ವಿಪಕ್ಷ ಮುಖಂಡ ಪಟೇಲ್, ಸಂತೋಷ್ ಮೇಲೂ ಇಸ್ರೇಲ್ ಸ್ಪೈವೇರ್‌ನ ನಿಗಾ: ವರದಿ

Update: 2019-11-01 15:44 GMT
ಪ್ರಫುಲ್ ಪಟೇಲ್

ಹೊಸದಿಲ್ಲಿ, ನ.1: ಇಸ್ರೇಲ್‌ನ ಸ್ಪೈವೇರ್ ‘ಪೆಗಾಸಸ್’ ಭಾರತದ ಪತಕ್ರರ್ತರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ನಿಗಾ ವಹಿಸಲು ತನ್ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂದು ವಾಟ್ಸ್ಯಾಪ್ ಗುರುವಾರ ಹೇಳಿಕೆ ನೀಡಿರುವಂತೆಯೇ, ಭಾರತದ ವಿಪಕ್ಷ ನಾಯಕರೂ ಈ ಪಟ್ಟಿಯಲ್ಲಿದ್ದರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

 ಮಾಜಿ ಕೇಂದ್ರ ಸಚಿವ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಫುಲ್ ಪಟೇಲ್ ಮತ್ತು ಜನತಾದಳದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಮಾಜಿ ಸಂಸದ ಸಂತೋಷ್ ಭಾರತೀಯ ಕೂಡಾ ಬೇಹುಗಾರಿಕೆಗೆ ಗುರಿಯಾಗಿದ್ದರು. ಪತ್ರಕರ್ತರು, ವಕೀಲರು ಹಾಗೂ ಮಾನವ ಹಕ್ಕು ಹೋರಾಟಗಾರರಾದ 21 ಮಂದಿ ಸಹಿತ ಫೋನ್ ಹ್ಯಾಕ್ ಮಾಡಲಾಗಿರುವ ಭಾರತದ 41 ಜನರನ್ನು ವಾಟ್ಸ್ಯಾಪ್ ಗುರುತಿಸಿದೆ ಎಂದು ವಾಟ್ಸ್ಯಾಪ್‌ನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಹೇಳಿದೆ.

ಅಲ್ಲದೆ ಪ್ರಫುಲ್ ಪಟೇಲ್ ಬಳಸುತ್ತಿದ್ದ ಕನಿಷ್ಟ 1 ಫೋನ್ ಹ್ಯಾಕ್ ಆಗಿತ್ತು. ಬಹುಷಃ ಈ ಪಟ್ಟಿಯಲ್ಲಿ ಇನ್ನೂ ಹಲವರು ಇರಬಹುದು. ಆದರೆ ಅವರು ಈ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಪ್ರಫುಲ್ ಪಟೇಲ್ ಮುಂಬೈಯ ಪಾತಕಿ ಇಕ್ಬಾಲ್ ಮಿರ್ಚಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಸಮನ್ಸ್ ನೀಡಿದೆ.

ಮಾಜಿ ಸಂಸದ ಸಂತೋಷ್ ಭಾರತೀಯ ಈಗ ಹಿಂದಿ ಡಿಜಿಟಲ್ ಮ್ಯಾಗಝಿನ್ ‘ಚೌತಿ ದುನಿಯಾ’ದ ಸಂಪಾದಕರಾಗಿದ್ದಾರೆ. ತನ್ನ ಫೋನ್ ಹ್ಯಾಕ್ ಮಾಡಿರುವ ಬಗ್ಗೆ ವಾಟ್ಸಾಪ್‌ನಿಂದ ಸಂದೇಶ ಬಂದಿತ್ತು. ಆದರೆ ಅದು ನಕಲಿ ಸಂದೇಶವಾಗಿರಬಹುದು ಎಂದು ಭಾವಿಸಿ ಸುಮ್ಮನಿದ್ದೆ. ತಾನೊಬ್ಬ ಹಿಂದಿ ಪತ್ರಕರ್ತ. ವಾಟ್ಸಾಪ್ ಕಾರ್ಯನಿವಃಹಣೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯಿಲ್ಲ. ಅಲ್ಲದೆ ನನ್ನನ್ನು ಗುರಿಯಾಗಿಸಿರುವುದು ಯಾಕೆ ಎಂಬ ಬಗ್ಗೆಯೂ ತಿಳಿದಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News