ಬಯೋಪಿಕ್ ಚಿತ್ರಗಳ ಆರ್ಭಟ
ಬಯೋಪಿಕ್ ಚಿತ್ರಗಳು ಸಾಮಾಜಿಕವಾಗಿ ಮಾಹಿತಿ, ಮನರಂಜನೆ ನೀಡುವ ಜೊತೆಗೆ ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವುದರಿಂದ ಕೂಡ ಮಹತ್ವದ ಪ್ರಕಾರಗಳೆನಿಸಿಕೊಂಡಿವೆ. ಚಾರಿತ್ರಿಕ ವ್ಯಕ್ತಿಗಳ ಅಪರಿಚಿತ ಮುಖಗಳನ್ನು, ನಮ್ಮ ಅನುಭವದ ಆಚೆಗೆ ಉಳಿದ ಸಂಗತಿಗಳನ್ನು ಪರಿಚಯ ಮಾಡಿಸಿ ನಮ್ಮ ಭಾವ ಸರೋವರದಲ್ಲಿ ತರಂಗಗಳೇಳಿಸುತ್ತವೆ. ಸಿನೆಮಾದ ಎಲ್ಲಾ ಬಗೆಯ ಯಶಸ್ಸಿಗೂ ಬಯೋಪಿಕ್ ಒಂದು ಅಸಾಧಾರಣ ಸೂತ್ರವೇನೋ ಸರಿ. ಆದರೆ ಈ ಪ್ರವಾಹ ಎಷ್ಟು ದಿನದವರೆಗೆ ಯಶಸ್ವಿಯಾಗಿ ಉಳಿಯಬಲ್ಲದು? ವ್ಯಕ್ತಿಯೊಬ್ಬರ ಜೀವನವನ್ನು ಸೆಲ್ಯುಲಾಯ್ಡಿಗೆ ಹೊಂದಿಸುವ ಹುಚ್ಚು ಯಾಕೆ ಹಿಡಿದಿದೆ? ಬಯೋಪಿಕ್ ಚಿತ್ರಗಳ ಸ್ಫೋಟ ಕುರಿತಂತೆ ಈ ಪ್ರಶ್ನೆಗಳು ಎದ್ದಿವೆ. ಚಿತ್ರರಂಗ ಎಂದರೆ ಸದಾ ಯಶಸ್ಸಿನ ಬೆನ್ನುಬಿದ್ದ ಕ್ರಿಯಾಶೀಲರ ಸಂತೆ. ಮತ್ತೊಂದು ಯಶಸ್ಸಿನ ಸೂತ್ರ ಕಾಣುವವರೆಗೆ ಇದು ಇದ್ದದ್ದೇ...
ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಈಗ ವ್ಯಕ್ತಿಗಳ ಜೀವನ ಕಥೆಗಳನ್ನು ಅಥವಾ ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರಗಳ ಭರಾಟೆ ಸಾಗಿದೆ. ಕಳೆದ ಐದು ವರ್ಷಗಳಲ್ಲಿ ಬಾಲಿವುಡ್ ಅಥವಾ ಹಿಂದಿ ಚಲನಚಿತ್ರರಂಗವು ಬೇರೆ ಪ್ರಕಾರಗಳಿಗಿಂತ ಜೀವನ ಕತೆಗಳನ್ನು ಆಧರಿಸಿದ ಚಿತ್ರಗಳನ್ನು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಥವಾ ವಿವಿಧ ಕಾರಣಗಳಿಗಾಗಿ ಪ್ರಸಿದ್ಧಿ ಅಥವಾ ಕುಪ್ರಸಿದ್ಧಿ ಪಡೆದ ವ್ಯಕ್ತಿಗಳ ಬದುಕನ್ನು ಸೆಲ್ಯುಲಾಯ್ಡಿ ಗೆ ಹೊಂದಿಸುವ ಕಾರ್ಯ ಅಬಾಧಿತವಾಗಿ ನಡೆದಿದೆ. ಈ ಯಾದಿಯಲ್ಲಿ ಕ್ರೀಡಾಪಟುಗಳ (ಭಾಗ್ ಮಿಲ್ಕಾ ಭಾಗ್, ಮೇರಿ ಕೋಮ್, ದಂಗಲ್, ಶೂರ್ಮಾ, ಎಂ.ಎಸ್.ಧೋನಿ; ಪೂರ್ಣ, ಅಜರ್), ಕಲಾವಿದರ (ಸಂಜು), ಗ್ಯಾಂಗ್ಸ್‌ಟರ್ಸ್ ಗಳ(ಹಸೀನಾ ಪಾರ್ಕರ್, ಡ್ಯಾಡಿ, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ), ಸಾಮಾಜಿಕ ಕಾರ್ಯಕರ್ತರ (ಪ್ಯಾಡ್ ಮ್ಯಾನ್, ಬಾಬಾ ಆಮ್ಟೆ), ವಿಶೇಷ ಸಾಧನೆ ಮಾಡಿದವರ (ನೀರ್ಜಾ, ಸರಬ್‌ಜಿತ್, ಶಾಹಿದ್, ಮಾಂಝೀ), ರಾಜಕಾರಣಿಗಳ (ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಪಿ.ಎಂ.ಮೋದಿ), ಬರಹಗಾರರ (ಮಾಂಟೋ), ಚಾರಿತ್ರಿಕ ವ್ಯಕ್ತಿಗಳ (ಪದ್ಮಾವತ್, ಮಣಿಕರ್ಣಿಕಾ) ಜೀವನ ಕತೆಗಳನ್ನು ತೆರೆಯ ಮೇಲೆ ತಂದ ಸಾಹಸಗಳಿವೆ. ಇಲ್ಲಿ ಬಹುತೇಕ ಚಿತ್ರಗಳು ವಾಣಿಜ್ಯ ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿರುವುದೊಂದು ವಿಶೇಷ.
