ಕುಡಂಕುಳಂ ಅಣುಸ್ಥಾವರದ ಕಂಪ್ಯೂಟರ್‌ನಲ್ಲಿ ‘ಕಳ್ಳ ಸಾಫ್ಟ್‌ವೇರ್’: ವರದಿ ದೃಢಪಡಿಸಿದ ಎನ್‌ಪಿಸಿಐಎಲ್

Update: 2019-10-30 16:34 GMT

ಹೊಸದಿಲ್ಲಿ, ಅ.30: ತಮಿಳುನಾಡಿನ ಕುಡಂಕುಳಂ ಅಣುವಿದ್ಯುತ್ ಸ್ಥಾವರದ ಕಂಪ್ಯೂಟರ್‌ನಲ್ಲಿ ‘ಕಳ್ಳ ಸಾಫ್ಟ್‌ವೇರ್’ ಇತ್ತು ಎಂಬ ವರದಿಯನ್ನು ಭಾರತದ ಪರಮಾಣು ವಿದ್ಯುತ್ ನಿಗಮ(ಎನ್‌ಪಿಸಿಐಎಲ್) ದೃಢಪಡಿಸಿದೆ. ಆದರೆ ಸೈಬರ್‌ ದಾಳಿಯಿಂದ ಸ್ಥಾವರದ ಕಂಪ್ಯೂಟರ್ ವ್ಯವಸ್ಥೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಪರಮಾಣು ಶಕ್ತಿ ಇಲಾಖೆಯ ತಜ್ಞರು ತನಿಖೆ ನಡೆಸಿದ್ದಾರೆ. ಸೈಬರ್ ದಾಳಿಗೊಳಗಾದ ಕಂಪ್ಯೂಟರ್ ಆಡಳಿತಾತ್ಮಕ ವಿಷಯಗಳ ನಿರ್ವಹಣೆಗೆ ಬಳಸುವ ನೆಟ್‌ವರ್ಕ್‌ನೊಂದಿಗೆ ಇಂಟರ್‌ನೆಟ್ ಮೂಲಕ ಸಂಪರ್ಕ ಹೊಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಳಿಕ ಈ ಕಂಪ್ಯೂಟರ್ ಅನ್ನು ಪ್ರತ್ಯೇಕಿಸಲಾಗಿದೆ. ನಿಗಮದ ಕಂಪ್ಯೂಟರ್ ನೆಟ್‌ವರ್ಕ್ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಬಹುರಾಷ್ಟ್ರೀಯ ಐಟಿ ಸಂಸ್ಥೆಯೊಂದು ಈ ಕಳ್ಳ ಸಾಫ್ಟ್‌ವೇರ್‌ನ ದಾಳಿಯನ್ನು ಗಮನಿಸಿ ರಾಷ್ಟ್ರೀಯ ಸೈಬರ್ ಅಪರಾಧ ಸಮಿತಿಗೆ ಮಾಹಿತಿ ನೀಡಿತ್ತು. ಬಳಿಕ ಸೈಬರ್ ಪರಿಶೀನಾ ತಂಡವನ್ನು ರಚಿಸಲಾಗಿದ್ದು ಈ ತಂಡ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕುಡಂಕುಳಂ ಅಣುವಿದ್ಯುತ್ ಸ್ಥಾವರ(ಕೆಕೆಎನ್‌ಪಿಪಿ)ಕ್ಕೆ ಭೇಟಿ ನೀಡಿ ಅಕ್ಟೋಬರ್ ಪ್ರಥಮ ವಾರದಲ್ಲಿ ವರದಿಯ ಜೊತೆಗೆ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಸಲ್ಲಿಸಿತ್ತು.

 ಸೈಬರ್ ದಾಳಿಯಿಂದ ಸಂಸ್ಥೆಯ ಪ್ರಧಾನ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆಡಳಿತಾತ್ಮಕ ವ್ಯವಹಾರಕ್ಕೆ ಬಳಸುವ ಕಂಪ್ಯೂಟರ್‌ಗಳ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿತ್ತು. ಈ ಮಧ್ಯೆ, ಮಂಗಳವಾರ(ಅ.29) ಹೇಳಿಕೆ ನೀಡಿದ್ದ ಕೆಕೆಎನ್‌ಪಿಪಿಯ ಮಾಹಿತಿ ಅಧಿಕಾರಿ ಪಿ ರಾಮದಾಸ್, ಸಂಸ್ಥೆಯ ಕಂಪ್ಯೂಟರ್ ಮೇಲೆ ಸೈಬರ್ ದಾಳಿಯ ವರದಿಯನ್ನು ನಿರಾಕರಿಸಿದ್ದರು. ಕೆಕೆಎನ್‌ಪಿಪಿ ಸಹಿತ ಭಾರತದ ಪರಮಾಣು ವಿದ್ಯುತ್ ಸ್ಥಾವರಗಳ ನಿಯಂತ್ರಣಾ ವ್ಯವಸ್ಥೆ ಪ್ರತ್ಯೇಕವಾಗಿದ್ದು ಹೊರಗಿನ ಇಂಟರ್‌ನೆಟ್ ಅಥವಾ ಸೈಬರ್ ನೆಟ್‌ವರ್ಕ್‌ನೊಂದಿಗೆ ಸಂಪರ್ಕದಲ್ಲಿಲ್ಲ. ಪರಮಾಣು ಶಕ್ತಿ ಸ್ಥಾವರದ ನಿಯಂತ್ರಣಾ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸುವುದು ಅಸಾಧ್ಯ ಎಂದವರು ಹೇಳಿದ್ದರು. ಇದೊಂದು ಗಂಭೀರ ಪ್ರಕರಣವಾಗಿದ್ದು ಸರಕಾರ ಈ ಬಗ್ಗೆ ವಿವರಣೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ಥರೂರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News