ವರ್ಷದಲ್ಲಿ 17,500 ಮಕ್ಕಳ ಮೇಲೆ ಅತ್ಯಾಚಾರ: ಪೋಕ್ಸೊ ಅಡಿಯಲ್ಲಿ ಕೇವಲ 7,498 ಪ್ರಕರಣ ದಾಖಲು

Update: 2019-11-05 15:56 GMT

ಹೊಸದಿಲ್ಲಿ, ನ. 5: ದೇಶದಲ್ಲಿ 2017ರಲ್ಲಿ ಒಟ್ಟು 17,557 ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆದರೆ, ಈ ಪ್ರಕರಣಗಳಲ್ಲಿ ಶೇ. 57 ಅಥವಾ 10 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಪೋಕ್ಸೊ ಅಡಿಯಲ್ಲಿ ದಾಖಲಿಸಿಲ್ಲ ಎಂದು 'ಕ್ರೈಮ್ ಇಂಡಿಯಾ' ವರದಿ ಅಡಿಯಲ್ಲಿ ಕಳೆದ ತಿಂಗಳು ಬಿಡುಗಡೆ ಮಾಡಲಾದ ಇತ್ತೀಚೆಗಿನ ದತ್ತಾಂಶ ಬಹಿರಂಗಗೊಳಿಸಿದೆ.

 ಗೃಹ ಸಚಿವಾಲಯದ ಅಡಿಯಲ್ಲಿರುವ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ (ಎನ್‌ಸಿಆರ್‌ಬಿ) ಪ್ರಕಟಿಸಿದ ವರದಿಯ ಪ್ರಕಾರ, ದೇಶದಲ್ಲಿ ದಾಖಲಾದ ಒಟ್ಟು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಪೊಕ್ಸೊ ಕಾಯ್ದೆಯ ಸಂಬಂಧಿತ ಕಲಂ 4 ಹಾಗೂ 6ರ ಅಡಿಯಲ್ಲಿ ಕೇವಲ 7,498 ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿದೆ. ಉಳಿದ ಪ್ರಕರಣಗಳನ್ನು ಐಪಿಸಿಯ 376 ಕಲಂಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

  ಪೊಕ್ಸೊದ ಸಂಬಂಧಿತ ಕಲಂಗಳ ಅಡಿಯಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣವನ್ನು ದಾಖಲಿಸುವಲ್ಲಿನ ನಿರಾಶದಾಯಕ ಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶ‌ನ (ಕೆಎಸ್‌ಸಿಎಫ್), ಇದು ಪೊಲೀಸ್ ಅಧಿಕಾರಿಗಳಲ್ಲಿ ಪೋಕ್ಸೊ ಕಾಯ್ದೆ ಕುರಿತ ಜ್ಞಾನದ ಕೊರತೆ ಅಥವಾ ಅವರ ನಿರ್ಲಕ್ಷವನ್ನು ಸೂಚಿಸುತ್ತದೆ ಎಂದಿದೆ.

ಇದು ನಮ್ಮ ವ್ಯವಸ್ಥೆಯ ಗಂಭೀರ ಲೋಪ. ಆದುದರಿಂದ ಇದನ್ನು ಸರಿಪಡಿಸಲು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹಾಗೂ ರಾಜ್ಯ ಪೊಲೀಸ್ ವರಿಷ್ಠರು ಕೂಡಲೇ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ಅತ್ಯಾಚಾರದ ಎಲ್ಲ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವುದು ಕಾನೂನಿನ ಅವಶ್ಯಕತೆ ಹಾಗೂ ಇಲ್ಲಿ ಯಾವುದೇ ವಿಷಯಾಂತರಕ್ಕೂ ಅವಕಾಶ ನೀಡಬಾರದು ಎಂದು ಕೆಎಸ್‌ಸಿಎಫ್ ಹೇಳಿದೆ.

ಮಕ್ಕಳ ಹಕ್ಕು ಹೋರಾಟಗಾರ ಹಾಗೂ ನ್ಯಾಯವಾದಿ ಅನಂತ್ ಕುಮಾರ್ ಅಸ್ತಾನ ಕೂಡ ಇದೇ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಪೋಕ್ಸೊ ಕಾಯ್ದೆಯನ್ನು ಅನ್ವಯಿಸುವಲ್ಲಿ ಪೊಲೀಸರಿಗೆ ಜ್ಞಾನದ ಕೊರತೆಗೆ ಸಂಬಂಧಿಸಿದ ಸಮಸ್ಯೆ. ಇದನ್ನು ಸರಿಪಡಿಸಲು ಸಾಕಷ್ಟು ತರಬೇತು ನೀಡಬೇಕಿದೆ ಹಾಗೂ ಶ್ರಮ ವಹಿಸಬೇಕಿದೆ. ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣವನ್ನು ಪೊಸ್ಕೊದ ಸಂಬಂಧಿತ ನಿಯಮ ಹಾಗೂ ಐಪಿಸಿ 376 ಅಡಿಯಲ್ಲಿ ದಾಖಲಿಸಬೇಕು ಎಂದು ಅವರು ಹೇಳಿದ್ದಾರೆ.

ಕಳೆದ 3-4 ವರ್ಷಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ದಾಖಲಾತಿಯಲ್ಲಿ ಸುಧಾರಣೆ ಕಂಡಿದೆ. ಕೇವಲ ಐಪಿಸಿ ಅಡಿಯಲ್ಲಿ ದಾಖಲಿಸಿದ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದನ್ನು ನೀವು ಕಾಣಬಹುದು. ಈ ಹಿಂದಿನ ಇದರ ಸಂಖ್ಯೆ ಹೆಚ್ಚಿತ್ತು ಎಂದು ಅಸ್ತಾನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News