ಬಾಲಿವುಡ್‌ನ ಈ ಯಶಸ್ಸನ್ನು ಮರಾಠಿ ಚಿತ್ರರಂಗವೂ ಅನುಸರಿಸಿದೆ. ಡಾ.ರುಕ್ಮಾಬಾಯಿ(2016), ಆನಂದಿ ಗೋಪಾಲ್(2019), ಅಲ್‌ಬೇಲಾ(2016-ಭಗವಾನ್‌ನ ಜೀವನಕಥನ), ಆಣಿ.. ಡಾ.ಕಾಶೀನಾಥ್ ಘಾಣೇಕರ್(2018), ಡಾ.ತಾತ್ಯಾ ಲಹಾನೆ(2018- ನೇತ್ರ ವೈದ್ಯ), ಆರತಿ, ದಿ ಅನ್‌ನೋನ್ ಲವ್‌ಸ್ಟೋರಿ(2017-ಸನ್ನಿ ಪವಾರ್ ಕತೆ), ಜಯಭೀಮ್(2016-ಅಂಬೇಡ್ಕರ್), ಸಂಘರ್ಷ ಯಾತ್ರ (2017-ಪಂಕಜ್ ಮುಂಡೆ), ಮಹಾನಾಯಕ್ ವಸಂತ್ ತು(2015- ಮುಖ್ಯಮಂತ್ರಿ ವಸಂತರಾವ್), ಡಾ.ಪ್ರಕಾಶ್ ಬಾಬಾ ಆಮ್ಟೆ(2014) ಹೀಗೆ ಮರಾಠೀ ಚಿತ್ರರಂಗವೂ ವ್ಯಕ್ತಿಗಳ ಕತೆಗಳನ್ನು ಚಿತ್ರವಾಗಿಸುವಲ್ಲಿ ಅತ್ಯುತ್ಸಾಹ ತೋರುತ್ತಿದೆ. ವರ್ಷಕ್ಕೆ ಸರಾಸರಿ ಐದು ಬಯೋಪಿಕ್ ಚಿತ್ರಗಳಾದರೂ ಮರಾಠಿ ಭಾಷೆಯಲ್ಲಿ ತಯಾರಾಗುತ್ತಿವೆ.
ಪ್ರಖ್ಯಾತ ನಟಿ ಸಾವಿತ್ರಿ ಅವರ ಜೀವನ ಆಧರಿಸಿದ ‘ಮಹಾನಟಿ’ ಚಿತ್ರದ ಯಶಸ್ಸಿನ ಬೆನ್ನಿನಲ್ಲಿಯೇ ಸುಪ್ರಸಿದ್ಧ ನಟ ಎನ್.ಟಿ.ರಾಮರಾವ್ ಅವರ ಬದುಕನ್ನು ತೆರೆಯ ಮೇಲೆ ತರುವ (ಎನ್.ಟಿ.ಆರ್. ಕಥಾನಾಯಕುಡು) ಪ್ರಯತ್ನ ನಿರೀಕ್ಷಿತ ಫಲ ನೀಡಲಿಲ್ಲ. ಅದರ ಮುಂದುವರಿದ ಭಾಗ (ಎನ್.ಟಿ.ಆರ್. ಮಹಾನಾಯಕುಡು) ಸಹ ಮುಗ್ಗರಿಸಿತು. ಅದೇ ವೇಳೆ ರಾಮ್‌ಗೋಪಾಲವರ್ಮಾ ಅವರು ನಿರ್ದೇಶಿಸಿದ ‘ಲಕ್ಷ್ಮೀಸ್ ಎನ್.ಟಿ.ಆರ್’, ಚಿತ್ರವು ಬಿಡುಗಡೆಗೂ ಮೊದಲೇ ಮಾಧ್ಯಮಗಳಲ್ಲಿ ಮೂಡಿಸಿದ ಸಂಚಲನ, ವಿವಾದಗಳಾಗಿ ಪರಿವರ್ತನೆಯಾಯಿತೇ ಹೊರತು ಜನಮನ್ನಣೆ ಗಳಿಸಲಿಲ್ಲ. ಈ ಹಿನ್ನೆಲೆಯಿಂದಾಗಿ ತೆಲುಗು ಚಿತ್ರರಂಗದಲ್ಲೀಗ ಜೀವನ ಕಥನಗಳಿಗೆ ಬ್ರೇಕ್ ಬಿದ್ದಿದೆ.
