಸಿ ನ.4ರಂದು ಧರಣಿ

Update: 2019-10-30 11:23 GMT

ಬೆಳ್ತಂಗಡಿ:  ಕೃಷಿ, ತೋಟಗಾರಿಕೆ , ಹೈನುಗಾರಿಕೆ, ಸಂಬಾರ ಪದಾರ್ಥಗಳನ್ನು  ಆಸಿಯಾನ್ ದೇಶಗಳಿಂದ ಮುಕ್ತವಾಗಿ ಆಮದು ಮಾಡಿಕೊಳ್ಳುವ  ಕೇಂದ್ರ ಸರ್ಕಾರದ ಆರ್.ಸಿ.ಇ.ಪಿ ಒಪ್ಪಂದ ದೇಶದ ಸಾಮಾನ್ಯ ಜನರ ಪಾಲಿನ ಮರಣ ಶಾಸನವಾಗಿದ್ದು ಯಾವುದೇ ಕಾರಣಕ್ಕೂ ಆರ್ ಸಿ ಇಪಿ ಒಪ್ಪಂದಕ್ಕೆ ಸಹಿ ಮಾಡಬಾರದು ಎಂದು ಒತ್ತಾಯಿಸಿ ನವೆಂಬರ್ 4 ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ವಿವಿಧ ಸಂಘಟನೆಗಳ ಮುಖಂಡರುಗಳು ಜಂಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ರಾಜಶೇಖರ ಅಜ್ರಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಮುಖಂಡ ಸುರೇಶ್ ಭಟ್ ಕೊಜಂಬೆ, ಸಿಪಿಐಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್, ಕರ್ನಾಟಕ ಪ್ರಾಂತ ರೈತ ಸಂಘದ ಹರಿದಾಸ್ ಎಸ್.ಎಂ ಅವರು ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಿದರು.   

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಒಪ್ಪಂದ ದೇಶದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸಾಂಬಾರ ಪದಾರ್ಥಗಳ ಮೇಲಿನ ಸರ್ಕಾರಿ ಪ್ರಾಯೋಜಿತ ದಾಳಿಯಾಗಿದೆ. ಕೇಂದ್ರ ಸರ್ಕಾರದ ಏಕಪಕ್ಷೀಯವಾಗಿ ದೇಶದ ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಾಡಿರುವ ಈ ವ್ಯಾಪಾರ ಒಪ್ಪಂದ ಸರ್ವಾಧಿಕಾರಿ ಧೋರಣೆಯ ಆಡಳಿತಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಈಗಾಗಲೇ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿರುವ ಸಂದರ್ಭದಲ್ಲಿ ಈ ಒಪ್ಪಂದ ಮತ್ತಷ್ಟು ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ. ನಿರುದ್ಯೋಗ ಮತ್ತಷ್ಟು ಹೆಚ್ಚಾಗುವ ಮೂಲಕ ಪಾತಾಳಕ್ಕೆ ಜಿಡಿಪಿ ಮತ್ತಷ್ಟು ಕುಸಿತಗೊಳ್ಳಲಿದೆ ಎಂದು ಅವರು ಆರೋಪಿಸಿದರು.

ಆರ್ಸಿಇಪಿ ಒಪ್ಪಂದದಿಂದ ಹದಿನಾರು ದೇಶಗಳ ಸರಕುಗಳನ್ನು ಯಾವುದೇ ಆಮದು ಸುಂಕವಿಲ್ಲದೆ ಆಮದು ಮಾಡಿಕೊಳ್ಳಬಹುದು. ಕೃಷಿ, ತೋಟಗಾರಿಕೆ , ಹೈನುಗಾರಿಕೆ, ಸಾಂಬಾರ ಪದಾರ್ಥಗಳು ಸೇರಿದಂತೆ ಔಷಧಿಗಳ ಮೇಲೆಯೂ ಈ ಒಪ್ಪಂದ ದುಷ್ಪರಿಣಾಮ ಬೀರುತ್ತದೆ. ಒಪ್ಪಂದಕ್ಕೆ ಸಹಿ ಹಾಕಿದರೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಲು ಉತ್ಪನ್ನಗಳಿಗೆ ಭಾರತ ಮಾರುಕಟ್ಟೆ ಒದಗಿಸಲಿದೆ. ಇದರಿಂದಾಗಿ ಹೈನುಗಾರಿಕೆಯನ್ನು ನಂಬಿ ಬದುಕನ್ನು ನಡೆಸುತ್ತಿರುವ ಸುಮಾರು ಹತ್ತು ಕೋಟಿ ಜನರ ಬದುಕುವ ದಾರಿಯೇ ಇಲ್ಲವಾಗುತ್ತದೆ. ಹಾಲು ಉತ್ಪಾದಕರ ಭಾರತದ ಹೈನುಗಾರಿಕೋಧ್ಯಮ ಸಂಪೂರ್ಣ ನೆಲಕಚ್ಚಲಿದೆ. ಸಹಕಾರ ಸಂಘಗಳು ನಾಶದತ್ತ ಸಾಗಲಿದೆ, ಇದರೊಂದಿಗೆ ಕೃಷಿ, ತೋಟಗಾರಿಕೆ, ಸಾಂಬಾರ ಪದಾರ್ಥ ಕೃಷಿಯ ಮೇಲೂ ಪರಿಣಾಮ ಬೀರಲಿದೆ ಎಂದರು.

