ಭಾರತದ ಸೈಬರ್ ಭದ್ರತೆ ಗರಿಷ್ಟ ಅಪಾಯದಲ್ಲಿ: ಜಾಗತಿಕ ಶ್ರೇಯಾಂಕದಲ್ಲಿ 47ನೇ ಸ್ಥಾನಕ್ಕೆ ಕುಸಿತ

Update: 2019-11-01 14:33 GMT

ಹೊಸದಿಲ್ಲಿ, ನ.1: ಭಾರತದ ಪತ್ರಕರ್ತರು ಹಾಗೂ ಮಾನವಹಕ್ಕುಗಳ ಹೋರಾಟಗಾರರ ಕಾರ್ಯಗಳ ಮೇಲೆ ಇಸ್ರೇಲ್ ಸ್ಪೈವೇರ್ ಮೂಲಕ ನಿಗಾ ಇರಿಸಲಾಗಿದೆ ಎಂದು ವಾಟ್ಸ್ಯಾಪ್ ಮೊಕದ್ದಮೆ ದಾಖಲಿಸಿದ ಬಳಿಕ, ಇದೀಗ ಭಾರತದ ಸೈಬರ್ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆ ತಲೆಎತ್ತಿದೆ. 2013ರಲ್ಲಿ ಭಾರತ ಸರಕಾರ ಸೈಬರ್ ಭದ್ರತೆಯ ಕುರಿತ ಕಾರ್ಯನೀತಿಯನ್ನು ರೂಪಿಸಿದ್ದರೂ, ಭದ್ರತಾ ವ್ಯವಸ್ಥೆಯಲ್ಲಿ ಭಾರತದ ಶ್ರೇಯಾಂಕ ನಿರಂತರ ಕುಸಿಯುತ್ತಾ ಸಾಗಿದೆ.

2017ರಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ 23ನೇ ಸ್ಥಾನದಲ್ಲಿದ್ದರೆ ಬ್ರಿಟನ್ 12ನೇ ಸ್ಥಾನದಲ್ಲಿತ್ತು. ಸೈಬರ್ ಭದ್ರತೆಗೆ ದಿನೇ ದಿನೇ ಹೆಚ್ಚುತ್ತಿರುವ ಅಪಾಯವನ್ನು ಮನಗಂಡು ಬ್ರಿಟನ್ ತನ್ನ ವ್ಯವಸ್ಥೆಯನ್ನು ಸರಿಪಡಿಸಿಕೊಂಡ ಕಾರಣ 2018ರಲ್ಲಿ ಬ್ರಿಟನ್ ಅಗ್ರಸ್ಥಾನಕ್ಕೇರಿತು. ಆದರೆ ಅಪಾಯದ ಮುನ್ಸೂಚನೆಯನ್ನು ನಿರ್ಲಕ್ಷಿಸಿದ ಪರಿಣಾಮ ಭಾರತ ಇನ್ನಷ್ಟು ಕೆಳಗೆ ಕುಸಿದು 2018ರಲ್ಲಿ 47ನೇ ಸ್ಥಾನಕ್ಕೆ ತಲುಪಿದೆ.

ಸೈಬರ್ ಜಗತ್ತಿಗೆ ಎದುರಾಗುವ ಯಾವುದೇ ಬೆದರಿಕೆಯನ್ನು ನಿವಾರಿಸುವ ಉದ್ದೇಶದಿಂದ ವಿಶ್ವದ ಇತರ ರಾಷ್ಟ್ರಗಳು ನವನವೀನ ಕ್ರಮಗಳನ್ನು ಕ್ಷಿಪ್ರವಾಗಿ ಅನುಷ್ಠಾನಕ್ಕೆ ತಂದರೆ, ಭಾರತ ಮಾತ್ರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವಂತೆ ಕಾಣುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೈಬರ್ ಭದ್ರತೆಗೆ ಎದುರಾಗಿರುವ ಸಮಸ್ಯೆಯನ್ನು ನಿವಾರಿಸಲು ವಾಸ್ತವಿಕ ನೀತಿ ಹಾಗೂ ಕಾರ್ಯತಂತ್ರದ ಅಗತ್ಯವಿದೆ ಎಂದು ಖ್ಯಾತ ಸೈಬರ್ ಭದ್ರತೆ ತಜ್ಞ ಪವನ್ ದುಗ್ಗಲ್ ಹೇಳಿದ್ದಾರೆ.