ಆದರೆ ಬಾಲಿವುಡ್ ಮತ್ತು ಮರಾಠಿ ಚಿತ್ರರಂಗದಲ್ಲಿ ಒಂದು ದಶಕದಿಂದ ಜೀವನ ಕಥನ ಆಧರಿಸಿದ ಚಿತ್ರಗಳ ಓಟ ನಿಂತಿಲ್ಲ. ಹೊಸ ಹೊಸ ಬಯೋಪಿಕ್‌ಗಳ ನಿರ್ಮಾಣ ಘೋಷಣೆ ಮುಂದುವರಿದಿದೆ. ಪ್ರಸಿದ್ಧ ನಟರೂ ಅಂಥ ಚಿತ್ರಗಳಲ್ಲಿ ನಟಿಸಲು ಹಾತೊರೆಯುತ್ತಿದ್ದಾರೆ. ವ್ಯಕ್ತಿಗಳ ಕಥನಗಳನ್ನು ಹೆಚ್ಚು ನಾಟಕೀಯವಾಗಿ ಮಂಡಿಸುವ ವಿಧಾನಗಳು ಜನಪ್ರಿಯವಾಗುತ್ತಿವೆ. ಕಲಾ ಸ್ವಾತಂತ್ರ್ಯದ ಹೆಸರಲ್ಲಿ ವ್ಯಕ್ತಿಗಳ ಜೀವನವನ್ನು ಸಿನಿಮೀಯವಾಗಿ ತೆರೆಯ ಮೇಲೆ ತರುವ ಉತ್ಸಾಹ ಎಲ್ಲೆಲ್ಲೂ ಕಾಣುತ್ತಿದೆ.
ಹಿಂದಿ ಭಾಷೆಯಲ್ಲಿ ಹಾಲಿ ಸುಮಾರು ಹತ್ತು ಬಯೋಪಿಕ್‌ಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಪಾತ್ರವನ್ನು ವಹಿಸಲು ನಟಿ ಶ್ರದ್ಧಾ ಕಪೂರ್ ತೀವ್ರವಾದ ಬ್ಯಾಡ್ಮಿಂಟನ್ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 1983ರಲ್ಲಿ ವಿಶ್ವಕಪ್ ಗೆದ್ದು ಚರಿತ್ರೆ ನಿರ್ಮಿಸಿದ ಘಟನೆ ಆಧರಿಸಿದ 83 ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸುತ್ತಿರುವ ನಟ ರಣವೀರ್ ಸಿಂಗ್ ನವೆಂಬರ್ ತಿಂಗಳಲ್ಲಿ ಒಂದು ವಾರ ಕಪಿಲ್ ದೇವ್ ಜೊತೆ ಇದ್ದು, ಅಂದಿನ ದಿನಗಳಲ್ಲಿನ ಅವರ ಅನುಭವಗಳನ್ನು ಅರಿಯಲು ನಿರ್ಧರಿಸಿದ್ದಾರೆ. ತನ್ನ ಬದುಕನ್ನು ಕುರಿತು ಚಿತ್ರ ನಿರ್ಮಿಸುವುದಾದರೆ ತನ್ನ ಪಾತ್ರವನ್ನು ಆಲಿಯಾ ಭಟ್ ಮಾಡಬೇಕೆಂಬ ಅಪೇಕ್ಷೆಯನ್ನು ನಟಿ ಶರ್ಮಿಲಾ ಟ್ಯಾಗೋರ್ ವ್ಯಕ್ತಪಡಿಸಿದರೆ ತನ್ನ ಬದುಕಿನ ವರ್ಣಮಯ ಪಯಣ ಚಲನಚಿತ್ರವಾಗುವ ಕಾಲ ದೂರವಿಲ್ಲವೆಂಬುದರ ಬಗ್ಗೆ ನಟಿ ಐಶ್ವರ್ಯ ರೈ ಬಚ್ಚನ್ ಸೂಚನೆ ನೀಡಿದ್ದಾರೆ. ಆಕೆಯ ಪಾತ್ರವನ್ನು ನಿರ್ವಹಿಸಲು ಬಾಲಿವುಡ್ ನಟಿಯರ ನಡುವೆ ಪೈಪೋಟಿ ಏರ್ಪಡುವುದು ಮಾತ್ರ ಸತ್ಯ.
ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಬಗ್ಗೆ ಇದ್ದಕ್ಕಿದ್ದಂತೆ ಆಕರ್ಷಣೆ ಎಂದಿನಿಂದ ಹೆಚ್ಚಾಯಿತು ಎಂದು ಹೇಳುವುದು ಕಷ್ಟ. ಪ್ರಾಯಶಃ 2011ರಲ್ಲಿ ಬಿಡುಗಡೆಯಾದ ‘ಡರ್ಟಿ ಪಿಕ್ಚರ್’ ಚಿತ್ರದ ಯಶಸ್ಸಿನಿಂದ ಈ ಓಟ ವೇಗ ಪಡೆಯಿತೆಂದು ಊಹಿಸಬಹುದು. ದಕ್ಷಿಣ ಭಾರತದ ಸುಪ್ರಸಿದ್ಧ ನರ್ತಕಿ ಮತ್ತು ಅನಿರೀಕ್ಷಿತವಾಗಿ ಸಾವನ್ನಪ್ಪಿದ ಸಿಲ್ಕ್ ಸ್ಮಿತಾ ಅವರ ಬದುಕನ್ನು ಆಧರಿಸಿ ಚಿತ್ರ ನಿರ್ಮಿಸುವುದಾಗಿ ನಿರ್ಮಾಪಕಿ ಏಕ್ತಾ ಕಪೂರ್ ಪ್ರಕಟಸಿದಾಗ ಮೂಗು ಮುರಿದವರೇ ಹೆಚ್ಚು. ಸ್ಮಿತಾ ಪಾತ್ರವನ್ನು ವಿದ್ಯಾಬಾಲನ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಎಲ್ಲರ ಹುಬ್ಬೇರಲು ಕಾರಣವಾಯಿತು. ನಟ ನಾಸಿರುದ್ದೀನ್ ಶಾ ತಾರಾಗಣಕ್ಕೆ ಸೇರ್ಪಡೆಯಾದಾಗ ಹುಬ್ಬು ಮತ್ತಷ್ಟು ಮೇಲೇರಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಎಲ್ಲ ಮೂಲೆಯಿಂದಲೂ ಆ ಚಿತ್ರಕ್ಕೆ ಅಭಿನಂದನೆಯ ಸುರಿಮಳೆಯಾದಾಗ ಭಾರತೀಯ ನಿರ್ಮಾಪಕರಿಗೆ ಯಶಸ್ವಿ ಚಿತ್ರಗಳನ್ನು ರೂಪಿಸುವ ಸೂತ್ರವೊಂದು ಸಿಕ್ಕಂತಾಯಿತು. ಡರ್ಟಿ ಪಿಕ್ಚರ್ ಹಿಂಬಾಲಿಸಿ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳ ಜೀವನವನ್ನು ಆಧರಿಸಿದ ಬಯೋಪಿಕ್‌ಗಳು ಸಾಲು ಸಾಲೇ ಬಂದವು. 2016ರಲ್ಲಿ ಬಾಲಿವುಡ್ 16 ಬಯೋಪಿಕ್‌ಗಳನ್ನು ಬಿಡುಗಡೆ ಮಾಡಿತು. ಅದರಲ್ಲಿ ಹಣದೋಚಿದ ದಂಗಲ್, ಎಂ.ಎಸ್.ದೋನಿ ಮೊದಲಾದವು ಸೇರಿವೆ.
ಎಲ್ಲಾ ಬಯೋಪಿಕ್‌ಗಳು ಸೂಪರ್ ಹಿಟ್ ಎನಿಸಿಕೊಳ್ಳದಿದ್ದರೂ, ಆ ಪ್ರಕಾರದಲ್ಲಿ ನಿರ್ಮಾಣಗೊಂಡ ಚಿತ್ರಗಳು ಸೋತದ್ದು ಕಡಿಮೆ. ಸೂಪರ್ ಹಿಟ್ ಆದ ಬಯೋಪಿಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಜೀವನ ಕಥನಗಳ ನಿರ್ಮಾಣಕ್ಕೆ ಪ್ರೇರಣೆಯೊದಗಿಸಿದ್ದು ಸಹ ಸುಳ್ಳಲ್ಲ. 2018ನೇ ಸಾಲಿನಲ್ಲಿ ಅತಿ ಹೆಚ್ಚು ಹಣ ಬಾಚಿದ ಐದು ಚಿತ್ರಗಳಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದವು ಬಯೋಪಿಕ್‌ಗಳೇ! ಒಂದು ರಾಜ್‌ಕುಮಾರ್ ಹಿರಾಣಿ ಅವರ ‘ಸಂಜು’ (585 ಕೋಟಿ ರೂ.); ಮತ್ತೊಂದು ಸಂಜಯಲೀಲಾ ಬನ್ಸಾಲಿ ಅವರ ‘ಪದ್ಮಾವತ್’ (560 ಕೋಟಿ ರೂ.). ಹಾಗೆ ನೋಡಿದರೆ ಅವೆರಡಕ್ಕೂ ಹಿಂದೆ ಬಿಡುಗಡೆಯಾದ ಆಮಿರ್ ಖಾನ್ ನಟಿಸಿದ್ದ ‘ದಂಗಲ್’ ವಿಶ್ವದಾದ್ಯಂತ ನಡೆಸಿದ ವಹಿವಾಟಿನಲ್ಲಿ ಗಳಿಸಿದ ಒಟ್ಟು ಹಣ ರೂ. 2,500 ಕೋಟಿಯಂತೆ!