ಆರ್.ಸಿ.ಇ.ಪಿ ಒಪ್ಪಂದ ಏಕೆ ಬೇಡವೆಂದರೆ ಈ ಮರಣಶಾಸನದಿಂದಾಗಿ ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಸಂಪೂರ್ಣ ರದ್ದಾಗಲಿದೆ ಮತ್ತು ವಿದೇಶಗಳಿಂದ ಈ ಉತ್ಪನ್ನಗಳ ಆಮದು ಅನಿಯಂತ್ರಿತವಾಗಿ ದೇಶದೊಳಗೆ ಹರಿದು ಬರಲಿದೆ.  ಕೇವಲ ಬೃಹತ್ ಕಾಪೆರ್Çರೇಟ್ ಕಂಪನಿಗಳಿಗಷ್ಟೇ ಲಾಭದಾಯಕವಾಗಿರುವ ಈ ಒಪ್ಪಂದ ಕೃಷಿ, ಹೈನುಗಾರಿಕೆ ವಲಯಗಳಿಗೆ ಕುತ್ತಾಗಿ ಪರಿಣಮಿಸಲಿದೆ. ಈ ಒಪ್ಪಂದದ ನಿಬಂಧನೆಯಡಿ ಬಹುತೇಕ ಬಡ ರಾಷ್ಟ್ರಗಳಿಗೆ ಜನರಿಕ್ ಔಷಧಗಳನ್ನು ಕಡಿಮೆ ದರದಲ್ಲಿ ಪೂರೈಸುತ್ತಿರುವ ದೇಶದಲ್ಲಿ ದುಬಾರಿ ಬೆಲೆಗೆ ಔಷಧ ಮಾರಾಟ ಮಾಡುವಂತೆ ಒತ್ತಾಯಿಸಲಿದೆ. ಸಂರಕ್ಷಿಸಲ್ಪಟ್ಟ ಕಂಪನಿಗಳ ಬಿತ್ತನೆಬೀಜ ಪ್ರಭೇದಗಳನ್ನು ರೈತರು ತಮಗಾಗಿ ಉಳಿಸಿಕೊಳ್ಳುವುದು ಕಾನೂನುಬಾಹಿರವಾಗುತ್ತದೆ. ಒಟ್ಟಾರೆ ಈ ಒಪ್ಪಂದ ಮನುಷ್ಯವಿರೋಧಿಯಾಗಿದ್ದು, ದೇಶದಲ್ಲಿ ಸಾಮಾನ್ಯ ಜನರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ನೀಡಲು ಮಾತ್ರ ಸಹಕಾರಿಯಾಗಲಿದೆ ಎಂದು ಅವರು ಆರೋಪಿಸಿದರು.

ಆರ್ಸಿಇಪಿ ಒಪ್ಪಂದ ಬಡ ರೈತರ, ಕೃಷಿಕೂಲಿ ಕಾರ್ಮಿಕರ ಪಾಲಿಗೆ ಕೇಂದ್ರ ಸರ್ಕಾರದ ಮರಣ ಶಾಸನವಾಗಿದ್ದು ಇದರ ವಿರುದ್ದ ನವೆಂಬರ್ 4 ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದ್ದು ವಿವಿಧ ರಾಜಕೀಯ ಪಕ್ಷಗಳು ಬಾಗವಹಿಸಲಿದೆ. ಕರ್ನಾಟಕ ಪ್ರಾಂತ ರೈತ ಸಂಘ , ಕಿಸಾನ್ ಕಾಂಗ್ರೆಸ್ ಸಂಘ , ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಸಮಾನಮನಸ್ಕ ರೈತ ಸಂಘಗಳ ಒಕ್ಕೂಟಗಳು ಪ್ರತಿಭಟನೆಯ ನೇತೃತ್ವ ವಹಿಸಲಿದೆ.  ಈ ಒಪ್ಪಂದದಿಂದಾಗಿ ಸಂತ್ರಸ್ಥರಾಗಲಿರುವ ಸಾಮಾನ್ಯ ಜನರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರಕಾರಗಳನ್ನು ಎಚ್ಚರಿಸುವಂತೆ ಅವರು ವಿನಂತಿಸಿದರು. 
ಪತ್ರಿಕಾಗೋಷ್ಟಿಯಲ್ಲಿ ಮುಖಂಡರುಗಳಾದ ಶೇಖರ ಲಾಯಿಲ ಸುಕನ್ಯ ಹಾಗೂ ಇತರರು ಇದ್ದರು. 

ಈ ಒಪ್ಪಂದ ಅಂದು ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಮಾಡಿದ ಒಪ್ಪಂದಕ್ಕೆ ಸಮನಾಗಿದ್ದು ಇದು ಇಡೀ ದೇಶಕ್ಕೆ ಆಪತ್ತನ್ನು ತರಲಿದೆ. ಇದು ದೇಶದ ರೈತರಿಗೆ ಪರೋಕ್ಷವಾಗಿ ವಿಷವುಣಿಸುವ ಕಾರ್ಯವಾಗಿದೆ. ಇದರ ವಿರುದ್ದ ದೇಶದ ಸಮಸ್ತ ನಾಗರಿಕರೂ ಎಚ್ಚರಗೊಳ್ಳುವ ಅಗತ್ಯವಿದೆ. 
ಸುರೇಶ್ ಭಟ್ ಕೊಜಂಬೆ, ರೈತ ಮುಖಂಡರು, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News