#Breaking News: 17 ಶಾಸಕರ ಅನರ್ಹ ಪ್ರಕರಣ: ಸ್ಪೀಕರ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್

Update: 2019-11-13 14:21 GMT

ಹೊಸದಿಲ್ಲಿ,ನ.13: ಕರ್ನಾಟಕದ 17 ಬಂಡಾಯ ಶಾಸಕರ ಅನರ್ಹತೆಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ಎತ್ತಿ ಹಿಡಿದಿದೆ. ಇದೇ ವೇಳೆ ಡಿ.5ರಂದು ನಡೆಯಲಿರುವ ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ಅವರಿಗೆ ಹಸಿರು ನಿಶಾನೆಯನ್ನು ತೋರಿಸಿದೆ.

ತಮ್ಮನ್ನು ಅನರ್ಹಗೊಳಿಸಿದ್ದ ಮತ್ತು ಪಕ್ಷಾಂತರ ನಿಷೇಧ ಕಾಯ್ದೆಯಡಿ 2023ರಲ್ಲಿ ಹಾಲಿ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೂ ತಾವು ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದ ಸ್ಪೀಕರ್ ನಿರ್ಧಾರದ ವಿರುದ್ಧ ಈ ಶಾಸಕರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಶಾಸಕರ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್.ವಿ.ರಮಣ,ಸಂಜೀವ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು,ಅನರ್ಹತೆ ಕುರಿತು ಸ್ಪೀಕರ್ ಆದೇಶವನ್ನು ನಾವು ಎತ್ತಿ ಹಿಡಿಯುತ್ತೇವೆ ಎಂದು ಹೇಳಿತು.

ರಾಜೀನಾಮೆಗಳ ಸಿಂಧುತ್ವವು ಪ್ರತಿ ಪ್ರಕರಣದ ವಾಸ್ತವಾಂಶಗಳು/ಸಂದರ್ಭಗಳನ್ನು ಅವಲಂಬಿಸಿರುತ್ತದೆ ಮತ್ತು ಸಂವಿಧಾನದ 10ನೇ ಅನುಸೂಚಿಯಡಿ ವಿಧಾನಸಭೆಯ ಅವಧಿ ಅಂತ್ಯಗೊಳ್ಳುವವರೆಗೆ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ ಗೆ ಅಧಿಕಾರವಿಲ್ಲ ಎಂದೂ ನ್ಯಾಯಾಲಯವು ಸ್ಪಷ್ಟಪಡಿಸಿತು.

 ಅನರ್ಹ ಶಾಸಕರು ಉಪಚುನಾವಣೆಗಳಲ್ಲಿ ಗೆದ್ದು ಬಂದರೆ ಅವರು ಸಚಿವ ಹುದ್ದೆ ಅಥವಾ ಲಾಭದಾಯಕ ಹುದ್ದೆಯನ್ನು ಪಡೆಯಬಹುದು,ಆದರೆ ಸದ್ಯಕ್ಕೆ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದ ನ್ಯಾಯಾಲಯವು,ತನ್ನ ತೀರ್ಪು ಪ್ರಕರಣದ ವಾಸ್ತವಾಂಶಗಳು ಹಾಗೂ ಸಂದರ್ಭಗಳನ್ನು ಆಧರಿಸಿದೆ ಮತ್ತು ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿತು.

ಅನರ್ಹ ಶಾಸಕರು ಮೊದಲು ಉಚ್ಚ ನ್ಯಾಯಾಲಯದ ಮೊರೆ ಹೋಗದೇ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಕ್ಕೆ ಪೀಠವು ಅಸಮಾಧಾನವನ್ನೂ ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News