ನಾಟಕೀಯ ತಿರುವುಗಳ ಕ್ರೀಡಾ ಬಯೋಪಿಕ್

Update: 2019-11-09 18:28 GMT
ನಾಟಕೀಯ ತಿರುವುಗಳ ಕ್ರೀಡಾ ಬಯೋಪಿಕ್
  • whatsapp icon

 ರಾಷ್ಟ್ರೀಯತೆಯ ಉನ್ಮಾದದಲ್ಲಿ ತೇಲುತ್ತಿರುವ ಸಮಕಾಲೀನ ಸಮಾಜದಲ್ಲಿ ಕ್ರೀಡಾಪಟುಗಳ ಜೀವನ ಕತೆಯನ್ನು ಅವರುಗಳ ಸಾಧನೆಯನ್ನು ರಾಷ್ಟ್ರೀಯತೆಯ ಕನ್ನಡಕದಲ್ಲಿ ನಿರ್ದೇಶಕರು ರೂಪಿಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಮಿಲ್ಕಾ ಸಿಂಗ್ ಅವರ ಬದುಕಿನ ಕತೆಯನ್ನು ದೇಶ ವಿಭಜನೆಯನ್ನು ಹಿನ್ನೆಲೆಯಲ್ಲಿಟ್ಟು ಹೇಳಲಾಯಿತು. ಪಾಕಿಸ್ತಾನದ ಓಟಗಾರರನ್ನು ಪಾಕ್ ನೆಲದಲ್ಲಿ ಸೋಲಿಸುವ ಘಟನೆಯನ್ನು ಪಾಕಿಸ್ತಾನದ ಮೇಲೆ ಭಾರತವು ಸಾಧಿಸಿದ ವಿಜಯದಂತೆ ಬಿಂಬಿಸಲಾಯಿತು. ಧೋನಿ, ತೆಂಡುಲ್ಕರ್, ಮೇರಿ ಕೋಮ್, ಎಲ್ಲರೂ ಸಾಧನೆ ಮಾಡುವುದು ಭಾರತಕ್ಕಾಗಿಯೇ. ಈ ರಾಷ್ಟ್ರೀಯತೆಯ ಭಕ್ತಿ ಅನೇಕ ಭಾವನಾತ್ಮಕ ದೃಶ್ಯಗಳನ್ನು ಹೆಣೆಯಲು ನೆರವಾಗುತ್ತದೆ. ಪ್ರೇಕ್ಷಕನಲ್ಲಿ ದೇಶಭಕ್ತಿ ಉಕ್ಕಿಸುತ್ತದೆ. ಪರಿಣಾಮವಾಗಿ ಬಾಕ್ಸ್ ಆಫೀಸ್ ಲಕಲಕನೆ ಹೊಳೆಯುತ್ತದೆ. ಹಾಗಾಗಿ ಭಾರತೀಯ ಚಿತ್ರರಂಗ ವಿಶೇಷವಾಗಿ ಹಿಂದಿ ಚಿತ್ರರಂಗ ಸಿನೆಮ್ಯಾಟಿಕ್ ಆದ ಕ್ರೀಡಾ ಕತೆಗಳಿಗೆ ಮುಗಿಬಿದ್ದಿದೆ.


ಕಳೆದ ವಾರದ ಅಂಕಣದಲ್ಲಿ ಪ್ರಖ್ಯಾತ ವ್ಯಕ್ತಿಗಳ ಜೀವನ ಕತೆ, ಅವರ ಸಾಧನೆ ಮತ್ತು ಅವರ ಬದುಕಿನ ಆಸಕ್ತಿದಾಯಕ ಸಂಗತಿಗಳನ್ನು ಆಧರಿಸಿದ ಬಯೋಪಿಕ್ ಚಿತ್ರಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಿದ್ಯಮಾನದ ಬಗ್ಗೆ ತಿಳಿಯಲು ಯತ್ನಿಸಲಾಗಿತ್ತು.

