ಇಂದಿನಿಂದ ಕೇಂದ್ರಾಡಳಿತ ಪ್ರದೇಶ: ಇತಿಹಾಸದ ಪುಟ ಸೇರಿದ ಜಮ್ಮು- ಕಾಶ್ಮೀರ ರಾಜ್ಯ

Update: 2019-10-31 03:30 GMT

ಶ್ರೀನಗರ, ಅ.31: ಇದುವರೆಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಹೊಂದಿದ್ದ ಜಮ್ಮು-ಕಾಶ್ಮೀರ ತನ್ನ ಸ್ಥಾನಮಾನವನ್ನು ಕಳೆದುಕೊಂಡು ಇಂದಿನಿಂದ(ಅ.31) ಜಮ್ಮು - ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಗುರುತಿಸಲ್ಪಡುತ್ತದೆ. ಸಂವಿಧಾನದ 370ನೇ ವಿಧಿಯನ್ನು ಸಂಸತ್ತು ರದ್ದುಪಡಿಸಿದ 86 ದಿನಗಳ ಬಳಿಕ ಅಂದರೆ ಬುಧವಾರ ಮಧ್ಯರಾತ್ರಿಯಿಂದ ಇದು ಜಾರಿಗೆ ಬಂದಿದೆ.

ಗೃಹ ಸಚಿವಾಲಯವು ಬುಧವಾರ ತಡರಾತ್ರಿ ಅಧಿಸೂಚನೆ ಹೊರಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿರುವುದು ಜಾರಿಗೆ ಬಂದಿದೆ ಎಂದು ಸ್ಪಷ್ಟಪಡಿಸಿದೆ. ಜತೆಗೆ ಕಾಯಂ ನಿವಾಸಿಗಳು ಮತ್ತು ವಂಶಪಾರಂಪರ್ಯ ರಾಜ್ಯ ವಿಷಯಗಳನ್ನು ರದ್ದುಪಡಿಸಿದೆ.

ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪುದುಚೇರಿ ಮಾದರಿಯ ಚುನಾಯಿತ ವಿಧಾನಸಭೆ ಇರುತ್ತದೆ ಹಾಗೂ ಮುಖ್ಯಮಂತ್ರಿ ಇರುತ್ತಾರೆ. ಆದರೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ಚಂಡೀಗಢ ಮಾದರಿಯಲ್ಲಿ ಶಾಸನಸಭೆ ಇರುವುದಿಲ್ಲ. ಇಲ್ಲಿ ಎರಡು ಅಭಿವೃದ್ಧಿ ಮಂಡಳಿಗಳಿರುತ್ತವೆ.

ಜಮ್ಮು ಕಾಶ್ಮೀರ ಪುನರ್‌ರಚನೆ ಕಾಯ್ದೆ- 2019ರ ಅನ್ವಯ ಎರಡೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಗವರ್ನರ್‌ಗಳಿರುತ್ತಾರೆ. ಜಿ.ಸಿ.ಮುರ್ಮು ಅವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿದ್ದರೆ, ಆರ್.ಕೆ.ಮಾಥುರ್ ಅವರು ಲಡಾಖ್‌ನ ಮುಖ್ಯಸ್ಥರಾಗಿರುತ್ತಾರೆ.

ಮಧ್ಯಾಹ್ನ 12:30ಕ್ಕೆ ರಾಜಭವನದಲ್ಲಿನಡೆಯುವ ಸಮಾರಂಭದಲ್ಲಿ ಮುರ್ಮು ಅವರು ಶ್ರೀನಗರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರಿಂದ ಪ್ರಮಾಣ ವಚನ ಸ್ವೀಕರಿಸುವರು. ಬಳಿಕ ಲೇಹ್‌ಗೆ ಪ್ರಯಾಣ ಬೆಳೆಸುವ ಮಿತ್ತಲ್, ಆರ್.ಕೆ.ಮಾಥುರ್ ಅವರಿಗೆ ಪ್ರಮಾಣವಚನ ಬೋಧಿಸುವರು.
ಈ ಅಧಿಸೂಚನೆಯ ಬಳಿಕ ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಹಾಗೂ ರಣಬೀರ್ ಸಮಿತಿ ಸಂಹಿತೆಗಳು ಅಸ್ತಿತ್ವ ಕಳೆದುಕೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News