ಜಮ್ಮು ಕಾಶ್ಮೀರ: ಪ್ರಥಮ ಬಾರಿಗೆ ಸಂವಿಧಾನ ದಿನಾಚರಣೆ

Update: 2019-11-26 17:42 GMT

ಜಮ್ಮು, ನ.26: ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊತ್ತಮೊದಲ ಬಾರಿಗೆ ಸಂವಿಧಾನ ದಿನವನ್ನು ಆಚರಿಸಲಾಗಿದ್ದು ಲೆಫ್ಟಿನೆಂಟ್ ಗವರ್ನರ್ ಗಿರೀಶ್‌ಚಂದ್ರ ಮುರ್ಮು ಸಂವಿಧಾನದ ಪೀಠಿಕೆಯನ್ನು ಓದಿ ಹೇಳಿದರು.

  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜಮ್ಮುವಿನಲ್ಲಿರುವ ವಿಧಾನಸಭಾ ಸಂಕೀರ್ಣದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು. ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರ ಫಾರೂಖ್ ಖಾನ್, ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ, ಆಡಳಿತ ವಿಭಾಗದ ಕಾರ್ಯದರ್ಶಿಗಳು, ಅಧಿಕಾರಿಗಳು ಕಾರ್ಯಾಲಯದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಎಲ್ಲಾ ಜಿಲ್ಲಾಧಿಕಾರಿಗಳು, ಉಪ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು, ತಮ್ಮ ಕಚೇರಿಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಲ್ಲಿ ಹಾಗೂ ಜನತೆಯನ್ನು ಒಗ್ಗೂಡಿಸುವಲ್ಲಿ ಸಂವಿಧಾನ ನಿರ್ಮಾತೃಗಳ ಕೊಡುಗೆ ಹಾಗೂ ಪರಿಶ್ರಮವನ್ನು ಸ್ಮರಿಸಿದರು.

  ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೂಲಭೂತ ಕರ್ತವ್ಯವನ್ನು ನಿರ್ವಹಿಸುವುದಾಗಿ ಸರಕಾರಿ ಕಚೇರಿ ಸಹಿತ ಎಲ್ಲಾ ಸಂಸ್ಥೆಗಳಲ್ಲಿ ಸಿಬಂದಿಗಳು ಪ್ರಮಾಣ ವಚನ ಸ್ವೀಕರಿಸಿದರು. ಈ ದಿನದ ಅಂಗವಾಗಿ ಮೂಲಭೂತ ಕರ್ತವ್ಯ ನೆನಪಿಸುವ ಉದ್ದೇಶದಿಂದ ದೇಶಾದ್ಯಂತ ಸಂಚರಿಸುವ ಅಭಿಯಾನಕ್ಕೆ ಜಮ್ಮುವಿನಲ್ಲಿ ಚಾಲನೆ ದೊರಕಿದ್ದು ಅಂಬೇಡ್ಕರ್ ಅವರ ಜನ್ಮದಿನವಾದ ಎಪ್ರಿಲ್ 14ರಂದು ಸಮಾಪನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News