ಬಯೋಪಿಕ್ ಚಿತ್ರಗಳಲ್ಲಿ ಕ್ರೀಡಾಪಟುಗಳ ಬದುಕನ್ನು ಆಧರಿಸಿದ ಚಿತ್ರಗಳದ್ದೇ ಸಿಂಹಪಾಲು. ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ ಹಿಂದಿ ಚಲನಚಿತ್ರರಂಗ ಕ್ರೀಡಾಪಟುಗಳ ಜೀವನವನ್ನು ಆಧರಿಸಿದ ಚಿತ್ರಗಳ ನಿರ್ಮಾಣಕ್ಕೆ ಒಲಿದಿದೆ. ಇಂಥ ಚಿತ್ರಗಳಿಗೆ ಪ್ರೇಕ್ಷಕರು ಅದ್ಭುತವಾಗಿ ಪ್ರತಿಕ್ರಿಯಿಸಿದ ಕಾರಣ ಈಗ ಮತ್ತಷ್ಟು ಇಂಥ ಚಿತ್ರಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಆದರೆ ನಿರ್ದೇಶಕರ ಪಾಲಿಗೆ ಕ್ರೀಡಾಪಟುಗಳ ಬದುಕು, ಸಾಧನೆ ಆಧರಿಸಿ ಚಿತ್ರಗಳನ್ನು ರೂಪಿಸುವುದು

ಸುಲಭ ಸಾಧ್ಯದ ಮಾತಲ್ಲ. ಅಂಥ ಮಹತ್ವಾಕಾಂಕ್ಷೆಗಳ ಪ್ರಯೋಗ ನಿರ್ದೇಶಕರ ಕ್ರಿಯಾಶೀಲತೆಯನ್ನು ಕೆಣಕಿವೆ. ಅವರ ಸಾಮರ್ಥ್ಯಕ್ಕೆ ಸವಾಲು ಒಡ್ಡಿವೆ.
ಯಾವುದೇ ಒಂದು ಕ್ರೀಡಾ ಬಯೋಪಿಕ್ ಕಟ್ಟಲು ಮೊದಲ ಸವಾಲೆಂದರೆ ನಾಯಕನ ಪಾತ್ರವನ್ನು ಮತ್ತು ಇತರ ಪೋಷಕ ಪಾತ್ರಗಳನ್ನು ನಿರ್ವಹಿಸಲು ಸೂಕ್ತ ಕಲಾವಿದರ ಆಯ್ಕೆ. ಆಟಗಾರರ ಬದುಕು ಮತ್ತು ಅವರು ಸಾಧನೆ ಮಾಡಿದ ಕಾಲದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅಧ್ಯಯನ. ಎರಡನೆಯ ಸವಾಲು ಅಂತಿಮವಾಗಿ ಕಲೆ, ರಂಜನೆ ಮತ್ತು ವಾಸ್ತವತೆಯನ್ನು ಸಮತೋಲನಗೊಳಿಸಿ ಜನಮೆಚ್ಚುವಂಥ ಚಿತ್ರವನ್ನು ತಯಾರಿಸುವ ಸಂಗತಿ.

