ಇಸ್ರೇಲಿಗಳಿಗೆ ಸಾಧ್ಯವಾಗಿದ್ದನ್ನು ನಾವೂ ಮಾಡಬಲ್ಲೆವು: ಕಾಶ್ಮೀರಿ ಪಂಡಿತರ ವಾಪಸಾತಿಯ ಕುರಿತು ರಾಜತಾಂತ್ರಿಕ ಚಕ್ರವರ್ತಿ

Update: 2019-11-27 17:17 GMT
 Vivek Agnihotri/Facebook

ಹೊಸದಿಲ್ಲಿ, ನ.27: ಯೆಹೂದಿಗಳು ತಮ್ಮ ತಾಯ್ನಾಡು ಇಸ್ರೇಲ್‌ಗೆ ಮರಳಲು ಸಾಧ್ಯವಾಗಿದೆ. ಹಾಗಿದ್ದರೆ ಕಾಶ್ಮೀರಿ ಪಂಡಿತರು ತಮ್ಮ ತಾಯ್ನಾಡಿಗೆ ಮರಳಲು ಯಾಕೆ ಸಾಧ್ಯವಾಗದು ಎಂದು ನ್ಯೂಯಾರ್ಕ್ ನಗರದಲ್ಲಿ ಭಾರತದ ಕಾನ್ಸಲ್ ಜನರಲ್ ಆಗಿರುವ ಸಂದೀಪ್ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ.

ಯೆಹೂದಿಗಳು ಸುಮಾರು 2000 ವರ್ಷ ಮಾತೃಭೂಮಿಯಿಂದ ದೂರವಿದ್ದರೂ ತಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಿದ್ದರು. ನಾವು ಕೂಡಾ ಕಾಶ್ಮೀರಿ ಸಂಸ್ಕೃತಿಯನ್ನು ಜೀವಂತವಾಗಿರಿಸಬೇಕಿದೆ. ಕಾಶ್ಮೀರಿ ಸಂಸ್ಕೃತಿ ಭಾರತೀಯ ಸಂಸ್ಕೃತಿಯಾಗಿದೆ. ಇದು ಹಿಂದು ಸಂಸ್ಕೃತಿಯಾಗಿದೆ. ಕಾಶ್ಮೀರವಿಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲು ಯಾರಿಂದಲೂ ಆಗದು ಎಂದು ಸಂದೀಪ್ ಚಕ್ರವರ್ತಿ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಾಶ್ರಿತರ ಶಿಬಿರದಲ್ಲಿ ನೆಲೆಸಿರುವ ನಮ್ಮ ಕಾಶ್ಮೀರಿ ಜನರು ತಮ್ಮ ತಾಯ್ನಾಡಿಗೆ, ಮಾತೃಭೂಮಿಗೆ ಮರಳುವ ದಿನ ಬರುತ್ತದೆ ಎಂದು ಆಶಿಸುತ್ತಿದ್ದೆ. ಈಗ ಆ ದಿನ ಬಂದಿದೆ. ಕಾಶ್ಮೀರಿ ಪಂಡಿತರು ತಮ್ಮ ಮಾತೃಭೂಮಿಗೆ ಮರಳಬೇಕು. ನರೇಂದ್ರ ಮೋದಿ ಸರಕಾರ ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ವೀಡಿಯೊ ದೃಶ್ಯಾವಳಿ ವೈರಲ್ ಆಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯವಾಗಿದೆ. ಆದರೂ ಕೆಲವರು ಈ ನಿರ್ಧಾರದಿಂದ ಕಂಗೆಟ್ಟು ಇದನ್ನು ಮಾನವ ಹಕ್ಕುಗಳ ಸಮಿತಿ, ಅಮೆರಿಕದ ಸಂಸತ್ತಿನವರೆಗೆ ಕೊಂಡೊಯ್ದರು. ಇವರಿಗೆ ಸಿರಿಯಾ, ಇರಾಕ್ ಅಥವಾ ಅಪಘಾನಿಸ್ತಾನದಲ್ಲಿ ಆಗುತ್ತಿರುವ ವಿದ್ಯಮಾನದ ಅರಿವಿಲ್ಲವೇ ಎಂದವರು ಪ್ರಶ್ನಿಸಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕತೆ ಮತ್ತು ಹಿಂಸಾಚಾರ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಅತೀ ಶೀಘ್ರವೇ ಸಹಜಸ್ಥಿತಿಗೆ ಮರಳಲಿದ್ದು ಆಗ ನಿರಾಶ್ರಿತರಿಗೆ ತಾಯ್ನಾಡಿಗೆ ಮರಳಲು ಅವಕಾಶ ದೊರಕುತ್ತದೆ ಎಂದವರು ಹೇಳಿದ್ದಾರೆ. ಸಿನೆಮಾ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ಈ ಕಾರ್ಯಕ್ರಮದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಚಕ್ರವರ್ತಿಯ ಹೇಳಿಕೆಯ ವೀಡಿಯೊ ಹಾಗೂ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ಪ್ರಧಾನಿ ಇಮ್ರಾನ್‌ಖಾನ್, ಈ ವರದಿ ಭಾರತ ಸರಕಾರದಲ್ಲಿರುವ ಆರೆಸ್ಸೆಸ್ ಸಿದ್ಧಾಂತದ ಫ್ಯಾಸಿಸ್ಟ್ ಮನೋಭಾವವನ್ನು ಬಿಂಬಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News