ಯಾರಿಗೂ ಖಾಸಗಿತನ ಉಳಿದಿಲ್ಲ: ಸುಪ್ರೀಂ ಕೋರ್ಟ್

Update: 2019-11-04 15:15 GMT

ಹೊಸದಿಲ್ಲಿ,ನ.4: ಛತ್ತೀಸ್‌ಗಡ ಸರಕಾರದಿಂದ ಐಪಿಎಸ್ ಅಧಿಕಾರಿ ಮುಕೇಶ ಗುಪ್ತಾ ಅವರ ಫೋನ್ ಕದ್ದಾಲಿಕೆ ಪ್ರಕರಣದ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು,‘ಯಾರಿಗೂ ಖಾಸಗಿತನ ಉಳಿದಿಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಭೂಪೇಶ ಬಾಘೇಲ್ ನೇತೃತ್ವದ ಸರಕಾರವು ತನ್ನನ್ನು ಮತ್ತು ತನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿದೆ ಎಂದು ಗುಪ್ತಾ ಆರೋಪಿಸಿದ್ದಾರೆ.

ಈ ದೇಶದಲ್ಲಿ ಏನಾಗುತ್ತಿದೆ? ಈ ಫೋನ್ ಕದ್ದಾಲಿಕೆಗೆ ಯಾರು ಆದೇಶಿಸಿದ್ದರು ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಅರುಣ ಮಿಶ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರ ಪೀಠವು,ಕದ್ದಾಲಿಕೆಗೆ ಆದೇಶಿಸಿದ್ದು ಯಾರು ಎನ್ನುವುದನ್ನು ಮತ್ತು ಅದರ ಹಿಂದಿನ ಕಾರಣಗಳೇನು ಎಂದು ಸ್ಪಷ್ಟಪಡಿಸಿ ವಿವರವಾದ ಅಫಿಡವಿಟ್ ಅನ್ನು ಸಲ್ಲಿಸುವಂತೆ ಛತ್ತೀಸ್‌ಗಡ ಸರಕಾರದ ಅಧಿಕಾರಿಗಳಿಗೆ ನಿರ್ದೇಶ ನೀಡಿತು.

  ಗುಪ್ತಾ ಅವರನ್ನು ಬಂಧಿಸದಂತೆ ಮತ್ತು ಅನಗತ್ಯ ಕಿರುಕುಳಗಳನ್ನು ನೀಡದಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ಅಕ್ಟೋಬರ್‌ನಲ್ಲಿ ಛತ್ತೀಸ್‌ಗಡ ಪೊಲೀಸರಿಗೆ ಸೂಚಿಸಿತ್ತು.

ಗುಪ್ತಾ ಪರ ವಕೀಲ ಮಹೇಶ ಜೇಠ್ಮಲಾನಿ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಿರುವುದನ್ನು ಆಕ್ಷೇಪಿಸಿದ ನ್ಯಾಯಾಲಯವು,ಅವರ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಮುಖ್ಯಮಂತ್ರಿಗಳ ಹೆಸರನ್ನು ಪ್ರಕರಣದಲ್ಲಿ ಎಳೆದುತರುವ ಮೂಲಕ ವಿಷಯವನ್ನು ರಾಜಕೀಯಗೊಳಿಸದಂತೆ ಜೇಠ್ಮಲಾನಿಯವರಿಗೆ ನಿರ್ದೇಶ ನೀಡಿದ ನ್ಯಾಯಾಲಯವು,ಅರ್ಜಿಯಲ್ಲಿನ ಪ್ರತಿವಾದಿಗಳ ಪೈಕಿ ಬಾಘೇಲ್ ಹೆಸರನ್ನು ತೆಗೆಯುವಂತೆ ಆದೇಶಿಸಿತು.

ಆರ್ಥಿಕ ಅಪರಾಧಗಳ ಘಟಕವು ಆಗ ವಿಶೇಷ ಡಿಜಿಪಿಯಾಗಿದ್ದ ಗುಪ್ತಾ ಮತ್ತು ನಾರಾಯಣಪುರ ಎಸ್‌ಪಿ ಆಗಿದ್ದ ರಜನೇಶ್ ಸಿಂಗ್ ಅವರ ವಿರುದ್ಧ ಕ್ರಿಮಿನಲ್ ಒಳಸಂಚಿನ ಆರೋಪದಲ್ಲಿ ವರದಿಯೊಂದನ್ನು ದಾಖಲಿಸಿದ ಬಳಿಕ ಫೆ.9ರಂದು ಅವರಿಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ಅಧಿಕಾರಿಗಳು 2015ರಲ್ಲಿ ನಾಗರಿಕ ಪೂರೈಕೆ ನಿಗಮದ ಹಗರಣದ ತನಿಖೆಯ ಸಂದರ್ಭದಲ್ಲಿ ಫೋನ್‌ಗಳನ್ನು ಕದ್ದಾಲಿಸಿದ್ದರೆಂದೂ ಆರೋಪಿಸಲಾಗಿತ್ತು.

ಸುಳ್ಳು ಸಾಕ್ಷಗಳನ್ನು ಒದಗಿಸಿದ್ದ,ಸಾಕ್ಷವನ್ನು ತಿರುಚಿದ್ದ ಮತ್ತು ಫೋರ್ಜರಿ ಸೇರಿದಂತೆ ವಿವಿಧ ಆರೋಪಗಳನ್ನು ಗುಪ್ತಾ ಮತ್ತು ಸಿಂಗ್ ವಿರುದ್ಧ ಹೊರಿಸಲಾಗಿತ್ತು. ಎಲ್ಲ ಆರೋಪಗಳನ್ನು ನಿರಾಕರಿಸಿರುವ ಗುಪ್ತಾ,ಕಾನೂನಿನಂತೆ ವಿಚಾರಣೆಯನ್ನು ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ಸೆ.2ರಂದು ಮಧ್ಯಂತರ ಆದೇಶದ ಮೂಲಕ ಸರಕಾರವು ಗುಪ್ತಾ ವಿರುದ್ಧ ದಾಖಲಿಸಿದ್ದ ಮೂರು ಎಫ್‌ಐಆರ್‌ಗಳಿಗೆ ತಡೆಯನ್ನು ನೀಡಿದ್ದ ಸರ್ವೋಚ್ಚ ನ್ಯಾಯಾಲಯವು,ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News