ಕರ್ತಾರ್‌ಪುರ ಸಮಾರಂಭಕ್ಕೆ ತೆರಳಲು ನವಜ್ಯೋತ್ ಸಿಂಗ್ ಸಿಧುಗೆ ಅವಕಾಶವಿಲ್ಲ ?

Update: 2019-11-07 04:26 GMT

ಹೊಸದಿಲ್ಲಿ: ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಲ್ಲಿಗೆ ಪ್ರಯಾಣ ಬೆಳೆಸಲು ಪಂಜಾಬ್‌ನ ಮಾಜಿ ಸಚಿವ ನವಜ್ಯೋತ್ ಸಿಂಗ್ ಸಿಧು ಅವರಿಗೆ ರಾಜಕೀಯ ಅನುಮತಿ ದೊರಕುವ ಸಾಧ್ಯತೆ ಇಲ್ಲ.

ಪಾಕಿಸ್ತಾನದ ಪ್ರಧಾನಿಯಾಗಿ ಕಳೆದ ವರ್ಷ ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸುವ ವೇಳೆ ಕರ್ತಾರ್‌ಪುರ ವಿಷಯವನ್ನು ಪ್ರಸ್ತಾಪಿಸಿದ್ದ ನವಜ್ಯೋತ್ ಸಿಂಗ್ ಸಿಧು, ಭಾರತೀಯ ಯಾತ್ರಿಗಳು, ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಕಾರಿಡಾರ್ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು. ನ. 9ರಂದು ಕಾರಿಡಾರ್‌ನ ಪಾಕಿಸ್ತಾನಿ ಭಾಗ ಉದ್ಘಾಟನೆಗೊಳ್ಳಲಿದ್ದು, ಇದಕ್ಕೆ ಸಿಧು ಅವರನ್ನು ಆಹ್ವಾನಿಸಲಾಗಿದೆ.

ವಿದೇಶ ಪ್ರವಾಸಗಳಿಗೆ ರಾಜಕೀಯ ಅನುಮತಿ ಪಡೆಯಬೇಕಾದ ಸಿಧು ಅಥವಾ ಇತರ ಗಣ್ಯರು ನ. 9ರಂದು ಸಾಮಾನ್ಯ ಯಾತ್ರಿಗಳಾಗಿ ಗಡಿಯಾಚೆಯ ಗುರುದ್ವಾರಕ್ಕೆ ತೆರಳುವುದಾದರೆ ಯಾವುದೇ ಅನುಮತಿ ಅಗತ್ಯವಿಲ್ಲ. ಆದರೆ ಕಾರಿಡಾರ್ ಮೂಲಕ ನ. 9ರ ಬಳಿಕ ಯಾವುದೇ ಗಣ್ಯರು ಪ್ರಯಾಣ ಕೈಗೊಳ್ಳುವುದಾದರೆ ರಾಜಕೀಯ ಅನುಮತಿ ಅಗತ್ಯ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಸಿಧು ಅವರು ನ. 9ರಂದು ಪಾಕಿಸ್ತಾನಕ್ಕೆ ಪ್ರಯಾಣ ಕೈಗೊಳ್ಳಲು ರಾಜಕೀಯ ಅನುಮತಿ ನೀಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕರ್ತಾರ್‌ಪುರ ಉದ್ಘಾಟನೆಗೆ ಹಾಜರಾಗಲು ಅನುಮತಿ ನೀಡುವಂತೆ ಸಿಧು ಬುಧವಾರ ಹಾಗೂ ಶನಿವಾರ ಎರಡು ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News