ಸ್ಪೇನ್‌ನಲ್ಲಿ ಹವಾಮಾನ ಶೃಂಗಸಭೆ ಭಾರತದ ನಿಲುವಿಗೆ ಸಂಪುಟದ ಅನುಮೋದನೆ

Update: 2019-11-27 16:15 GMT

ಹೊಸದಿಲ್ಲಿ, ನ.27: ಸ್ಪೇನ್‌ನಲ್ಲಿ ಮುಂದಿನವಾರ ನಡೆಯಲಿರುವ ಹವಾಮಾನ ಕುರಿತ ವಿಶ್ವಸಂಸ್ಥೆಯ 25ನೇ ಸಮಾವೇಶದಲ್ಲಿ ಭಾರತ ತೆಗೆದುಕೊಳ್ಳಲಿರುವ ನಿಲುವಿಗೆ ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆಯನ್ನು ನೀಡಿದೆ.

ಹವಾಮಾನ ಬದಲಾವಣೆಯ ಸಮಸ್ಯೆಗೆ ಸಂಬಂಧಿಸಿ ಅಭಿವೃದ್ಧಿ ಹೊಂದಿದ ದೇಶಗಳು 2020ರೊಳಗೆ ತಮ್ಮ ಬದ್ಧತೆಗಳನ್ನು ಈಡೇರಿಸಬೇಕಾದ ಅವಶ್ಯಕತೆಗಳ ಬಗ್ಗೆ ಭಾರತವು ಸಮಾವೇಶದಲ್ಲಿ ಹೆಚ್ಚು ಒತ್ತು ನೀಡಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.

ಡಿಸೆಂಬರ್ 2ರಿಂದ13ರವರೆಗೆ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ವಹಿಸಲಿದ್ದಾರೆ.

ಹವಾಮಾನ ಬದಲಾವಣೆ ಕುರಿತಂತೆ ಭಾರತದ ನಾಯಕತ್ವವು ಎದ್ದು ಕಾಣುತ್ತಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಅದಕ್ಕೆ ಮಾನ್ಯತೆ ದೊರೆತಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಆತಂಕಗಳಿಗೆ ಸ್ಪಂದಿಸಲು ಪ್ರಧಾನಿಯವರ ನೇತೃತ್ವದಲ್ಲಿ ಭಾರತ ಸರಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಹವಾಮಾನ ಬದಲಾವಣೆ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಭಾರತದ ಬದ್ಧತೆ ಹಾಗೂ ಆಕಾಂಕ್ಷೆಯನ್ನು ಈ ಉಪಕ್ರಮಗಳು ಪ್ರತಿಬಿಂಬಿಸುತ್ತವೆ ಎಂದು ಪರಿಸರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಆಯೋಜಿಸಿದ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಪುನರ್‌ನವೀಕರಣ ಯೋಗ್ಯ ಇಂಧನದ ಉತ್ಪಾದನೆಯನ್ನು 450 ಗಿಗಾವ್ಯಾಟ್‌ಗಳವರೆಗೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿರುವುದಾಗಿ ಘೋಷಿಸಿದ್ದರು.

ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ (ಐಎಸ್‌ಎ) ಮೂಲಕ ಸೌರ ಇಂಧನ ಸಾಮರ್ಥ್ಯವನ್ನು ಹೆಚ್ಚಿಲು ಜಗತ್ತು ನಡೆಸುತ್ತಿರುವ ಪ್ರಯತ್ನವನ್ನು ಭಾರತ ಮುನ್ನಡೆಸುತ್ತಿದೆಯೆಂದು ಎಂದು ಕೇಂದ್ರ ಪರಿಸರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News