ದಿಲ್ಲಿಯಲ್ಲಿ ಈರುಳ್ಳಿ, ಟೊಮೆಟೊಗಳ ಗಗನಚುಂಬಿ ದರಗಳ ಮುಂದುವರಿಕೆ

Update: 2019-10-31 14:28 GMT

ಹೊಸದಿಲ್ಲಿ, ಅ.31: ಸರಕಾರವು ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ ದಿಲ್ಲಿಯಲ್ಲಿ ಈರುಳ್ಳಿ ಮತ್ತು ಟೊಮೆಟೊ ಬೆಲೆಗಳು ಪ್ರತಿ ಕೆಜಿಗೆ 60-70 ರೂ.ಗಳಲ್ಲಿಯೇ ಮುಂದುವರಿದಿವೆ.

ದಿಲ್ಲಿಯಲ್ಲಿ ಇವೆರಡೂ ಅಗತ್ಯ ವಸ್ತುಗಳನ್ನು ಗುಣಮಟ್ಟ ಮತ್ತು ಪ್ರದೇಶವನ್ನು ಅವಲಂಬಿಸಿ ಪ್ರತಿ ಕೆ.ಜಿಗೆ 70 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ದಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ಬೆಲೆ ಪ್ರತಿ ಕೆಜಿಗೆ 55 ರೂ. ಮತ್ತು ಟೊಮೆಟೊಗೆ 53 ರೂ.ಇದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಸರಕಾರಿ ಸ್ವಾಮ್ಯದ ಮದರ್ ಡೇರಿಯ ಸಫಲ್ ಮಳಿಗೆಗಳು,ನಾಫೆಡ್ ಮತ್ತು ಎನ್‌ಸಿಸಿಎಫ್ ಸಹಕಾರಿಗಳ ಮೂಲಕ ಪೂರೈಕೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಕಳೆದೊಂದು ತಿಂಗಳಲ್ಲಿ ಈರುಳ್ಳಿ ಮತ್ತು ಟೊಮೆಟೊ ಬೆಲೆಗಳು ಹೆಚ್ಚಿನ ಮಟ್ಟದಲ್ಲಿಯೇ ಇವೆ.

ಗ್ರಾಹಕರಿಗೆ ಬೆಲೆಯೇರಿಕೆಯಿಂದ ರಕ್ಷಣೆ ನೀಡಲು ಸಫಲ್ ತನ್ನ 400ಕ್ಕೂ ಅಧಿಕ ಮಳಿಗೆಗಳ ಮೂಲಕ ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ 23.90 ರೂ. ಮತ್ತು ಟೊಮೆಟೊವನ್ನು 55 ರೂ.ಗೆ ಮಾರಾಟ ಮಾಡುತ್ತಿದೆ. ಸರಕಾರದ ಕಾಪು ದಾಸ್ತಾನಿನಿಂದ ಈರುಳ್ಳಿಯನ್ನು ಪೂರೈಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News