ಕಳೆದ ನಾಲ್ಕೈದು ವರ್ಷಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ಸುದ್ದಿ ಮಾಡಿದ ಚಿತ್ರಗಳಲ್ಲಿ ಕೆಲವು ಮುಖ್ಯ ಮೈಲುಗಲ್ಲುಗಳೆಂದರೆ- ಭಾಗ್ ಮಿಲ್ಕಾ ಭಾಗ್, ದಂಗಲ್, ಶೂರ್ಮಾ, ಪಾನ್ ಸಿಂಗ್ ತೋಮರ್, ಮೇರಿ ಕೋಮ್, ಎಂ.ಎಸ್. ಧೋನಿ-ದಿ ಅನ್‌ಟೋಲ್ಡ್ ಸ್ಟೋರಿ, ಅಜರ್, ಬುಧಿಯಾ ಸಿಂಗ್, ಬಾರ್ನ್ ಟು ರನ್. ಅಸ್ಸಾಮ್‌ನ ಗದ್ದೆಗಳಲ್ಲಿ ಹುಡುಗರೊಂದಿಗೆ ಫುಟ್‌ಬಾಲ್ ಆಡುತ್ತಾ ಓಟದ ಕಣಕ್ಕಿಳಿದು ಸಾಧನೆ ಮಾಡಿದ ಹಿಮಾದಾಸ್, ಜಿಮ್ನಾಸ್ಟಿಕ್ ಪಟು ದೀಪಾ, ಕ್ರಿಕೆಟ್ ತಾರೆ ಮಿಥಾಲಿ ರಾಜ್, ಫುಟ್‌ಬಾಲ್ ಪಟು ಬೈಚುಂಗ್ ಭುಟಿಯಾ, ಬಾಕ್ಸರ್ ಡಿಂಗ್‌ಕೋ ಸಿಂಗ್, ಓಟಗಾರ್ತಿ ದ್ಯುತಿ ಚಾಂದ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಹಾಗೂ ಬ್ಯಾಡ್ಮಿಂಟನ್ ಗುರು ಪಿ. ಗೋಪಿಚಂದ್, ಸ್ಲಂಗಳಲ್ಲಿ ಫುಟ್‌ಬಾಲ್ ಆಟವನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದ ವಿಜಯ್ ಬಾರ್ಸೆ ಮೊದಲಾದವರ ಬದುಕನ್ನು ತೆರೆಗೆ ತರಲು ನಿರ್ಮಾಪಕರು ಚಿತ್ರೀಕರಣದ ಹಕ್ಕುಗಳನ್ನು ಪಡೆದಿದ್ದಾರೆ. 1983ರಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಕ್ರಿಕೆಟ್ ಆಟವನ್ನೇ ಬದಲಿಸಿದ ಆ ಚಾರಿತ್ರಿಕ ಘಟನೆಯನ್ನು 83 ಶೀರ್ಷಿಕೆಯಡಿ, ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ಸಿನೆಮಾ ರೂಪದಲ್ಲಿ ತರಲು ಸಕಲ ಸಿದ್ಧತೆಗಳಾಗಿವೆ.

ಕ್ರೀಡಾಪಟುಗಳ ಬಯೋಪಿಕ್‌ಗಳಿಗೆ ನಿರ್ದೇಶಕರು ಹೆಚ್ಚು ಒಲಿಯಲು ಈಗಿನ ಸಾಮಾಜಿಕ ಪರಿಸ್ಥಿತಿಯೇ ಹೆಚ್ಚು ಕಾರಣವೆಂದು ಕಾಣುತ್ತದೆ. ರಾಷ್ಟ್ರೀಯತೆಯ ಉನ್ಮಾದದಲ್ಲಿ ತೇಲುತ್ತಿರುವ ಸಮಕಾಲೀನ ಸಮಾಜದಲ್ಲಿ ಕ್ರೀಡಾಪಟುಗಳ ಜೀವನ ಕತೆಯನ್ನು ಅವರ ಸಾಧನೆಯನ್ನು ರಾಷ್ಟ್ರೀಯತೆಯ ಕನ್ನಡಕದಲ್ಲಿ ನಿರ್ದೇಶಕರು ರೂಪಿಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಮಿಲ್ಕಾ ಸಿಂಗ್ ಅವರ ಬದುಕಿನ ಕತೆಯನ್ನು ದೇಶ ವಿಭಜನೆಯನ್ನು ಹಿನ್ನೆಲೆಯಲ್ಲಿಟ್ಟು ಹೇಳಲಾಯಿತು. ಪಾಕಿಸ್ತಾನದ ಓಟಗಾರರನ್ನು ಪಾಕ್ ನೆಲದಲ್ಲಿ ಸೋಲಿಸುವ ಘಟನೆಯನ್ನು ಪಾಕಿಸ್ತಾನದ ಮೇಲೆ ಭಾರತವು ಸಾಧಿಸಿದ ವಿಜಯದಂತೆ ಬಿಂಬಿಸಲಾಯಿತು. ಒಲಿಂಪಿಕ್ಸ್‌ನಲ್ಲಿ 400 ಮೀ. ಓಟದ ಸ್ಪರ್ಧೆಯಲ್ಲಿ ಹಿಂದಿನ ದಾಖಲೆಯನ್ನು ಮುರಿದರೂ ಪದಕ ವಂಚಿತನಾದ ದುರಂತಕ್ಕೆ ಚಿತ್ರದಲ್ಲಿ ಹೆಚ್ಚಿನ ಮಹತ್ವ ಪ್ರಾಪ್ತವಾಗಲಿಲ್ಲ.

