ಕನ್ನಡ್ ಗೊತ್ತಿಲ್ಲ: ಇಲ್ಲಿ ಕನ್ನಡ ಗೊತ್ತಿದ್ದರೆ ಆಪತ್ತಿಲ್ಲ..!

Update: 2019-11-23 18:32 GMT

 ನವೆಂಬರ್‌ನಲ್ಲಿ ಕನ್ನಡ ಅಭಿಮಾನದ ಚಿತ್ರಗಳು ತೆರೆಗೆ ಬರುವುದು ಸಾಮಾನ್ಯ. ಅವುಗಳ ನಡುವೆ ಕನ್ನಡವನ್ನೇ ಕನ್ನಡ್ ಎಂದು ಬರೆದಿರುವ ಈ ಚಿತ್ರ ಶೀರ್ಷಿಕೆಯಿಂದಲೇ ಪ್ರಥಮ ಆಕರ್ಷಣೆ ಮೂಡಿಸಿದೆ. ಬೆಂಗಳೂರಿನಲ್ಲಿ ಇರುವವರಿಗೆ ಕನ್ನಡವನ್ನು ‘ಕನ್ನಡ್’ ಎಂದು ಉಚ್ಚರಿಸುವವರ ಬಗ್ಗೆ ತಿಳಿದೇ ಇದೆ. ಪರಭಾಷೆಯ ಮಂದಿ ಕನ್ನಡ ಭಾಷೆ ಕಲಿಯುವುದು ಬಿಡಿ, ಭಾಷೆಯ ಹೆಸರನ್ನು ಕೂಡ ಸರಿಯಾಗಿ ಹೇಳಲಾರರು ಎನ್ನುವಾಗ ಪ್ರತಿಯೊಬ್ಬ ಕನ್ನಡಿಗನಲ್ಲಿ ಮೂಡುವ ಆತಂಕವೇ ಚಿತ್ರವಾಗಿ ತೆರೆಗೆ ಬಂದಿದೆ. ಬೆಂಗಳೂರು ನಗರದಲ್ಲಿ ಕೆಲಸದಲ್ಲಿದ್ದುಕೊಂಡು ಪರಭಾಷೆ ಮಾತನಾಡುವ ಒಂದಷ್ಟು ಮಂದಿ ಕಾಣೆಯಾಗುತ್ತಾ ಹೋಗುತ್ತಾರೆ. ಆದರೆ ಅವರೆಲ್ಲ ಒಬ್ಬನೇ ಕ್ಯಾಬ್ ಡ್ರೈವರ್‌ನ ಕಾರಲ್ಲಿ ಪ್ರಯಾಣಿಸಿ ಕಾಣಿಸಿಕೊಂಡಿದ್ದೇ ಅಂತಿಮ ಎನ್ನುವುದನ್ನು ನಮಗೆ ತೋರಿಸಲಾಗಿದೆ. ಆತನನ್ನು ಹಿಡಿದಾಗ ಅದರ ಹಿಂದೆ ಆತನ ಬಾಮೈದನ ಕೈವಾಡ ಇರುವುದು ಬೆಳಕಿಗೆ ಬರುತ್ತದೆ. ಆದರೆ ಬಾಮೈದನ ಹಿಂದಿನ ಕೈ ಯಾರದು ಎನ್ನುವುದೇ ಚಿತ್ರದ ಪ್ರಮುಖ ಅಂಶ.

ಪ್ರೇಕ್ಷಕನ ಪ್ರಾಥಮಿಕ ಸಂದೇಹವಾಗಿ ಕಾಡುವ ಯಾವ ಪಾತ್ರಗಳು ಕೂಡ ಈ ಕೃತ್ಯವನ್ನು ಮಾಡಿರುವುದಿಲ್ಲ. ಮಾತ್ರವಲ್ಲ, ಈ ಅಪಹರಣಗಳಿಗೆ ಅವರು ಕನ್ನಡ ಕಲಿಯದಿರುವುದು ಒಂದೇ ಕಾರಣವಲ್ಲ ಎನ್ನುವುದರ ಜತೆಗೆ ಆ ಅಪಹರಣಕಾರ ಯಾರು ಎನ್ನುವುದೇ ಚಿತ್ರದ ಪ್ರಮುಖ ಅಂಶ. ಚಿತ್ರಕ್ಕೆ ಕತೆ ಸಂಭಾಷಣೆಯನ್ನು ಬರೆದು, ಎಸಿಪಿಯಾಗಿ ನಟಿಸಿರುವ ಮಯೂರ ರಾಘವೇಂದ್ರ ಪ್ರಥಮ ಪ್ರಯತ್ನದಲ್ಲೇ ಮೆಚ್ಚುಗೆ ಪಡೆಯುತ್ತಾರೆ. ಸ್ಪೆಷಲ್ ಇಂಟಲಿಜನ್ಸ್ ಅಧಿಕಾರಿ ಶ್ರುತಿ ಚಕ್ರವರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ವಿಪರ್ಯಾಸ ಏನೆಂದರೆ ಅವರೇ ಚಿತ್ರದ ಪ್ರಮುಖ ಮೈನಸ್ ಎಂದು ಹೇಳಬಹುದು. ಈಗಾಗಲೇ ತಮ್ಮ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಹರಿಪ್ರಿಯಾ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ತಮ್ಮ ಮ್ಯಾನರಿಸಮ್ ಮತ್ತು ಕಂಠದಿಂದ ನ್ಯಾಯ ಒದಗಿಸಿಲ್ಲ ಎಂದು ಹೇಳಲೇಬೇಕು. ಅತಿಥಿ ಪಾತ್ರದಂತೆ ಬಂದು ಹೋಗುವ ಸುಧಾರಾಣಿ ಯುನಿಫಾರ್ಮ್ ಇಲ್ಲದೆಯೂ ಪೊಲೀಸ್ ಖದರ್ ತೋರಿಸಿದ್ದಾರೆ. ಅವರದೇ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದರೆ ಇನ್ನಷ್ಟು ಗಟ್ಟಿತನದಿಂದ ಕಾಣಿಸುತ್ತಿತ್ತೇನೋ ಅನಿಸದಿರದು.

