ಕಾಶ್ಮೀರಿಗಳು ಅಸ್ಥಿರತೆ ಎದುರಿಸುತ್ತಿದ್ದಾರೆ: ಭಾರತದಲ್ಲಿ ಆ್ಯಂಜೆಲಾ ಮರ್ಕೆಲ್

Update: 2019-11-01 17:18 GMT

ಹೊಸದಿಲ್ಲಿ, ನ. 1: ಕಾಶ್ಮೀರ ಕಣಿವೆಯ ಪರಿಸ್ಥಿತಿ ಹಾಗೂ ಜನರ ಮೇಲೆ ಅದರ ಪರಿಣಾಮಗಳ ಬಗ್ಗೆ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ. ತನ್ನ ನಿಯೋಗದೊಂದಿಗೆ ಹೊಸದಿಲ್ಲಿಗೆ ಆಗಮಿಸಿದ ಜರ್ಮನಿಯ ಪತ್ರಕರ್ತರೊಂದಿಗೆ ಮರ್ಕೆಲ್, ಕಾಶ್ಮೀರದ ಪರಿಸ್ಥಿತಿ ಅಸ್ಥಿರತೆಯಿಂದ ಕೂಡಿದೆ ಹಾಗೂ ಉತ್ತಮವಾಗಿಲ್ಲ. ಕಣಿವೆಯ ವಸ್ತುಸ್ಥಿತಿಯನ್ನು ಬದಲಾಯಿಸುವ ಅಗತ್ಯ ಇದೆ ಎಂದರು.

ಆಗಸ್ಟ್‌ನಲ್ಲಿ ವಿಧಿ 370ನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ನಿರ್ಬಂಧ ಹೇರಿರುವುದನ್ನು ಜರ್ಮನ್ ಸರಕಾರ ಹೇಗೆ ಪರಿಗಣಿಸುತ್ತದೆ ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಅವರ ಭೇಟಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಔತಣಕೂಟದ ಬಳಿಕ ಸಂಜೆ ಪತ್ರಕರ್ತರೊಂದಿಗೆ ಸಂವಹನ ನಡೆಯಿತು.

ಪಾಕಿಸ್ತಾನ ಹಕ್ಕು ಪ್ರತಿಪಾದಿಸುತ್ತಿರುವ ಕಾಶ್ಮೀರಕ್ಕೆ ಸಂಬಂಧಿಸಿ ಭಾರತದ ನಿಲುವಿನ ಬಗ್ಗೆ ತನಗೆ ಅರಿವಿದೆ ಎಂದು ಅವರು ಹೇಳಿದರು. ಈ ವಲಯದಲ್ಲಿ ಶಾಂತಿ ಮರು ಸ್ಥಾಪಿಸುವ ಮೋದಿ ಅವರ ಯೋಜನೆಯನ್ನು ಆಲಿಸಲು ಬಯಸುವೆ ಎಂದು ಕೂಡ ಅವರು ತಿಳಿಸಿದರು.

ವಿಧಿ 370 ರದ್ದುಗೊಳಿಸಿದ ಬಳಿಕ ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಿದ ಕುರಿತಂತೆ ಅಮೆರಿಕ ಸಹಿತ ವಿದೇಶದ ಕೆಲವು ಜನಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿರುವ ನಡುವೆ ಮರ್ಕೆಲ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News