ಸೈಬರ್ ಭದ್ರತೆಯನ್ನು ದೃಢಗೊಳಿಸಲು ಗಮನಾರ್ಹ ಪ್ರಮಾಣದ ಆರ್ಥಿಕ ಸಂಪನ್ಮೂಲದ ಹಂಚಿಕೆಯೂ ಅಗತ್ಯವಾಗಿದೆ. ಈ ವಿಷಯದಲ್ಲಿ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಹಿಂದುಳಿದಿದೆ. ಭಾರತ ಸೈಬರ್ ಭದ್ರತೆಯ ಬಗ್ಗೆ ಇನ್ನಷ್ಟು ಗಂಭೀರ ಚಿಂತನೆ ನಡೆಸಬೇಕು. ಸೈಬರ್ ಭದ್ರತೆಗೆ ಬಜೆಟ್ ಅನುದಾನ ಹಂಚಿಕೆಯನ್ನು ಗಮನಿಸಿದರೆ ನಾವು ಬ್ರಿಟನ್‌ಗಿಂತ ಬಹಳ ಹಿಂದುಳಿದಿದ್ದೇವೆ. ಬ್ರಿಟನ್‌ನ ಆರೋಗ್ಯ-ಮೆಡಿಕಲ್ ಆನ್‌ಲೈನ್ ಸೇವೆಯ ಮೇಲೆ ಸೈಬರ್ ದಾಳಿಯಾದ ಬಳಿಕ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆದ್ದರಿಂದಲೇ ಅವರು ಈ ವಿಷಯದಲ್ಲಿ ಈಗ ವಿಶ್ವದಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ದುಗ್ಗಲ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸೈಬರ್ ದಾಳಿಯ ಬಗ್ಗೆ ಗರಿಷ್ಟ ಜಾಗೃತಿ ವಹಿಸಿದರೂ ಆ ದೇಶದಲ್ಲಿ ಪ್ರತೀ ಸರಾಸರಿ 50 ಸೆಕೆಂಡ್‌ಗಳಿಗೊಮ್ಮೆ ಸೈಬರ್ ದಾಳಿಯಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಈ ರೀತಿಯ ದಾಳಿಯನ್ನು ತಡೆಯಲು ಬ್ರಿಟನ್‌ನ ಬಜೆಟ್ ಅನುದಾನದಲ್ಲಿ 5 ವರ್ಷಕ್ಕೆ 1.9 ಬಿಲಿಯನ್ ಪೌಂಡ್( ಸುಮಾರು 17,400 ಕೋಟಿ ರೂ.) ಹಣವನ್ನು ನಿಗದಿಗೊಳಿಸಿದೆ . ಭಾರತದ ಸೈಬರ್ ಭದ್ರತೆ ದುರ್ಬಲವಾಗಿದೆ ಎಂಬುದನ್ನು ಅರಿತಿರುವ ಸೈಬರ್ ದಾಳಿಗಾರರು ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದಾರೆ. ಭಾರತ ಈ ಬಗ್ಗೆ ಶೀಘ್ರ ಗಮನ ಹರಿಸುವ ಅಗತ್ಯವಿದೆ ಎಂದು ಮತ್ತೊಂದು ವರದಿ ತಿಳಿಸಿದೆ.

ಗೌಪ್ಯತೆ ರಕ್ಷಿಸಲು ಸರಕಾರ ಬದ್ಧ

ಈ ಮಧ್ಯೆ, ಸರಕಾರ ಬಳಕೆದಾರರ ಗೋಪ್ಯತೆಯನ್ನು ರಕ್ಷಿಸಲು ಬದ್ಧವಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಇಟಲಿ ಸ್ಪೈವೇರ್ ವಿಷಯದ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಹಾಗೂ ಮಿಲಿಯಾಂತರ ಭಾರತೀಯರ ಗೋಪ್ಯತೆ ರಕ್ಷಿಸಲು ಕೈಗೊಂಡಿರುವ ಕ್ರಮದ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ಭಾರತ ಸರಕಾರ ಫೇಸ್‌ಬುಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ವಾಟ್ಸ್ಯಾಪ್‌ಗೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News