ಸಂಸತ್ತಿನೆಡೆಗೆ ಜೆಎನ್​ಯು ವಿದ್ಯಾರ್ಥಿಗಳ ಜಾಥಾ: ಪೊಲೀಸರಿಂದ ತಡೆ

Update: 2019-11-18 17:14 GMT
Photo: ANI

ಹೊಸದಿಲ್ಲಿ, ನ. 18: ಹಾಸ್ಟೆಲ್ ಶುಲ್ಕ ಏರಿಕೆಯನ್ನು ಸಂಪೂರ್ಣವಾಗಿ ಹಿಂದೆ ತೆಗೆಯುವಂತೆ ಆಗ್ರಹಿಸಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಸಾವಿರಾರು ವಿದ್ಯಾರ್ಥಿಗಳು ಚಳಿಗಾಲದ ಅಧಿವೇಶನದ ಮೊದಲನೇ ದಿನವಾದ ಸೋಮವಾರ ಸಂಸತ್ತಿಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಈ ರ್ಯಾಲಿಯನ್ನು ದಿಲ್ಲಿ ಪೊಲೀಸರು ಹಲವು ಕಡೆ ತಡೆದಿದ್ದಾರೆ. ಕೆಲವು ಕಡೆ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕೆಲವು ಕಡೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಳೆದ ಮೂರು ವಾರಗಳಿಂದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆಯುವಂತೆ ಆಗ್ರಹಿಸಿ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡು, ಘೋಷಣೆಗಳನ್ನು ಕೂಗುತ್ತಾ ರ್ಯಾಲಿ ಆರಂಭಿಸಿದ್ದರು. ವಿದ್ಯಾರ್ಥಿಗಳ ರ್ಯಾಲಿಯ ಹಿನ್ನೆಲೆಯಲ್ಲಿ ಕ್ಯಾಂಪಸ್‌ನ ಹೊರಗಡೆ 1,200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಸಂಸತ್ತಿನ ಹೊರಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

 ದಕ್ಷಿಣ ದಿಲ್ಲಿಯಲ್ಲಿರುವ ವಿಶ್ವವಿದ್ಯಾನಿಲಯದ ಮುಖ್ಯ ಗೇಟ್‌ನಿಂದ ಸುಮಾರು 600 ಮೀಟರ್ ದೂರದಲ್ಲಿರುವ ಬಾಬಾ ಗಂಗಾನಾಥ್ ಮಾರ್ಗದಲ್ಲಿ ಪೊಲೀಸರು ನೂರಾರು ವಿದ್ಯಾರ್ಥಿಗಳನ್ನು ತಡೆದರು. ರ್ಯಾಲಿ ಮುಂದುವರಿಸುವ ಸೂಚನೆ ಹಿನ್ನೆಲೆಯಲ್ಲಿ ಹಲವು ನಾಯಕರನ್ನು ವಶಕ್ಕೆ ಪಡೆದುಕೊಂಡರು. ಆರಂಭದಲ್ಲಿ ಜೆಎನ್‌ಯು ಗೇಟ್‌ನ ಹೊರಗೆ ಇದ್ದ ತಡೆಬೇಲಿಗಳನ್ನು ತೆರವುಗೊಳಿಸಲಾಗಿತ್ತು ಹಾಗೂ ವಿದ್ಯಾರ್ಥಿಗಲಿಗೆ ರ್ಯಾಲಿ ನಡೆಸಲು ಅವಕಾಶ ನೀಡಲಾಗಿತ್ತು.

 ಆದರೆ, ವಿದ್ಯಾರ್ಥಿಗಳು ಲೋಧಿ ರಸ್ತೆಯ ಸಮೀಪದ ಸಫ್ದರ್‌ಜಂಗ್ ಗೋರಿಗೆ ವರೆಗೆ ರ್ಯಾಲಿ ನಡೆಸಿದರು. ಪ್ರತಿಭಟನಕಾರರೊಂದಿಗೆ ದಿಲ್ಲಿ ಪೊಲೀಸರು ಮಾತುಕತೆ ನಡೆಸಲು ಪ್ರಯತ್ನಿಸಿದರು. ಆದರೆ, ಯಾವುದೇ ತೀರ್ಮಾನಕ್ಕೆ ತಲುಪದ ಹಿನ್ನೆಲೆಯಲ್ಲಿ ಪ್ರತಿಭಟನಕಾರರನ್ನು ಮತ್ತೆ ತಡೆಯಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ರ್ಯಾಲಿ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಇದರಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪೊಲೀಸರ ಲಾಠಿಚಾರ್ಜ್‌ನಿಂದ ಗಾಯಗೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಲಾಯಿತು.

 ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸಂಸತ್ತಿನ ಸಮೀಪದ ಮೂರು ದಿಲ್ಲಿ ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಯಿತು. ಇದರಿಂದ ಉದ್ಯೋಗ್ ಭವನ್ ಹಾಗೂ ಪಟೇಲ್ ಚೌಕ್ ನಿಲ್ದಾಣದಲ್ಲಿ ರೈಲುಗಳು ನಿಲ್ಲಲಿಲ್ಲ.

ಮಂಡೇಲಾ ಮಾರ್ಗ್, ಅರಬಿಂದೋ ಮಾರ್ಗ್ ಹಾಗೂ ಬಾಬಾ ಗಂಗಾನಾಥ್ ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ದಿಲ್ಲಿ ಪೊಲೀಸರು ಪ್ರತಿಭಟನಕಾರರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರ ವಿರುದ್ಧ ಘೋಷಣೆಗಳು ಪ್ರತಿಧ್ವನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News