ಬಯೋಪಿಕ್‌ಗಳ ಯಶಸ್ಸು ಕೇವಲ ಹಣ ದೋಚುವುದಕ್ಕಷ್ಟೆ ಸೀಮಿತವಾಗಿಲ್ಲ. ಅದು ಕಲಾವಿದರಿಗೆ ಹೊಸ ಇಮೇಜ್ ತಂದುಕೊಡುವುದರ ಜೊತೆಗೆ, ಜನ ಮನ್ನಣೆ ಹಾಗೂ ಪ್ರಶಸ್ತಿ ಪುರಸ್ಕಾರಕ್ಕೆ ರಹದಾರಿ ನೀಡಿದೆ. ಬಯೋಪಿಕ್‌ಗಳಲ್ಲಿ ನಟಿಸಿದ ಹಾಲಿವುಟ್ ನಟ ನಟಿಯರು ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳುವ ರೀತಿಯಲ್ಲಿ ಬಾಲಿವುಡ್ ಕಲಾವಿದರು ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ವಿದ್ಯಾಬಾಲನ್, ಅಕ್ಷಯಕುಮಾರ್, ರಾಜ್‌ಕುಮಾರ್ ಕ್ರಮವಾಗಿ ತಾವು ನಟಿಸಿದ ಡರ್ಟಿ ಪಿಕ್ಚರ್, ರುಸ್ತುಂ ಮತ್ತು ಶಾಹಿದ್ ಚಿತ್ರಗಳ ನಟನೆಗಾಗಿ ರಾಷ್ಟ್ರೀಯ ಪುರಸ್ಕಾರ ಪಡೆದರು. ವಾಣಿಜ್ಯ ಚಿತ್ರಗಳ ಸ್ಟಂಟುಗಳಲ್ಲಿ ಕಳೆದುಹೋಗುತ್ತಿದ್ದ ಅಕ್ಷಯಕುಮಾರ್ ‘ಪ್ಯಾಡ್‌ಮ್ಯಾನ್’ ನಂಥ ಚಿತ್ರಗಳಲ್ಲಿ ನಟಿಸಿ ಕಲಾವಿದರೆನಿಸಿಕೊಳ್ಳಲು ಕಾರಣವಾದದ್ದು ಒಂದು ಬಯೋಪಿಕ್. ನಟಿ ಸೋನಂ ಕಪೂರ್‌ಳ ನಟನೆಯ ಪ್ರತಿಭೆಗೆ ‘ನೀರ್ಜಾ’ ಸಾಣೆ ಹಿಡಿದರೆ, ಸಾಲು ಸಾಲು ಸೋಲು ಕಂಡಿದ್ದ ನಟ ರಣಬೀರ್ ಕಪೂರ್ ತನ್ನ ಸೋಲಿನ ಸರಪಳಿ ತುಂಡರಿಸಿದ್ದು ‘ಸಂಜು’ ಎಂಬ ಬಯೋಪಿಕ್ ಮೂಲಕ. ನಟ ರಾಜ್‌ಕುಮಾರ್ ಅನೇಕ ಚಿತ್ರಗಳಲ್ಲಿ ನಟಿಸಿದರೂ, ನಟನಾಗಿ ಛಾಪು ಒತ್ತಿದ್ದು ‘ಶಾಹಿದ್’ ಚಿತ್ರದಲ್ಲಿಯೇ!
ನಿರ್ಮಾಪಕರಿಗೆ ಹಣ, ಕಲಾವಿದರಿಗೆ ಪ್ರಶಸ್ತಿ ತಂದುಕೊಡುವ ಬಯೋಪಿಕ್‌ಗಳು ನಿರ್ದೇಶಕರು ಮತ್ತು ಬರಹಗಾರರ ಕ್ರಿಯಾಶೀಲತೆಗೆ ಸವಾಲು ಎಸೆಯುತ್ತವೆ. ಒಬ್ಬ ಬದುಕಿರುವ ಅಥವಾ ಹಿಂದೆ ಬದುಕಿದ್ದ ವ್ಯಕ್ತಿಯೊಬ್ಬನ ಚರಿತ್ರೆಯನ್ನು ಎಲ್ಲ ಮಗ್ಗಲುಗಳಿಂದ ಶೋಧಿಸಿ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಆದುದರಿಂದಲೇ ಇವು ಸಹಜವಾಗಿ ದೀರ್ಘವಾದ ಅಧ್ಯಯನ ಮತ್ತು ವಿಶ್ಲೇಷಣೆಯನ್ನು ಬೇಡುತ್ತವೆ. ಸಮರ್ಥ ನಿರ್ದೇಶಕರು ಮಾತ್ರ ಇಂಥ ಒಡ್ಡಿದ ಆತಂಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸುತ್ತಾರೆ. ಗಾಂಧಿ ಚಿತ್ರವನ್ನು ರೂಪಿಸಲು ನಿರ್ದೇಶಕ ರಿಚರ್ಡ್ ಅಟಿನ್‌ಬರೋ ಅವರು ಎರಡು ದಶಕಗಳ ಕಾಲ ಗಾಂಧಿಯನ್ನು ಅಧ್ಯಯನ ಮಾಡಿ ಮನನ ಮಾಡಿಕೊಂಡ ನಂತರವೇ ಮಹಾತ್ಮನ ಬದುಕನ್ನು ತೆರೆಯ ಮೇಲೆ ಮೂಡಿಸುವ ಸಾಹಸ ಮಾಡಿದ್ದು.
