ಯುನೆಸ್ಕೊ ಸೃಜನಶೀಲ ನಗರಗಳ ಪಟ್ಟಿಗೆ ಭಾರತದ ಈ ಎರಡು ನಗರಗಳು

Update: 2019-11-01 04:00 GMT

ಮುಂಬೈ, ನ.1: ಕನಸುಗಳ ನಗರ ಮುಂಬೈ ಹಾಗೂ ಹಲೀಂ ಹಾಗೂ ಬಿರಿಯಾನಿಯ ತವರೂರು ಎನಿಸಿದ ಹೈದರಾಬಾದ್ ಯುನೆಸ್ಕೊ ಸೃಜನಶೀಲ ನಗರಗಳ ಪಟ್ಟಗೆ ಸೇರಿವೆ. ವಿಶ್ವ ನಗರ ದಿನಾಚರಣೆ ಸಂದರ್ಭದಲ್ಲಿ ಇದನ್ನು ಘೋಷಿಸಲಾಗಿದೆ. ಮುಂಬೈ ಚಲನಚಿತ್ರ ವರ್ಗದಲ್ಲಿ ಈ ಜಾಲಕ್ಕೆ ಸೇರಿದ್ದರೆ, ಹೈದರಾಬಾದ್‌ಗೆ ಪಾಕಶಾಸ್ತ್ರ ವಿಭಾಗದಲ್ಲಿ ಈ ಗೌರವ ದಕ್ಕಿದೆ.

ಸಂಗೀತ, ಕಲೆ, ಜಾನಪದ ಕೌಶಲ, ವಿನ್ಯಾಸ, ಸಿನಿಮಾ, ಸಾಹಿತ್ಯ, ಡಿಜಿಟಲ್ ಕಲೆ ಮತ್ತು ಪಾಕಶಾಸ್ತ್ರ ವಿಷಯಗಳಲ್ಲಿ ಸೃಜನಶೀಲತೆಯ ಆಧಾರದಲ್ಲಿ ಅಭಿವೃದ್ಧಿ ಹೊಂದಿದ ನಗರಗಳು ಈ ಜಾಲದಲ್ಲಿ ಸೇರುತ್ತವೆ. ಇದುವರೆಗೆ ವಾರಣಾಸಿ (ಸಂಗೀತ), ಚೆನ್ನೈ (ಸಂಗೀತ), ಜೈಪುರ (ಕರಕುಶಲ ಮತ್ತು ಜಾನಪದ ಕಲೆ) ಈ ಜಾಲಕ್ಕೆ ಸೇರಿದ್ದವು. ಗುರುವಾರ 66 ನಗರಗಳನ್ನು ಹೊಸದಾಗಿ ಸೇರಿಸಲಾಗಿದ್ದು, ವಿಶ್ವದ 246 ನಗರಗಳು ಇದೀಗ ಈ ಜಾಲಕ್ಕೆ ಸೇರ್ಪಡೆಯಾದಂತಾಗಿದೆ.

ಇದು ಎಂದೋ ದೊರಕಬೇಕಿದ್ದ ಗೌರವ ಎಂದು ಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್ ಹೇಳಿದ್ದಾರೆ. ಈ ಸ್ಥಾನಮಾನ ಸಿಕ್ಕಿರುವುದು ನಗರವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವಾದ್ಯಂತ ಈ ನಗರಗಳು ತಮ್ಮದೇ ಮಾರ್ಗದಲ್ಲಿ ಸಂಸ್ಕೃತಿಯ ಆಧಾರಸ್ತಂಭಗಳೆನಿಸಿವೆ ಎಂದು ಯುನೆಸ್ಕೊ ಮಹಾನಿರ್ದೇಶಕ ಆಡ್ರಿ ಅಜೌಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News