ಇಂದಿರಾ ಗಾಂಧಿ ಪುಣ್ಯತಿಥಿ: ಮೋದಿ, ಸೋನಿಯಾ, ರಾಹುಲ್‌ರಿಂದ ಗೌರವ ನಮನ

Update: 2019-10-31 14:49 GMT

ಹೊಸದಿಲ್ಲಿ, ಅ. 31: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯ ದಿನವಾದ ಗುರುವಾರ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌರವ ನಮನ ಸಲ್ಲಿಸಿದರು.

ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

  ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಕ್ಷದ ಇತರ ನಾಯಕರು ಹೊಸದಿಲ್ಲಿಯ ಶಕ್ತಿಸ್ಥಳದಲ್ಲಿ ಇಂದಿರಾ ಗಾಂಧಿ ಅವರ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದರು.

 ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಂಸದರು ಹಾಗೂ ಪಕ್ಷದ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಕೂಡ ಗೌರವ ನಮನ ಸಲ್ಲಿಸಿದರು.

  ‘‘ಇಂದು ನನ್ನ ಅಜ್ಜಿಯ ಪುಣ್ಯ ತಿಥಿ. ಅವರ ಭೀತಿ ರಹಿತ ನಿರ್ಧಾರ ನನಗೆ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ನೀಡಲಿದೆ’’ ಎಂದು ರಾಹುಲ್ ಗಾಂಧಿ ತನ್ನ ಅಜ್ಜಿ ಇಂದಿರಾಗಾಂಧಿ ಭಾವಚಿತ್ರದೊಂದಿಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇಂದಿರಾ ಗಾಂಧಿಗೆ ಗೌರವ ನಮನ ಸಲ್ಲಿಸಿದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 1971ರ ಯುದ್ಧದ ಸಂದರ್ಭ ಇಂದಿರಾ ಗಾಂಧಿ ವಹಿಸಿದ್ದ ನಾಯಕತ್ವವನ್ನು ಶ್ಲಾಘಿಸಿದರು.

ಇಂದಿರಾ ಗಾಂಧಿ ಅವರಿಗೆ ಗೌರವ ನಮನ. ದೇಶಕ್ಕೆ ಅವರು ನೀಡಿದ ಕೊಡುಗೆ ಹಾಗೂ 1971ರಲ್ಲಿ ನಡೆದ ಯುದ್ಧದ ಸಂದರ್ಭದ ಅವರ ನಾಯಕತ್ವವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News