ಸಾಮಾಜಿಕವಾಗಿ ಬಯೋಪಿಕ್‌ಗಳು ಮಾಹಿತಿ, ಮನರಂಜನೆ ನೀಡುವ ಜೊತೆಗೆ ಇತಿಹಾಸದ ಮೇಲೆ ಬೆಳಕು ಚೆಲ್ಲುವುದರಿಂದ ಕೂಡ ಮಹತ್ವದ ಪ್ರಕಾರಗಳೆನಿಸಿಕೊಂಡಿವೆ. ನಮ್ಮ ಸಮಾಜದ ಅಪರಿಚಿತ ಮುಖಗಳನ್ನು, ನಮ್ಮ ಅನುಭವದ ಆಚೆಗೆ ಉಳಿದ ಸಂಗತಿಗಳನ್ನು ಪರಿಚಯ ಮಾಡಿಸಿ ನಮ್ಮ ಅರಿವನ್ನು ವಿಸ್ತರಿಸುತ್ತವೆ. ಶೇಖರ್ ಕಪೂರ್ ಅವರು ‘ಬ್ಯಾಂಡಿಟ್ ಕ್ವೀನ್’ ಚಿತ್ರವನ್ನು ರೂಪಿಸುವವರೆಗೆ ನಮ್ಮ ಗ್ರಹಿಕೆಯಲ್ಲಿ ಉಳಿದಿದ್ದ ಫೂಲನ್ ದೇವಿಯ ಚಿತ್ರವೇ ಬೇರೆ! ಕಪೂರರ ಚಿತ್ರವು ಫೂಲನ್ ದೇವಿಯ ಬಿಂಬವನ್ನು ಸಂಪೂರ್ಣ ಬದಲಾಯಿಸಿತು. ಚಂಬಲ್ ಕಣಿವೆಯ ಢಕಾಯಿತರೆಂದರೆ ಬಂದೂಕು ಧರಿಸಿ, ಕುದುರೆಯ ಮೇಲೆ ನಾಗಾಲೋಟದಿಂದ ಬಂದು ದೋಚುವ ದುರುಳರ ಗುಂಪೆಂದು ಭಾವಿಸಿದ್ದವರಿಗೆ ‘ಬ್ಯಾಂಡಿಟ್ ಕ್ವೀನ್’ ಢಕಾಯಿತರ ನಿಜ ಬದುಕನ್ನು ತೆರೆದಿಟ್ಟಿತು. ಎಲ್ಲೋ ಒಮ್ಮೆ ಉಲ್ಲೇಖಗೊಳ್ಳುತ್ತಿದ್ದ ಭಾರತದ ಅಪ್ರತಿಮ ಕ್ರೀಡಾಪಟು ಮಿಲ್ಕಾ ಸಿಂಗ್, ಬವಣೆ ಸಂಕಷ್ಟದಲ್ಲಿ ಮಿಂದು ವಿಶ್ವ ಕ್ರೀಡಾಪಟುವಾಗಿ ರೂಪುಗೊಂಡ ಕಥಾನಕ ನೋಡುಗರಲ್ಲೂ ಹೊಸ ಅನುಭವವೊಂದನ್ನು ಸೃಷ್ಟಿಸಿತು. ತನ್ನ ಮಕ್ಕಳ ಮೂಲಕ ಪದಕವನ್ನು ಪಡೆಯಲು ಆಸೆ ಪಡುವ ಕುಸ್ತಿಪಟು ಮಹೇಂದ್ರ ಫೋಗಟ್‌ನ ಶ್ರಮ ಕಂಡಾಗ ಎದೆಯುಬ್ಬದಿರಲು ಸಾಧ್ಯವೇ ಇಲ್ಲ. ಅಂತರ್‌ರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚುವ ಎಲ್ಲ ಸಾಧ್ಯತೆಗಳಿದ್ದ ಪಾನ್ ಸಿಂಗ್ ತೋಮರ್, ಪರಿಸ್ಥಿತಿಯ ಕೈಗೊಂಬೆಯಾಗಿ ಢಕಾಯಿತನಾಗುವ ದುರಂತ ಗಾಢವಾಗಿ ತಟ್ಟುತ್ತದೆ. ಉಗ್ರಗಾಮಿಗಳನ್ನು ದಿಟ್ಟವಾಗಿ ಎದುರಿಸುವ ನೀರ್ಜಾಳ ಧೈರ್ಯ, ಮಾನವ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮನಾಗುವ ಶಾಹಿದ್ ಆಜ್ಮಿ(ಶಾಹಿದ್), ತನ್ನ ಗಂಡನ ನಿರಂತರ ಒತ್ತಾಸೆಯಿಂದ ಸಂಪ್ರದಾಯಗಳ ಕಟ್ಟಲೆಯನ್ನು ಮೀರಿ ಭಾರತದ ಮೊದಲ ವೈದ್ಯೆ ಎನಿಸಿಕೊಳ್ಳುವ ಆನಂದಿ(ಆನಂದಿ ಗೋಪಾಲ್), ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಾಲ್ಯ ವಿವಾಹವಾದರೂ, ಗಂಡನನ್ನು ಧಿಕ್ಕರಿಸಿ, ಇಂಗ್ಲೆಂಡಿಗೆ ತೆರಳಿ ವೈದ್ಯಪದವಿ ಪಡೆದು, ಭಾರತದ ಮೊದಲ ವೈದ್ಯವೃತ್ತಿ ಕೈಗೊಳ್ಳುವ ಮಹಿಳೆಯಾದ ಡಾ.ರುಕ್ಮಾಬಾಯಿ(ಡಾ. ರುಕ್ಮಾಬಾಯಿ), ಬಾಬಾ ಆಮ್ಟೆ, ಫುಲ ದೇಶಪಾಂಡೆ, ಬಾಲಗಂಧರ್ವ, ಅಪಾರ ನೋವು ಸಂಕಟವನ್ನುಂಡ ಬರಹಗಾರ ಸಾದತ್ ಹಸನ್ ಮಾಂಟೋ(ಮಾಂಟೋ), ಪ್ರೇಯಸಿಯ ನೆನಪನ್ನು ಅಮರಗೊಳಿಸಲು ಬೆಟ್ಟವನ್ನು ಕಡಿದು ಹಾದಿ ನಿರ್ಮಿಸುವ ದಶರಥ್ ಮಾಂಝಿ(ಮಾಂಝಿ)ಯ ಸಾಹಸಗಾಥೆ ಜನಸಾಮಾನ್ಯರಿಗೆ ತಲುಪಲು ಈ ಬಯೋಪಿಕ್‌ಗಳು ನಿರ್ವಹಿಸಿರುವ ಪಾತ್ರ ಮಹತ್ವದ್ದು.