ಕ್ಯಾಬ್ ಡ್ರೈವರ್ ಆಗಿ ಧರ್ಮಣ್ಣ ತಮ್ಮ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಮಜಾ ಟಾಕೀಸ್ ಪವನ್ ಅವರ ಪಾತ್ರದಲ್ಲಿನ ಪ್ರಾಮುಖ್ಯತೆ ಚಿತ್ರದ ಕೊನೆಯಲ್ಲಿ ತೆರೆದುಕೊಳ್ಳುತ್ತದೆ. ಚಿತ್ರದ ಹಾಡುಗಳು, ಮೈ ರೋಮಾಂಚನಗೊಳಿಸುವ ನಕುಲ್ ಅಕುಲ್ ಅಭ್ಯಂಕರ್ ಸಂಗೀತದಲ್ಲಿ ಹರಿಪರಾಕ್ ರಚನೆ ಕನ್ನಡ್ ಗೊತ್ತಿಲ್ಲ ಗೀತೆ ಕನ್ನಡದ ಹುರುಪು ತುಂಬುವಂತಿದೆ. ಆದರೆ ರಘು ದೀಕ್ಷಿತ್ ಗಾಯನದಲ್ಲಿರುವ ಈ ಗೀತೆ ಪರದೆಯ ಮೇಲೆ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ ಎನ್ನುವುದು ವಿಪರ್ಯಾಸ. ಬಿಗ್ ಬಾಸ್ ಫೇಮ್ ಜಯಶ್ರೀ, ಗಾಯಕಿ ಸ್ಪರ್ಶಾ ಸೇರಿದಂತೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ ಕಲಾವಿದರು ಕೂಡ ತಮ್ಮ ಪಾತ್ರಗಳ ವೈವಿಧ್ಯತೆಯಿಂದಾಗಿ ನೆನಪಲ್ಲಿ ಉಳಿಯುತ್ತಾರೆ. ‘ಕನ್ನಡ ಮಾತನಾಡದ ಪರಭಾಷಿಕರನ್ನು ಶಿಕ್ಷೆಗೆ ಒಳಪಡಿಸುವುದು ಖಂಡಿತವಾಗಿ ಸಮರ್ಥನೀಯವಲ್ಲ’ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅದೇ ವೇಳೆ ಕರ್ನಾಟಕದಲ್ಲಿದ್ದುಕೊಂಡು ವೃತ್ತಿ ಮಾಡುವವರು, ಬದುಕುವವರು ಕನ್ನಡದ ಬಗ್ಗೆ ಅಸಡ್ಡೆ ತೋರದೆ, ಭಾಷೆ ಕಲಿಯುವ ಕಡೆಗೆ ಒಲವು ತೋರಿಸಬೇಕು ಎನ್ನುವುದನ್ನು ತುಂಬ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಹಾಗಾಗಿ ಕನ್ನಡ ಪ್ರಿಯರು ಅದರಲ್ಲಿಯೂ ಬೆಂಗಳೂರು ನಿವಾಸಿಗಳು ನೋಡಬೇಕಾದ ಚಿತ್ರ ಇದು ಎಂದು ಹೇಳಬಹುದು.

ತಾರಾಗಣ: ಹರಿಪ್ರಿಯಾ, ಸುಧಾರಾಣಿ, ಧರ್ಮಣ್ಣ, ಪವನ್
ನಿರ್ದೇಶನ: ಮಯೂರ ರಾಘವೇಂದ್ರ
ನಿರ್ಮಾಣ: ಕುಮಾರ ಕಂಠೀರವ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News