ಆಮಿರ್‌ಖಾನ್ ನಟಿಸಿದ ದಂಗಲ್ ಚಿತ್ರದಲ್ಲಿ ಪದಕವಂಚಿತ ಅಪ್ಪ ಕುಸ್ತಿಯ ಪಂದ್ಯದಲ್ಲಿ ಭಾರತಕ್ಕಾಗಿ ಪದಕ ಗೆದ್ದುಕೊಡಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕುಸ್ತಿಪಟುಗಳನ್ನಾಗಿ ತಯಾರು ಮಾಡುವ ಕಥನವಿದೆ. ಅಲ್ಲಿ ಹೆಂಡತಿ, ಅಮಾಯಕ ಹೆಣ್ಣು ಮಕ್ಕಳ ಆಶೋತ್ತರಗಳು, ಕನಸುಗಳನ್ನು ಹೇಳಿಕೊಳ್ಳಲು ಅವಕಾಶವಿಲ್ಲ. ಭಾರತ ದೇಶಕ್ಕೆ ಮನ್ನಣೆ ಸಂಪಾದಿಸಿಕೊಡಲು ಕುಸ್ತಿಪಟು ಅಪ್ಪ ಮಕ್ಕಳನ್ನು ಕಠಿಣವಾಗಿ ದಂಡಿಸುತ್ತಾನೆ. ಪರಿಸ್ಥಿತಿಯ ಸಂಚಿನಿಂದಾಗಿ ಮಗಳು ಗೆಲ್ಲುವ ಪಂದ್ಯವನ್ನು ನೋಡಲಾಗದೆ ಬಂಧಿಯಾಗಿ ಕುಸಿದ ಆತ ರಾಷ್ಟ್ರಗೀತೆಯನ್ನು ಕೇಳಿ ಪರವಶನಾಗುತ್ತಾನೆ. ಧೋನಿ, ತೆಂಡುಲ್ಕರ್, ಮೇರಿ ಕೋಮ್, ಎಲ್ಲರೂ ಸಾಧನೆ ಮಾಡುವುದು ಭಾರತಕ್ಕಾಗಿಯೇ. ಈ ರಾಷ್ಟ್ರೀಯತೆಯ ಭಕ್ತಿ ಅನೇಕ ಭಾವನಾತ್ಮಕ ದೃಶ್ಯಗಳನ್ನು ಹೆಣೆಯಲು ನೆರವಾಗುತ್ತದೆ. ಪ್ರೇಕ್ಷಕನಲ್ಲಿ ದೇಶಭಕ್ತಿ ಉಕ್ಕಿಸುತ್ತದೆ. ಪರಿಣಾಮವಾಗಿ ಬಾಕ್ಸ್ ಆಫೀಸ್ ಲಕಲಕನೆ ಹೊಳೆಯುತ್ತದೆ. ಹಾಗಾಗಿ ಭಾರತೀಯ ಚಿತ್ರರಂಗ ವಿಶೇಷವಾಗಿ ಹಿಂದಿ ಚಿತ್ರರಂಗ ಸಿನೆಮ್ಯಾಟಿಕ್ ಆದ ಕ್ರೀಡಾ ಕತೆಗಳಿಗೆ ಮುಗಿಬಿದ್ದಿದೆ.