ಸಿನೆಮಾದ ಎಲ್ಲಾ ಬಗೆಯ ಯಶಸ್ಸಿಗೂ ಬಯೋಪಿಕ್ ಒಂದು ಅಸಾಧಾರಣ ಸೂತ್ರವೇನೋ ಸರಿ! ಆದರೆ ಈ ಪ್ರವಾಹ ಎಷ್ಟು ದಿನದವರೆಗೆ ಯಶಸ್ವಿಯಾಗಿ ಉಳಿಯಬಲ್ಲದು? ಅತಿಯಾದರೆ ಅಮೃತವೂ ವಿಷವಾಗದೇ? ವ್ಯಕ್ತಿಯೊಬ್ಬರ ಜೀವನವನ್ನು ಸೆಲ್ಯುಲಾಯ್ಡಿ ಗೆ ಹೊಂದಿಸುವ ಹುಚ್ಚು ಯಾಕೆ ಹಿಡಿದಿದೆ? ಬಯೋಪಿಕ್ ಚಿತ್ರಗಳ ಸ್ಫೋಟ ಕುರಿತಂತೆ ಈ ಪ್ರಶ್ನೆಗಳು ಎದ್ದಿವೆ. ಆದರೆ ಅವು ಯಾವೂ ಗಂಭೀರವಾದ ಪ್ರಶ್ನೆಗಳಲ್ಲ. ಚಿತ್ರರಂಗ ಸದಾಯಶಸ್ಸಿನ ಬೆನ್ನುಬಿದ್ದ ಕ್ರಿಯಾಶೀಲರ ಸಂತೆ. ಮತ್ತೊಂದು ಯಶಸ್ಸಿನ ಸೂತ್ರ ಕಾಣುವವರೆಗೆ ಇದು ಇದ್ದದ್ದೇ! ಯಾಕೆಂದರೆ ಬಯೋಪಿಕ್‌ಗಳು ಯಶಸ್ಸು ಕಂಡರೂ, ನೋಡುಗರ ಪರೀಕ್ಷೆಯನ್ನು ಗೆಲ್ಲಬೇಕು. ಅವುಗಳ ಉದ್ದೇಶ ಸರಿಯಿಲ್ಲದಿದ್ದರೆ, ವಿವರಗಳಲ್ಲಿ ಲೋಪಗಳಿದ್ದರೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನಿರ್ದೇಶಕ ಎದುರಿಸಬೇಕು. ‘ಸಂಜು’ ಚಿತ್ರ ಯಶಸ್ಸು ಕಂಡರೂ, ಅದು ಸಂಜಯ ದತ್ ಅವರ ವಿವಾದಾತ್ಮಕ ಬದುಕನ್ನು ಸರಳಗೊಳಿಸಿ, ದೋಷಮುಕ್ತನನ್ನಾಗಿ ಮಾಡುವ ಪ್ರಯತ್ನವೆಂಬ ಟೀಕೆಗೆ ಹಿರಾನಿ ಒಳಗಾದರು. ‘ಅಜರ್’ ಚಿತ್ರ ಅಜರುದ್ದೀನ್ ಅವರಿಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನದಂತೆ ಕಂಡಿತು. ಇಂಥ ಯಾವುದೇ ವಿವಾದ ಬೇಡವೆಂದು ತೆಂಡುಲ್ಕರ್ ಅವರು ಆಡಿದ ಆಟಗಳ ತುಣುಕುಗಳನ್ನೇ ಜೋಡಿಸಿ ಹೊಸೆದ ‘ತೆಂಡುಲ್ಕರ್ ಎ ಬಿಲಿಯನ್ ಡ್ರೀಂಸ್’ ಚಿತ್ರ ಸಂಚಲನ ಮೂಡಿಸದೇ ಸೋತಿತು. ಒಂದು ಕಾಲ್ಪನಿಕ ವ್ಯಕ್ತಿಯನ್ನು ಚಾರಿತ್ರಿಕ ಭಿತ್ತಿಯಲ್ಲಿಟ್ಟು ತೆಗೆದ ‘ಪದ್ಮಾವತ್’ ಇನ್ನಿಲ್ಲದ ವಿವಾದವನ್ನು ಎದುರಿಸಬೇಕಾಯಿತು.
