ಜನರು ನೀರು ಉಳಿತಾಯ ಮಾಡದಿದ್ದರೆ ಬೆಂಗಳೂರು ‘ಕೇಪ್ ಟೌನ್’ ಆಗಲಿದೆ: ಜಲಶಕ್ತಿ ಸಚಿವ

Update: 2019-10-30 16:55 GMT

ಹೊಸದಿಲ್ಲಿ, ಅ. 30: ಭಾರತದ ತಲಾ ನೀರಿನ ಲಭ್ಯತೆ ತೀವ್ರವಾಗಿ ಇಳಿಕೆಯಾಗಿದೆ ಎಂದು ಬುಧವಾರ ಹೇಳಿರುವ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಜನರು ನೀರನ್ನು ಉಳಿಸಲು ಗಂಭೀರವಾಗಿ ಚಿಂತಿಸದೇ ಇದ್ದರೆ, ಚೆನ್ನೈ ಹಾಗೂ ಬೆಂಗಳೂರು ‘ಕೇಪ್ ಟೌನ್’ (ದಕ್ಷಿಣ ಆಫ್ರಿಕಾದಲ್ಲಿ ನೀರಿನ ಬಿಕ್ಕಟ್ಟು ಸೃಷ್ಟಿಯಾಗಿರುವ ನಗರ) ಆಗಲಿದೆ. ಅಲ್ಲದೆ, ದೊಡ್ಡ ಸಂಖ್ಯೆಯ ಜನರ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದರು.

 ಇಲ್ಲಿ ನಡೆದ 13ನೇ ವಿಶ್ವ ಜಲ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ನಡೆಯುವ ಚರ್ಚೆ ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸೀಮಿತವಾಗಬಾರದು. ಪರಿಸರ ಹಾಗೂ ಜಲ ಸಂಬಂಧಿ ಸಮಸ್ಯೆಗಳಿಗೆ ವಿಸ್ತರಣೆಯಾಗಬೇಕು ಎಂದರು. ಭಾರತ ಸ್ವಾತಂತ್ರ ಪಡೆಯುವ ಸಂದರ್ಭ ನೀರಿನ ತಲಾ ಲಭ್ಯತೆ 5,000 ಕ್ಯೂಬಿಕ್ ಮೀಟರ್ ಇತ್ತು. ಅದು ಈಗ 1,540 ಕ್ಯೂಬಿಕ್ ಮೀಟರ್‌ಗೆ ಇಳಿಕೆಯಾಗಿದೆ ಎಂದು ಶೇಖಾವತ್ ತಿಳಿಸಿದರು. ‘‘ನೀರಿನ ಲಭ್ಯತೆ ನಿರಂತರ ಇಳಿಕೆಯಾದರೆ ಹಾಗೂ ಜನಸಂಖ್ಯೆ ಅಧಿಕವಾದರೆ, ಚೆನ್ನೈ ಹಾಗೂ ಬೆಂಗಳೂರು ಕೇಪ್ ಟೌನ್ ಆಗುವುದು ಮಾತ್ರವಲ್ಲ, ಭಾರತದ ದೊಡ್ಡ ಸಂಖ್ಯೆಯ ಜನರಿಗೆ ತೊಂದರೆ ಉಂಟಾಗಲಿದೆ’’ ಎಂದು ಅವರು ಹೇಳಿದರು.

2017-18ರಲ್ಲಿ ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್ ಟೌನ್‌ನಲ್ಲಿ ನೀರಿನ ಬಿಕ್ಕಟ್ಟು ಉಂಟಾಗಿತ್ತು. ಅನಂತರ ಅಲ್ಲಿ ‘ಡೇ ಜೀರೋ’ ಚಿಂತನೆಯನ್ನು ಪರಿಚಯಿಸಲಾಗಿತ್ತು. ಅದರಂತೆ ನೀರಿನ ಬಳಕೆಯ ನಿರ್ವಹಣೆ ಬಗ್ಗೆ ಪ್ರತಿಯೊಬ್ಬರಿಗೆ ಎಚ್ಚರಿಕೆ ನೀಡಲು ನಗರದ ಎಲ್ಲ ನಳ್ಳಿಗಳನ್ನು ಬಂದ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News