ಈ ರಾಷ್ಟ್ರೀಯತೆಯ ಭಕ್ತಿ, ಆಟಗಾರನ ಬದುಕಿನಿಂದ ಸ್ಫೂರ್ತಿ ಪಡೆದ ‘ಚಕ್ ದೇ ಇಂಡಿಯಾ’ದಂತಹ ಚಿತ್ರವನ್ನು ಸಹ ಬಿಟ್ಟಿಲ್ಲ. 1981ರ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ 1-7 ಗೋಲಿನ ಅಂತರದಿಂದ ಹೀನಾಯ ಸೋಲು ಕಂಡಿತು. ಅಂದಿನ ಪಂದ್ಯದಲ್ಲಿ ಗೋಲ್‌ಕೀಪರ್ ಆಗಿದ್ದ ಕೆ.ಎಲ್. ನೇಗಿ ಭಾರತೀಯರ ಪಾಲಿಗೆ ವಿಲನ್ ಆದರು. ಪಾಕ್ ತಂಡದಿಂದ ಹಣ ಪಡೆದು ಸೋಲಿಗೆ ಕಾರಣರಾದರೆಂದು ಗಾಳಿ ಸುದ್ದಿ ಹರಡಿತು. ಅವರು ಆಟದಿಂದ ನಿರ್ಗಮಿಸಿದರು. ಅವರ ಬದುಕಿನ ಎಳೆಯನ್ನು ಆಧರಿಸಿದ ‘ಚಕ್ ದೇ ಇಂಡಿಯಾ’ದಲ್ಲಿ ಮುಸಲ್ಮಾನನಾದ ನಾಯಕ ನಟ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಗಳಿಸಲು ವಿಫಲನಾಗಿ ಪಾಕಿಸ್ತಾನದ ಹಾಕಿ ತಂಡ ಜಯವಾಗಲು ಕಾರಣನಾಗುತ್ತಾನೆ. ಮುಸಲ್ಮಾನನಾದ್ದರಿಂದ ದೇಶ ದ್ರೋಹ ಪಟ್ಟ ಹೊರುತ್ತಾನೆ. ತಾನು ಪಡೆದ ಬೆಳ್ಳಿ ಪದಕವನ್ನು ಚಿನ್ನದ ಪದಕವಾಗಿ ಪರಿವರ್ತಿಸಲು ಭಾರತದ ಮಹಿಳಾ ತಂಡದ ಕೋಚ್ ಆಗಿ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಿಸುತ್ತಾನೆ. ಭಾರತದ ಬಗೆಗೆ ಬಗೆ ಬಗೆಯ ಭಾಷಣಗಳೂ ಸಾಲು ಸಾಲಾಗಿ ಬರುತ್ತವೆ. ತಾಂತ್ರಿಕವಾಗಿ ಅಚ್ಚುಕಟ್ಟಾದ, ಮೇಲ್ಮಟ್ಟದ ನಿರೂಪಣೆಯ ಈ ಚಿತ್ರ ಕೊನೆಗೂ ನೆಚ್ಚುವುದು ರಾಷ್ಟ್ರಭಕ್ತಿಯನ್ನೇ!