ಆದರೂ ಬಯೋಪಿಕ್‌ಗಳಿಗೆ ಜನ ಹೆಚ್ಚು ಒಲಿಯುತ್ತಿರುವುದು ಸದ್ಯದ ವಸ್ತುಸ್ಥಿತಿ. ವೀಕ್ಷಕರು ಈಗ ಜೀವನ ಕಥನಗಳ ಚಿತ್ರಗಳನ್ನು ಗೆಲ್ಲಿಸುತ್ತಿದ್ದಾರೆ, ಏಕೆ ಎಂಬ ಪ್ರಶ್ನೆಗೆ ಹಲವರು ಉತ್ತರ ಕಂಡುಕೊಳ್ಳಲು ಯತ್ನಿಸಿದ್ದಾರೆ. ‘ಪಾನ್ ಸಿಂಗ್ ತೋಮರ್’ ಚಿತ್ರವನ್ನು ನಿರ್ದೇಶಿಸಿದ ಟಿಗ್ಮನ್ಷು ಧೂಲಿಯಾ ಅವರು ಈ ಬಗ್ಗೆ ಹೇಳುವ ಮಾತುಗಳು ಹೀಗಿವೆ:- ‘‘ಪ್ರಸಕ್ತ ಕಾಲದ ಸಮಾಜದಲ್ಲಿ ಜನ ಮೆಚ್ಚುವ ನಾಯಕರಿಲ್ಲ. ಆದುದರಿಂದ ನಿದೆರ್ೀಶಕರು ಚರಿತ್ರೆಯ ಆಳಕ್ಕೆ ಹೋಗಿ ಹೀರೋಗಳನ್ನು ಕರೆತರುತ್ತಿದ್ದಾರೆ. ಬಯೋಪಿಕ್‌ಗಳು ಯಶಸ್ಸು ಕಾಣುತ್ತಿವೆ ಯಾಕೆಂದರೆ, ಭರವಸೆಯೇ ಇಲ್ಲದ ಅನಿಶ್ಚಿತ, ಅರಾಜಕ ಕಾಲಘಟ್ಟದಲ್ಲಿರುವ ವೀಕ್ಷಕರಿಗೆ ನಿರ್ದೇಶಕರು ಹಿಂದಿನ ನಾಯಕರ ಮೂಲಕ ಭರವಸೆ ಬಿತ್ತಲು ಯತ್ನಿಸುತ್ತಿದ್ದಾರೆ. ಭರವಸೆ ಎಂದೂ ಉತ್ಸಾಹ ತುಂಬುವ ಸಾಧನ’’
ಮೂರು ದಶಕಗಳಿಂದ ಚಲನಚಿತ್ರರಂಗದಲ್ಲಿ ಕ್ರಿಯಾಶೀಲ ರಾಗಿರುವ ವಿಕ್ರಂ ಭಟ್, ಬಯೋಪಿಕ್‌ಗಳ ಯಶಸ್ಸಿಗೆ ನೀಡುವ ಕಾರಣವೇ ಬೇರೆ. ‘‘ನಾನು ನಿರ್ದೇಶಕನಾಗುವ ಮೊದಲು 10 ವರ್ಷ ಸಹಾಯಕ ನಿರ್ದೇಶಕನಾಗಿದ್ದೆ. ನಾನು ಈ ವೀಕ್ಷಕರ ವರ್ತನೆ ಆಗಾಗ್ಗೆ ಬದಲಾಗುವುದನ್ನು ಕಂಡಿದ್ದೇನೆ. ಒಂದು ಕಾಲಕ್ಕೆ ಪ್ರೇಮದ ಕತೆಗೆ, ಮತ್ತೊಂದು ಕಾಲಕ್ಕೆ ಕುಟುಂಬದ ಕತೆಗೆ; ಒಂದು ಕಾಲ ಆ್ಯಕ್ಷನ್ ಚಿತ್ರಗಳಿಗೆ ಮನ್ನಣೆ: ಹೀಗೆ ಪ್ರೇಕ್ಷಕರ ಪ್ರಿಫರೆನ್ಸ್ ಮತ್ತು ಅಭಿರುಚಿ ಬದಲಾಗುತ್ತದೆ. ನಿರ್ದೇಶಕರೂ ಸಹ ಹಾಸ್ಯ ಚಿತ್ರ ಯಶಸ್ಸು ಕಂಡರೆ ಅಂಥ ಚಿತ್ರಗಳ ಬೆನ್ನು ಬೀಳುತ್ತಾರೆ. ಆ್ಯಕ್ಷನ್ ಚಿತ್ರ ಹಿಟ್ ಆದರೆ, ಆ ಪಂಥಕ್ಕೆ ಅಂಟಿ ಕೂರುತ್ತಾರೆ. ಸದ್ಯ ಬಯೋಪಿಕ್‌ಗಳ ಕಾಲ. ಇದೊಂದು ಹಂತ.’’ ಅವರ ಮಾತಿನ ಇಂಗಿತ- ಪ್ರೇಕ್ಷಕನ ಮನಸ್ಸು ಮತ್ತೊಂದು ಪಂಥದ ಚಿತ್ರಗಳಿಗೆ ಒಲಿಯುವವರೆಗೆ ಬಯೋಪಿಕ್ ಭರಾಟೆಗೆ ಕಡಿವಾಣವಿಲ್ಲ.