ಆಟಗಾರನ ಬದುಕು ನಿಸ್ಸಂದೇಹವಾಗಿ ಒಂದು ಆಟಕ್ಕೆ ಅರ್ಪಿಸಿಕೊಂಡ, ತಾದಾತ್ಮ್ಯದ ಬದುಕು. ಆತನ/ಅವಳ ಸಾಧನೆಯ ಹಿಂದೆ ಅನೇಕ ಶ್ರಮದ ಕತೆಗಳಿವೆ. ನಾಟಕೀಯ ತಿರುವುಗಳಿರುತ್ತವೆ. ಪದಕವನ್ನು ಪಡೆಯಲು ನಡೆಸುವ ಹೋರಾಟ ಒಬ್ಬೊಬ್ಬರದ್ದೂ ಬೇರೆ ಬೇರೆ ರೀತಿಯಲ್ಲಿ ರೋಚಕವಾಗಿರುತ್ತದೆ. ಸಿನೆಮಾ ನಿರೂಪಣೆಗೆ ತಕ್ಕುದಾದ ಆಸಕ್ತಿದಾಯಕ ಬದುಕಿನ ದ್ರವ್ಯವನ್ನು ಒದಗಿಸಬಲ್ಲ ಕ್ರೀಡಾಪಟುಗಳ ಜೀವನ ಕಥನಗಳು ಜನರನ್ನು ಸೆಳೆಯುತ್ತವೆ. ಮತ್ತೊಂದು ಕಾರಣ ಅವು ಆದರ್ಶ ಮತ್ತು ಅನುಕರಣೀಯ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಪ್ರೇಕ್ಷಕರಿಗೆ ಉಣಬಡಿಸುವುದರಿಂದ ವೀಕ್ಷಕರಲ್ಲಿ ವಿಶೇಷವಾಗಿ ಯುವಜನತೆಯ ನಡುವೆ ಹೆಚ್ಚು ಪ್ರಿಯವಾಗುತ್ತಿವೆ. ಹಾಗಾಗಿ ಅವು ಕೇವಲ ಕ್ರೀಡಾ ಬಯೋಪಿಕ್‌ಗಳಲ್ಲಿ ಕ್ರೀಡೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರೂಪಿಸಿದ ಸ್ಫೂರ್ತಿಯನ್ನು ಉಕ್ಕೇರಿಸುವ ಕಥನಗಳು. ‘ದಂಗಲ್’, ‘ಭಾಗ್ ಮಿಲ್ಕಾ ಭಾಗ್’, ‘ಮೇರಿ ಕೋಮ್’ ಅಂತಹ ಸ್ಫೂರ್ತಿಯುಕ್ಕಿಸುವ ಚಿತ್ರಗಳು. ‘ದಂಗಲ್’ ಅನ್ನು ಕ್ರೀಡಾ ಬಯೋಪಿಕ್ ಎಂದು ಕರೆದರೂ, ಅದು ಕ್ರೀಡೆಯಲ್ಲಿ ಗಂಡು-ಹೆಣ್ಣುಗಳನ್ನು ಸಮಾನವಾಗಿ ನೋಡಬೇಕೆಂಬ ನಿಲುವನ್ನು ಒತ್ತಾಯಿಸುವುದರಿಂದ ಭಿನ್ನವಾಗಿ ನಿಲ್ಲುತ್ತದೆ. ಹಲವೊಮ್ಮೆ ಕ್ರೀಡಾಪಟುಗಳ ಬದುಕನ್ನು ಆಧರಿಸಿದ ಚಿತ್ರಗಳನ್ನು ಬಯೋಪಿಕ್ ಎಂದು ಕರೆಯುವುದು ಅವುಗಳನ್ನು ಅಪಮೌಲ್ಯಗೊಳಿಸಿದಂತೆ. ಏಕೆಂದರೆ ಕ್ರೀಡಾಪಟುವಿನ ಬದುಕು ಮತ್ತು ಆಟದ ಅಂಗಳದಿಂದಾಚೆಗೂ ಅವು ಚಾಚುತ್ತವೆ. ‘ಪಾನ್ ಸಿಂಗ್ ತೋಮರ್’ ಕೇವಲ ಆಟಗಾರನ ಬದುಕಿನ ಕಥನ ಮಾತ್ರವಲ್ಲ. ಭಾರತದಲ್ಲಿ ಅಸಾಮಾನ್ಯ ಆಟಗಾರನಾಗಿ ರೂಪುಗೊಳ್ಳುತ್ತಿದ್ದ ತೋಮರ್ ಸಾಮಾಜಿಕ ವಿಷಮ ವ್ಯವಸ್ಥೆಯಲ್ಲಿ ನಲುಗಿ ಢಕಾಯಿತನಾಗುವ ಕತೆಯಿದು. ದೇಶ ಕಾಯಲು ಹೋದ ನಮ್ಮ ಊಳಿಗಮಾನ್ಯ ಪದ್ಧತಿಯ ಹಳ್ಳಿಗಳು, ಅವುಗಳ ಕೈಗೊಂಬೆಯಾದ ಪೊಲೀಸ್, ನ್ಯಾಯವ್ಯವಸ್ಥೆ ಆತನನ್ನು ಹಂತ-ಹಂತವಾಗಿ ಮಣಿಸುತ್ತದೆ. ಕೊನೆಗೂ ಆತ ಡಕಾಯಿತನಾಗಿ ತನ್ನ ಬದುಕನ್ನು ರೂಪಿಸಿಕೊಳ್ಳಬೇಕಾಯಿತು.

ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಭರಾಟೆ ಸಾಗಿದೆ. ಈಗ ತಾನೆ ಸಾಧನೆ ಮಾಡಿ ಇನ್ನೂ ಮೂವತ್ತು ದಾಟಿಲ್ಲದ ಪಿ.ವಿ. ಸಿಂಧು, ಪರ್ವತಾರೋಹಿ ಮಾಲಾಯತ್, ಮೊದಲಾದ ಯುವ ಕ್ರೀಡಾಪಟುಗಳ ಜೊತೆಗೆ ದಂತಕತೆಯೆನಿಸಿಕೊಂಡ ಹಳೆಯ ತಲೆಮಾರಿನ ಕ್ರೀಡಾಪಟುಗಳ ಬದುಕೂ ತೆರೆಯ ಮೇಲೆ ತರಲು ಅನೇಕರು ಪ್ರಯತ್ನಿಸಿದ್ದಾರೆ. ಕೆಲವು ಸೆಟ್ ಏರಿದರೂ ಪ್ರಗತಿ ಕಾಣದೆ ಕುಸಿದಿವೆ. ಅಂಥವುಗಳಲ್ಲಿ ಹಾಕಿಯ ಮಾಂತ್ರಿಕ ಎಂದೇ ಹೆಸರಾದ ಧ್ಯಾನ್ ಚಂದ್ ಬದುಕನ್ನು ಆಧರಿಸಿದ ಚಿತ್ರ. ಅದ್ದೂರಿಯಾಗಿ ಸೆಟ್ ಏರಿದ ಧ್ಯಾನ್ ಚಂದ್ ನಿರ್ಮಾಣ ಹಂತದಲ್ಲಿಯೇ ಮುಗ್ಗರಿಸಿದೆ. ಹಾಗೆಯೇ ಚರ್ಚೆಗೆ ಬಂದ ಪಿ.ಟಿ. ಉಷಾ ಅವರ ಕತೆಯನ್ನಾಧರಿಸಿದ ಚಿತ್ರವೂ ಸೆಟ್ಟೇರಿಲ್ಲ. ಒಲಿಂಪಿಕ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರ ಬದುಕನ್ನು ಆಧರಿಸಿ ಚಿತ್ರ ರೂಪಿಸಲು ಮಾಡಿದ ಯತ್ನ ಫಲಕಾರಿಯಾಗಲಿಲ್ಲ.
ಅದೇನೇ ಆದರೂ ತಮ್ಮ ಅಂತರಂಗದಲ್ಲಿ ಹುದುಗಿಸಿಕೊಂಡ ನಾಟಕೀಯ ದೃಶ್ಯಗಳನ್ನೊಳಗೊಂಡ ಕ್ರೀಡಾ ಬಯೋಪಿಕ್ ಬಹುತೇಕ ಸಂದರ್ಭಗಳಲ್ಲಿ ಯಶಸ್ಸು ಕಂಡಿವೆ. ಹಾಗಾಗಿ ಬಯೋಪಿಕ್ ಚಿತ್ರಗಳು ಆಳವಾಗಿ ಬೇರೂರಿವೆ.

Writer - ಕೆ.ಪುಟ್ಟಸ್ವಾಮಿ

contributor

Editor - ಕೆ.ಪುಟ್ಟಸ್ವಾಮಿ

contributor

Similar News